ಬಳ್ಳಾರಿ / ಕಂಪ್ಲಿ : ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಮಿಡಿಯುತ್ತಿರುವ ಶಾಸಕ ಜೆ.ಎನ್.ಗಣೇಶಗೆ ಡಿ.ಕೆ.ಶಿವುಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ನೀಡಬೇಕು, ಮತ್ತು ಅಲ್ಪಸಂಖ್ಯಾತ ಮೀಸಲಾತಿಯಲ್ಲಿ ಸಚಿವ ಝಡ್ ಜಮೀರ್ ಅಹ್ಮದ್ ಇವರಿಗೆ ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಬೇಕೆಂದು ಕಂಪ್ಲಿ ಪುರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಉಸ್ಮಾನ್ ಒತ್ತಾಯಿಸಿದರು.
ಅವರು ಸೋಮವಾರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹಿಂದಿನ ಎರಡು ಅವಧಿಯಲ್ಲಿ ಸುರೇಶಬಾಬು ಶಾಸಕರಾಗಿದ್ದರು. 2013ರಲ್ಲಿ ಜೆ.ಎನ್.ಗಣೇಶ ಅವರು ಪಕ್ಷೇತರವಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದರ ನಡುವೆ ಕುಗ್ಗದೇ, ಆತ್ಮ ಸ್ಥೈರ್ಯದಿಂದ ಗಣೇಶ ಅವರೊಂದಿಗೆ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಬಲಗೊಳಿಸಿ, 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗಣೇಶ ಹೊರ ಹೊಮ್ಮಿದರು. ಕ್ಷೇತ್ರದ ಪ್ರತಿ ಮನೆಯ ಮಗನಾಗಿ ಕೆಲಸ ಮಾಡುತ್ತಾ ಬಂದಿದ್ದು, ಇದರಿಂದ ಎರಡನೇ ಬಾರಿಗೆ ಅತಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಿ, ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಭಿವೃದ್ಧಿಯಲ್ಲಿ ಗಣೇಶ ಮುಂಚೂಣಿಯಲ್ಲಿದ್ದಾರೆ. ರಾಜ್ಯದ ಶಾಸಕರಲ್ಲಿ ಅತಿ ಹೆಚ್ಚಾಗಿ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿ್ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಆದ್ದರಿಂದ ಕ್ಷೇತ್ರ ಸೇರಿದಂತೆ ಜಿಲ್ಲಾ ಮತ್ತು ರಾಜ್ಯದಲ್ಲಿ ಮತ್ತಷ್ಟು ಜನರ ಸೇವೆ ಮಾಡಲು ಗಣೇಶ ಇವರಿಗೆ ಸಚಿವ ಸ್ಥಾನ ನೀಡಬೇಕು. ಮತ್ತು ರಾಜ್ಯದಲ್ಲಿ ಜನರೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಇವರಿಗೆ ಡಿಸಿಎಂ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















