ಕೊರಳಿಗೆ ಹಾಕಿದ ಸುಗಂಧರಾಜ ಹಾರ ಗೋಡೆಯಲಿತ್ತು
ಮರುದಿನದಿ ಮುದುಡಿ ತಲೆಬಾಗಿ ಅಲ್ಲಿಯೇ ಸೊರಗಿತ್ತು
ಬೆರೆಳುಗಳು ಹಸಿರ ತೊಟ್ಟುಗಳ ಕತ್ತರಿಸಿ ಸಂಗ್ರಹಿಸಿತ್ತು
ಹರಿವಾಣದಿ ಹರಡಿ ಕೈತೋಟದ ಪಾತಿಯ ಮಾಡಿತ್ತು
ಸುತ್ತಲೂ ತಾಜಾ ಬೆಂಡೆಯಲಿ ಗಿಡಗಳನು ಮೂಡಿಸಿತ್ತು
ಬಿಸುಟಿದ್ದ ಕಿತ್ತಳೆ ಸಿಪ್ಪೆಯಲಿ ಹೂಗಳನು ಜೋಡಿಸಿತ್ತು
ಮೇಲೆರಡು ದೊಡ್ಡ ಬೆಂಡೆಯ ಪುಷ್ಪಗಳ ಅರಳಿಸಿತ್ತು
ಸುಲಲಿತ ಚಿತ್ತಾರಕೆ ಕಾವ್ಯದಾ ಸಾಲುಗಳ ಪೋಣಿಸಿತ್ತು
ಈ ವಿಸ್ಮಯವ ಜಂಗಮವಾಣಿಯಲಿ ಸೆರೆಹಿಡಿದಿತ್ತು
ಅರುಣೋದಯದಲಿ ಸದಭಿಮಾನಿಗಳಿಗೆ ಅರ್ಪಿಸಿತ್ತು
- ಲಲಿತಾ ಕೆ ಆಚಾರ್, ಬೆಂಗಳೂರು




















