ಕೊಟ್ಟೂರು : ಪಟ್ಟಣದ ಚಿರಿಬಿ ರಸ್ತೆಯಲ್ಲಿರುವ ಇಂದು ಡಿಗ್ರಿ ಕಾಲೇಜಿನಲ್ಲಿ ಬಿ.ಕಾಂ ಪದವಿ ವಿದ್ಯಾರ್ಥಿಗಳ ವತಿಯಿಂದ “ಮಾಸ್ಟರ್ ಆಫ್ ಪ್ಲೇವರ್ಸ್ – ಫುಡ್ ಫೆಸ್ಟ್-2026” ಆಹಾರ ಮೇಳವನ್ನು ಮಂಗಳವಾರ, ಸೆಪ್ಟೆಂಬರ್ 08, 2026ರಂದು ಇಂದು ಕಾಲೇಜಿನ ಆವರಣದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಖಜಾಂಚಿಗಳಾದ ಶ್ರೀ ಎಂ.ಟಿ. ಚಂದ್ರಪ್ಪ ರವರು ಉದ್ಘಾಟಿಸಿ, ಅವರು ಮಾತನಾಡಿ ಆಹಾರ ಮೇಳದ ಮುಖ್ಯ ಉದ್ದೇಶವು ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನವಷ್ಟೇ ಅಲ್ಲದೆ, ವ್ಯವಹಾರ ನಿರ್ವಹಣೆ, ಉದ್ಯಮಶೀಲತೆ, ಮಾರುಕಟ್ಟೆ ನಿರ್ವಹಣೆ, ತಂಡದ ಕಾರ್ಯವೈಖರಿ, ಗ್ರಾಹಕರೊಂದಿಗೆ ಸಂವಹನ ಹಾಗೂ ಸೃಜನಶೀಲತೆಯಂತಹ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ, ಸೃಜನಶೀಲತೆ ಹಾಗೂ ಉದ್ಯಮಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಇಂತಹ ಕಾರ್ಯಕ್ರಮಗಳ ಮಹತ್ವವನ್ನು ವಿವರಿಸಿದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಿವಿಧ ತಂಡಗಳಾಗಿ ವಿಭಜಿಸಿಕೊಂಡು ಹಲವಾರು ರುಚಿಕರ ಹಾಗೂ ವೈವಿಧ್ಯಮಯ ಆಹಾರ ಪದಾರ್ಥಗಳ ಮಳಿಗೆಗಳನ್ನು ಸ್ಥಾಪಿಸಿದ್ದರು. ವಿದ್ಯಾರ್ಥಿಗಳೇ ಆಹಾರ ಪದಾರ್ಥಗಳ ತಯಾರಿ, ಮಳಿಗೆಗಳ ಅಲಂಕಾರ, ಬೆಲೆ ನಿಗದಿ, ಮಾರಾಟ, ಗ್ರಾಹಕರೊಂದಿಗೆ ವ್ಯವಹಾರ ಹಾಗೂ ಲೆಕ್ಕಪತ್ರ ನಿರ್ವಹಣೆಯಂತಹ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದರು.
ವಿದ್ಯಾರ್ಥಿಗಳ ಮಳಿಗೆಗಳಲ್ಲಿ ಭಾರತೀಯ ಸಾಂಪ್ರದಾಯಿಕ ತಿನಿಸುಗಳು, ಚಾಟ್ಸ್, ಫಾಸ್ಟ್ ಫುಡ್, ನೂಡಲ್ಸ್, ಬರ್ಗರ್, ಸಿಹಿ ತಿನಿಸುಗಳು, ಪಾನೀಯಗಳು ಹಾಗೂ ವಿವಿಧ ಬಗೆಯ ವಿಶೇಷ ಆಹಾರ ಪದಾರ್ಥಗಳು ಗಮನ ಸೆಳೆದವು. ಆಹಾರ ಮೇಳಕ್ಕೆ ಆಗಮಿಸಿದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವಿವಿಧ ಆಹಾರಗಳ ರುಚಿಯನ್ನು ಸವಿದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮದ ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಹೆಚ್. ಎನ್. ವೀರಭದ್ರಪ್ಪ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಾಗೀಶಯ್ಯ ಪಿ.ಎಂ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪವನ್ ಕುಮಾರ್ ಹಾಗೂ ಉಪಪ್ರಾಂಶುಪಾಲರು, ಪದವಿ ಕಾಲೇಜಿನ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಜರಾಗಿದ್ದರು.
ವರದಿ: ಕೆ. ಗೋಣೆಪ್ಪ




















