ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಭಿವೃದ್ಧಿಯ ಭೂಪಟದಲ್ಲಿ ಮರೆತುಹೋದ ಉತ್ತರ ಕರ್ನಾಟಕ

ಕರ್ನಾಟಕದ ನಕ್ಷೆಯನ್ನು ಒಮ್ಮೆ ಗಮನಿಸಿ ನೋಡಿದರೆ ಅದು ಅಭಿವೃದ್ಧಿಯ ಎರಡು ಮುಖಗಳನ್ನು ತೋರಿಸುತ್ತದೆ. ಒಂದು ಮುಖ ಬೆಳಕಿನಿಂದ ಕಂಗೊಳಿಸುತ್ತಿದೆ, ಇನ್ನೊಂದು ಮುಖ ಕತ್ತಲೆಯಲ್ಲಿ ಕಳೆದುಹೋಗಿದೆ. ಬೆಳಕಿನ ಮುಖವೆಂದರೆ ಬೆಂಗಳೂರು, ಹಾಸನ, ತುಮಕೂರು, ಮಂಡ್ಯ, ಮೈಸೂರು, ರಾಮನಗರ. ಈ ಜಿಲ್ಲೆಗಳ ಹೆಸರು ಕೇಳಿದರೆ ಸಾಕು ಅಭಿವೃದ್ಧಿ, ಉದ್ಯೋಗ, ಐಟಿ, ಶಿಕ್ಷಣ, ನೀರಾವರಿ, ರೈಲ್ವೆ, ವಿಮಾನ ನಿಲ್ದಾಣ ಎಲ್ಲವೂ ಕಣ್ಣ ಮುಂದೆ ಬರುತ್ತದೆ. ಆದರೆ ನಕ್ಷೆಯ ಮೇಲ್ಭಾಗದಲ್ಲಿರುವ ಬೀದರ್, ಯಾದಗಿರಿ, ವಿಜಾಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕಲಬುರಗಿ, ಬಳ್ಳಾರಿ ಜಿಲ್ಲೆಗಳ ಹೆಸರು ಕೇಳಿದರೆ ಬರ, ಗುಳೆ, ನಿರುದ್ಯೋಗ, ರೈತರ ಆತ್ಮಹತ್ಯೆ, ಶಾಲೆಯಲ್ಲಿ ಶಿಕ್ಷಕರಿಲ್ಲ, ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂಬ ಚಿತ್ರಗಳು ಕಣ್ಣ ಮುಂದೆ ಬರುತ್ತವೆ. ಇದು ಸ್ವಾತಂತ್ರ್ಯ ಬಂದು 78 ವರ್ಷಗಳ ನಂತರವೂ ಈ ನಾಡು ಕಂಡಿರುವ ಬಹುದೊಡ್ಡ ದುರಂತ. ಇದು ಕೇವಲ ಅಭಿವೃದ್ಧಿಯ ಅಸಮಾನತೆಯಲ್ಲ, ಇದು ಈ ಭಾಗದ ಜನರ ಜೊತೆ ನಡೆದ ಐತಿಹಾಸಿಕ ಅನ್ಯಾಯ.

ಹಿಂದಿನಿಂದ ಇಂದಿನವರೆಗೆ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು, ಅದು ಯಾವುದೇ ಪಕ್ಷದ ಸರ್ಕಾರವೇ ಆಗಿರಲಿ, ಅಭಿವೃದ್ಧಿ ಎಂದರೆ ಹಳೇ ಮೈಸೂರು ಭಾಗ ಎಂಬ ಅಲಿಖಿತ ನಿಯಮವನ್ನು ಮಾಡಿಕೊಂಡಿವೆ. ಬಜೆಟ್ ನಲ್ಲಿ ಸಿಂಹಪಾಲು ಅನುದಾನ, ದೊಡ್ಡ ಕೈಗಾರಿಕೆಗಳು, ವಿಶ್ವವಿದ್ಯಾಲಯಗಳು, ಏಮ್ಸ್ ಮಾದರಿಯ ಆಸ್ಪತ್ರೆಗಳು, ಐಐಟಿ, ಐಐಎಂ ಎಲ್ಲವೂ ಮೊದಲು ಆ ಭಾಗಕ್ಕೆ ಹೋಗುತ್ತವೆ. ಉತ್ತರ ಕರ್ನಾಟಕಕ್ಕೆ ಬರುವುದು ಕೇವಲ ಚುನಾವಣಾ ಭರವಸೆ, ಶಂಕುಸ್ಥಾಪನೆಯ ಶಿಲಾಶಾಸನ ಮತ್ತು ಆ ಶಿಲಾಶಾಸನದ ಮೇಲಿನ ಧೂಳು. ಇದಕ್ಕೆ ಕಾರಣವೇನು? ಇಲ್ಲಿನ ಜನಪ್ರತಿನಿಧಿಗಳ ಅಸಡ್ಡೆ, ಸ್ವಾರ್ಥ ಮತ್ತು ಕುಟುಂಬ ರಾಜಕಾರಣವೇ ಪ್ರಮುಖ ಕಾರಣ. ಇಲ್ಲಿನ ಅನೇಕ ನಾಯಕರಿಗೆ ತಮ್ಮ ಕ್ಷೇತ್ರದ ಅಭಿವೃದ್ಧಿಗಿಂತ ತಮ್ಮ ಮಕ್ಕಳ, ಮೊಮ್ಮಕ್ಕಳ ರಾಜಕೀಯ ಭವಿಷ್ಯವೇ ಮುಖ್ಯವಾಗಿದೆ. ಚುನಾವಣೆ ಬಂದಾಗ ಜಾತಿ, ಧರ್ಮದ ಹೆಸರಿನಲ್ಲಿ ಮತ ಪಡೆದು, ಗೆದ್ದ ನಂತರ ಬೆಂಗಳೂರಿನಲ್ಲಿ ನೆಲೆಸುವ, ತಮ್ಮ ಬಿನಾಮಿ ಆಸ್ತಿ ಹೆಚ್ಚಿಸಿಕೊಳ್ಳುವ ಕೆಲಸದಲ್ಲಿಯೇ ಅವರ ಐದು ವರ್ಷ ಕಳೆಯುತ್ತದೆ. ಜೊತೆಗೆ ಭ್ರಷ್ಟ ಅಧಿಕಾರಿ ವರ್ಗ. ಈ ಭಾಗಕ್ಕೆ ಬರುವ ಅಲ್ಪಸ್ವಲ್ಪ ಅನುದಾನವನ್ನೂ ಕಮಿಷನ್, ಲಂಚದ ಹೆಸರಿನಲ್ಲಿ ಲೂಟಿ ಮಾಡುವ ವ್ಯವಸ್ಥೆ ಇಲ್ಲಿ ಗಟ್ಟಿಯಾಗಿ ಬೇರೂರಿದೆ.

ಈ ಅಭಿವೃದ್ಧಿ ಶೂನ್ಯತೆಯ ಅತ್ಯಂತ ದೊಡ್ಡ ದುಷ್ಪರಿಣಾಮವೆಂದರೆ ಗುಳೆ.
ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಯ ಸಾವಿರಾರು ಕುಟುಂಬಗಳು ಪ್ರತಿವರ್ಷ ಬದುಕು ಅರಸಿ ಬೆಂಗಳೂರು, ಮುಂಬೈ, ಪುಣೆ, ಗೋವಾ, ಹೈದರಾಬಾದ್ ಗೆ ಗುಳೆ ಹೋಗುತ್ತಿವೆ. ಹಳ್ಳಿಗಳಲ್ಲಿ ಯುವಕರು ಇಲ್ಲ, ಹೊಲದಲ್ಲಿ ದುಡಿಯುವವರು ಇಲ್ಲ. ಉಳಿದವರು ವೃದ್ಧರು ಮತ್ತು ಮಕ್ಕಳು ಮಾತ್ರ. ಇದು ಕೇವಲ ಆರ್ಥಿಕ ಸಮಸ್ಯೆಯಲ್ಲ, ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟು. ಅಭಿವೃದ್ಧಿ ಆದರೆ ಮಾತ್ರ ಈ ಗುಳೆ ನಿಲ್ಲುತ್ತದೆ. ಕಾರ್ಖಾನೆಗಳು ಬಂದರೆ, ನೀರಾವರಿ ಬಂದರೆ, ಉದ್ಯೋಗ ಸೃಷ್ಟಿಯಾದರೆ ಯಾರು ತಾನೇ ತಮ್ಮ ತಾಯ್ನಾಡು, ತಮ್ಮ ಮನೆ, ತಮ್ಮ ಹೊಲ ಬಿಟ್ಟು ಹೋಗುತ್ತಾರೆ? ಆದರೆ ಸರ್ಕಾರಗಳಿಗೆ ಈ ನೋವು ಕಾಣುತ್ತಿಲ್ಲ.

ಇಂತಹ ಕತ್ತಲೆಯಲ್ಲಿಯೂ ಒಂದು ಬೆಳಕಿನ ಕಿರಣವೆಂದರೆ ವಿಜಾಪುರ ಜಿಲ್ಲೆಯ ಹಾಲಿ ಬೃಹತ್ ಕೈಗಾರಿಕಾ ಸಚಿವರಾದ ಎಂ. ಬಿ. ಪಾಟೀಲರ ಕಾರ್ಯವೈಖರಿ. ಈ ಮಾತನ್ನು ನಾವು ರಾಜಕೀಯ ಹೊಗಳಿಕೆಗಾಗಿ ಹೇಳುತ್ತಿಲ್ಲ, ವಾಸ್ತವದ ನೆಲೆಗಟ್ಟಿನಲ್ಲಿ ಹೇಳುತ್ತಿದ್ದೇವೆ. ಉತ್ತರ ಕರ್ನಾಟಕಕ್ಕೆ ಏನಾದರೂ ಒಂದು ಒಳ್ಳೆಯ ಕೊಡುಗೆ ಸಿಕ್ಕಿದೆ ಎಂದರೆ ಅದು ಎಂ.ಬಿ. ಪಾಟೀಲರ ಕೊಡುಗೆ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಅವರು ಬಾಗಲಕೋಟೆ ಮತ್ತು ವಿಜಾಪುರ ಜಿಲ್ಲೆಗಳಿಗೆ ನೀರಾವರಿ ಕಾಲುವೆಗಳ ಜಾಲವನ್ನು ನಿರ್ಮಿಸುವ ಮೂಲಕ, ಬಂಜರು ಭೂಮಿಯನ್ನು ಹಸಿರು ಭೂಮಿಯನ್ನಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕೈಗಾರಿಕಾ ಸಚಿವರಾಗಿ ಅವರು ಕೈಗಾರಿಕೆಗಳೆಂದರೆ ಬೆಂಗಳೂರು ಮಾತ್ರವಲ್ಲ, ಕಲಬುರಗಿ, ವಿಜಾಪುರ, ಬೀದರ್ ನಲ್ಲೂ ಕೈಗಾರಿಕೆ ಬರಬೇಕು ಎಂಬ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸದಲ್ಲಿ ಒಂದು ನಿಸ್ವಾರ್ಥ ಸೇವಾ ಮನೋಭಾವ ಕಾಣುತ್ತದೆ, ತೋರಿಕೆಯ ರಾಜಕೀಯ ಕಾಣುವುದಿಲ್ಲ. ಹೀಗಾಗಿ ಈ ಭಾಗಕ್ಕೆ ಅವರು ನಿಜವಾಗಿಯೂ ಕಳಸಪ್ರಾಯ. ಇಂತಹ ಒಬ್ಬರೋ ಇಬ್ಬರೋ ನಾಯಕರಿಂದ ಇಡೀ ಉತ್ತರ ಕರ್ನಾಟಕದ ಅಭಿವೃದ್ಧಿ ಸಾಧ್ಯವಿಲ್ಲ. ಇಡೀ ವ್ಯವಸ್ಥೆಯೇ ಬದಲಾಗಬೇಕು.

ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಘೋಷಿಸುವುದು ಮಾತ್ರವಲ್ಲ, ಅವುಗಳನ್ನು ಜಾರಿಗೆ ತರಲು ವಿಶೇಷ ಅಧಿಕಾರ ಹೊಂದಿರುವ ಸಮಿತಿಗಳನ್ನು ರಚಿಸಬೇಕು. ಆ ಸಮಿತಿಗಳಿಗೆ ಅಧಿಕಾರಿಗಳ ಜೊತೆಗೆ ಸ್ಥಳೀಯ ರೈತರು, ಹೋರಾಟಗಾರರು, ಚಿಂತಕರು, ಪತ್ರಕರ್ತರನ್ನು ಸೇರಿಸಿಕೊಳ್ಳಬೇಕು.

ಮೊದಲನೆಯದಾಗಿ ನೀರಾವರಿಗೆ ಆದ್ಯತೆ ನೀಡಬೇಕು. ಕೃಷ್ಣಾ, ಭೀಮಾ, ಮಲಪ್ರಭಾ ನದಿಗಳ ನೀರನ್ನು ಸಮರ್ಪಕವಾಗಿ ಬಳಸಿಕೊಂಡರೆ ಈ ಭಾಗದ ರೈತ ಚಿನ್ನ ಬೆಳೆಯಬಲ್ಲ.
ಎರಡನೆಯದಾಗಿ ಕೈಗಾರಿಕೆ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು, ಕಲಬುರಗಿ, ಬೀದರ್, ರಾಯಚೂರಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಬೇಕು. ತೆರಿಗೆ ವಿನಾಯಿತಿ, ಭೂಮಿ, ವಿದ್ಯುತ್ ನಲ್ಲಿ ರಿಯಾಯಿತಿ ನೀಡಿ ಉದ್ಯಮಿಗಳನ್ನು ಇತ್ತ ಕರೆತರಬೇಕು.
ಮೂರನೆಯದಾಗಿ ಶಿಕ್ಷಣ ಮತ್ತು ಆರೋಗ್ಯ. ಇಲ್ಲಿನ ಸರ್ಕಾರಿ ಶಾಲೆ, ಆಸ್ಪತ್ರೆಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅವುಗಳನ್ನು ಕಾರ್ಪೊರೇಟ್ ಮಟ್ಟಕ್ಕೆ ಏರಿಸಬೇಕು. ನಾಲ್ಕನೆಯದಾಗಿ ಉದ್ಯೋಗ. ಸ್ಥಳೀಯ ಯುವಕರಿಗೆ ಸ್ಥಳೀಯ ಕೈಗಾರಿಕೆಗಳಲ್ಲಿ ಶೇ.80 ರಷ್ಟು ಮೀಸಲಾತಿ ಕಡ್ಡಾಯಗೊಳಿಸಬೇಕು.

ಅಭಿವೃದ್ಧಿಯೆಂದರೆ ಕೇವಲ ರಸ್ತೆ, ಸೇತುವೆ ಅಲ್ಲ, ಅದು ಮನುಷ್ಯನ ಘನತೆಯ ಬದುಕು. ಉತ್ತರ ಕರ್ನಾಟಕದ ಜನರು ಭಿಕ್ಷೆ ಕೇಳುತ್ತಿಲ್ಲ, ಅವರು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಅವರು ಕಟ್ಟುವ ತೆರಿಗೆ, ಅವರು ನೀಡುವ ಮತಕ್ಕೆ ಸಮಾನವಾದ ಅಭಿವೃದ್ಧಿಯನ್ನು ಕೇಳುತ್ತಿದ್ದಾರೆ. ಇನ್ನು ಮುಂದೆಯಾದರೂ ಬೆಂಗಳೂರು ಕೇಂದ್ರಿತ ಅಭಿವೃದ್ಧಿ ಮಾದರಿಯನ್ನು ಕೈಬಿಟ್ಟು, ಸಮಗ್ರ ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ಸರ್ಕಾರ ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಈ ಅಸಮಾನತೆಯ ಕಂದರ ಇನ್ನಷ್ಟು ಆಳವಾಗುತ್ತದೆ, ಗುಳೆ ಇನ್ನಷ್ಟು ಹೆಚ್ಚಾಗುತ್ತದೆ, ಮತ್ತು ಒಂದು ದಿನ ಉತ್ತರ ಕರ್ನಾಟಕದ ಜನರು ಪ್ರತ್ಯೇಕ ರಾಜ್ಯದ ಕೂಗನ್ನು ಇನ್ನಷ್ಟು ಜೋರಾಗಿ ಎತ್ತುತ್ತಾರೆ, ಆಗ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತು, ಈ ಭಾಗದ ಜನರ ಕಣ್ಣೀರು ಒರೆಸುವ ಕೆಲಸ ಮಾಡಲಿ ಎಂಬುದು ಈ ಲೇಖನದ ಆಶಯ.

ಲೇಖಕರು : ಸಂಗಮೇಶ ಎನ್ ಜವಾದಿ, ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ್ ಜಿಲ್ಲೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!