ಬಳ್ಳಾರಿ / ಕಂಪ್ಲಿ : ಪುರಸಭೆ ವ್ಯಾಪ್ತಿಯ ಕಸವನ್ನು ನಿತ್ಯವೂ ಸಂಗ್ರಹಿಸಿ ಕೊಂಡೊಯ್ಯಲಾಗುತ್ತದೆ. ವಾಹನಗಳಲ್ಲಿ ಹಸಿ ಕಸ, ಒಣಕಸ ವಿಂಗಡಿಸಿಕೊಂಡು ತೆಗೆದುಕೊಂಡು ಹೋಗಿ ಏನು ಮಾಡುತ್ತಾರೆ? ಕಸದ ವಿಲೇ ಹೇಗಾಗುತ್ತದೆ? ಉಳಿಕೆ ಕಸ ಏನಾಗುತ್ತದೆ? ಇತ್ಯಾದಿ ವಿಚಾರಗಳಿಗೆ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷವಾದ ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಂಪ್ಲಿ ಪುರಸಭೆ ವತಿಯಿಂದ ಸ್ವಚ್ಛ ಭಾರತ ಅಭಿಯಾನ 2.0 ಅಭಿಯಾನದ ಹಿನ್ನಲೆ ಶಾಲಾ ಮಕ್ಕಳಿಗೆ ಸಮೀಪದ ಬಳಿಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜರುಗುವ ಕಸ ವಿಲೇವಾರಿ ಕುರಿತು ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಅರಿವು ಮೂಡಿಸಲಾಯಿತು.
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕರು ಜಿ. ಪ್ರಕಾಶ್ ಬಾಬು ಮಾತನಾಡಿ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿಯ ಬಗ್ಗೆ ವಿದ್ಯಾರ್ಥಿಗಳು ಅರಿವು ಮೂಡಿಸಿಕೊಳ್ಳಬೇಕು. ಸುಂದರ ನಗರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರವೂ ಪ್ರಮುಖವಾಗುತ್ತದೆ. ಪ್ರತಿನಿತ್ಯ ಪಟ್ಟಣದ ವ್ಯಾಪ್ತಿಯಿಂದ 10 ರಿಂದ 12 ಟನ್ ಕಸ ಇಲ್ಲಿಗೆ ಬರುತ್ತಿದ್ದು ಅವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಯಂತ್ರಗಳ ಸಹಾಯದಿಂದ ವಿಂಗಡನೆ ಮಾಡಲಾಗುತ್ತದೆ. ದಿನಕ್ಕೆ 4 ಟನ್ ಹಸಿ ಕಸ ಬರುತ್ತಿದ್ದು ಅವುಗಳನ್ನು ಕೂಡ ವ್ಯವಸ್ಥಿತವಾಗಿ ಬೇರ್ಪಡಿಸಿ, 45 ದಿನಗಳ ಕಾಲ ವೈಜ್ಞಾನಿಕ ಮಾದರಿಯಲ್ಲಿ ಇರಿಸಿ ಗೊಬ್ಬರವನ್ನಾಗಿ ಪರಿವರ್ತನೆ ಮಾಡಿ ಕೃಷಿಕರಿಗೆ ಮಾರಾಟ ಮಾಡಲಾಗುತ್ತದೆ. ಕಸವನ್ನು ಉತ್ಕೃಷ್ಟ ಗೊಬ್ಬರವನ್ನಾಗಿ ಪರಿವರ್ತನೆ ಮಾಡಲಾಗುತ್ತದೆ ಎಂದರು.
ಕಸವನ್ನು ಬೇರೆ ಬೇರೆಯಾಗಿ ವಿಂಗಡಿಸಿ ಮರುಬಳಕೆಯಾಗುವ ಕಸವನ್ನು ಪ್ರತ್ಯೇಕಿಸಿ ಮಾರಾಟಕ್ಕೆ ಸಜ್ಜುಗೊಳಿಸುವುದು. ತ್ಯಾಜ್ಯ ನೀರನ್ನು ಕೂಡಾ ವ್ಯವಸ್ಥಿತ ಮಾದರಿಯಲ್ಲಿ ವಿಲೇವಾರಿ ಮಾಡುವುದು, ಹಸಿ ಕಸವನ್ನು ಪ್ಲಾಸ್ಟಿಕ್ ಇತ್ಯಾದಿ ಕರಗದ ವಸ್ತುಗಳಿಂದ ವಿಭಜಿಸಿ 45 ದಿನಗಳ ಕಾಲ ಇರಿಸಿ ಒಣಗಿದ ಬಳಿಕ ಜರಡಿ ಹಿಡಿದು ರೈತರಿಗೆ ಒದಗಿಸುವುದು. ದೊಡ್ಡ ಮಟ್ಟದಲ್ಲಿ ನಿತ್ಯವೂ ಕಸ ಸಂಗ್ರಹವಾಗುವುದರಿಂದ ಕಸದ ವಿಂಗಡಣೆಗೆ ಯಾಂತ್ರೀಕೃತ ವ್ಯವಸ್ಥೆ ಮಾಡಿಕೊಂಡಿದ್ದು, ಜೆಸಿಬಿ ಸೇರಿದಂತೆ ಬೇರೆ ಬೇರೆ ರೀತಿಯ ಯಂತ್ರಗಳು ಕಾರ್ಯ ನಿರ್ವಹಿಸುತ್ತವೆ.ನಿಮ್ಮ ಮನೆಗಳಲ್ಲಿ ತಪ್ಪದೇ ಕಸವಿಂಗಡಿಸಿ ಪುರಸಭೆ ವಾಹನಕ್ಕೆ ನೀಡಬೇಕು.
ಪೌರ ಕಾರ್ಮಿಕರೂ ಕೂಡಾ ಸೇವೆ ಸಲ್ಲಿಸುತ್ತಿದ್ದು ಅವರ ಸೇವೆಯೂ ಶ್ಲಾಘನಾರ್ಹವಾಗಿದೆ ಎಂದರು.
ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಇಂಗ್ಲಿಷ್ ಶಿಕ್ಷಕ ಜಿ. ಶುಭಾಷ್ ಮಾತನಾಡಿ ಇವತ್ತು ನಮ್ಮ ಶಾಲೆಯ ವಿದ್ಯಾರ್ಥಿಗಳು ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸದ ವಿಲೇವಾರಿ ಹೇಗೆ ಆಗುತ್ತದೆ ಎನ್ನುವ ಅರಿವು ಹಾಗೂ ಹಸಿ ಕಸ ಒಣಕಸದ ವಿಲೇವಾರಿ ಮಾಡುವುದು ಹೇಗೆ ಎಂಬ ವಿಚಾರದ ಕುರಿತು ಮಕ್ಕಳು ಪ್ರತ್ಯಕ್ಷವಾಗಿ ಇಲ್ಲಿಗೆ ಭೇಟಿ ನೀಡಿದ್ದು ಅತ್ಯುಪಯುಕ್ತವಾಗುತ್ತದೆ ಎಂದರು.
ಕಸವನ್ನು ವಾಹನದಲ್ಲಿ ಕೊಂಡೊಯ್ದ ಅದನ್ನು ಬೇರೆ ಬೇರೆ ಹಂತಗಳಲ್ಲಿ ವಿಂಗಡಣೆ ಮಾಡಿ, ಸಂಪನ್ಮೂಲವಾಗಿ, ಗೊಬ್ಬರವಾಗಿ ಪರಿವರ್ತಿಸುವ ವಿಧಾನವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ಜೀವನ್ ಸ್ವಾತಿ, ಮೌನೇಶ್ ಮತ್ತು ಸಮುದಾಯ ಸಹಾಯಕರಾದ ನಾಗರತ್ನ, ಜಾನಕಿ, ತಿಮ್ಮಮ್ಮ, ಮೇಘ, ಭೂಮಿಕಾ, ನರಸಿಂಹ, ಮತ್ತು ವಾಹನ ಚಾಲಕರು ಸೇರಿದಂತೆ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















