
ಶಿವಮೊಗ್ಗ: ಪತ್ರಿಕಾರಂಗ ಎನಿಸಿಕೊಂಡ ಆರಂಭದ ಕಾಲದಲ್ಲಿ ಪತ್ರಿಕಾ ಧರ್ಮದ ಹಿನ್ನೆಲೆಯಿತ್ತು. ಆಗ ಸಂಪಾದಕರ ವೈಯಕ್ತಿಕ ವರ್ಚಸ್ಸಿನಲ್ಲಿ ಇಡೀ ಪತ್ರಿಕೆ ನಡೆಸುತ್ತಿದ್ದರು.
ಆದರೆ ಪತ್ರಿಕಾರಂಗವು ಪತ್ರಿಕೋದ್ಯಮದ ವ್ಯಾಪ್ತಿ ಪಡೆದಾಗ ಸುದ್ದಿ ಪ್ರಕಟಣೆ, ವ್ಯಾಪ್ತಿ ಉದ್ಯಮಿಗಳ ನಿಯಂತ್ರಣಕ್ಕೆ ಬಂತು.
ಆಯಾ ಉದ್ಯಮಿಯ ಇಂಗಿತ ಆಧರಿಸಿ ಪತ್ರಿಕೆಗಳು ತಮ್ಮ ತಮ್ಮ ಸ್ವರೂಪ ಬದಲಿಸಿಕೊಂಡವು.
ಇಂತಹ ಸಂದರ್ಭದಲ್ಲೇ ಅನ್ವೇಷಿಸಿದ ಪ್ರಕಾರವೇ ” ಅಂಕಣ ಬರಹ”. ಸುದ್ದಿಗಿರುವ ಕ್ಷಣಿಕತೆಯನ್ನು ಮೀರಿ, ಸುದ್ದಿ ಹಿಂದಿನ ಸತ್ಯವನ್ನು ವಿಶ್ಲೇಷಿಸುವ ಪ್ರಯತ್ನ ಅಂಕಣ ಬರಹಗಳಲ್ಲಿ ಕಾಣಿಸಿತು. ಹೀಗಾಗಿ ಸಂಪಾದಕ ವರ್ಗವೇ ಅಲ್ಲದೇ ಸಾಹಿತ್ಯ ವಲಯ,ವಿವಿಧ ವೃತ್ತಿನಿರತರಿಂದ ಅಂಕಣ ಬರಹಗಳು ಶ್ರೀಮಂತವಾದವು. ಪತ್ರಿಕೆಗಳಿಗೆ ನಿಯತವಾಗಿ ಓದುಗ ವರ್ಗವನ್ನೂ ಹೆಚ್ಚಿಸುವಲ್ಲಿ ಅಂಕಣ ಬರಹಗಾರರು ತಮ್ಮದೇ ಕೊಡುಗೆ ನೀಡಿದರು ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೈದ್ಯನಾಥ್ ಹೇಳಿದರು.
ಕನ್ನಡ ಪತ್ರಿಕಾಕ್ಷೇತ್ರದಲ್ಲಿ ಅಂಕಣ ಸಾಹಿತ್ಯ ಈಗೀಗ ಪ್ರತಿಷ್ಠಿತವೆನಿಸಿದೆ.
ಅಂಕಣ ಬರಹಗಳು
ಸಮಾಜದ ಅನೇಕ ತಲ್ಲಣ, ಪಲ್ಲಟ ಮತ್ತು
ಸಮಸ್ಯೆಗಳ ಬುಡಸಹಿತ ವಿಶ್ಲೇಷಣೆ, ವಿಡಂಬನೆ ನೀಡುತ್ತಿವೆ. ಅಂತಹ ಸಮರ್ಥ ವಿಶ್ಲೇಷಣೆ ಮತ್ತು ವಿಡಂಬಿಸಿದ ಲೇಖನಗಳು ಡಾ.ರಾಘವೇಂದ್ರ ವೈಲಾಯರ ” ಖಾರ ಬಾತ್ ” ಪುಸ್ತಕದಲ್ಲಿದೆ.
ಎಂದು ಹಿರಿಯ ಪತ್ರಕರ್ತ ,ಚಲನಚಿತ್ರ ಕಲಾವಿದರಾದ ವೈದ್ಯನಾಥ್ ಅವರು ಖಾರ ಬಾತ್ ಪುಸ್ತಕ ಪರಿಚಯ ಭಾಷಣದಲ್ಲಿ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ಶಿವಮೊಗ್ಗ ಶಾಖೆ ,ಜನನಿ ನ್ಯೂಲೈಫ್ ಆಸ್ಪತ್ರೆ ಮತ್ತು ಯಾಜಿ ಪ್ರಕಾಶನದ ಸಹಯೋಗದಲ್ಲಿ ಖಾರ ಬಾತ್ ಪುಸ್ತಕ ಲೋಕಾರ್ಪಣೆ ಸಮಾರಂಭ ನಡೆಯಿತು.
ಶಿವಮೊಗ್ಗದ ಸನ್ ಸ್ಪೆಷಾಲಿಟಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ನಾಡಿನ ಹಿರಿಯ ಅಂಕಣ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ ಅವರು “ಖಾರ ಬಾತ್” ಪುಸ್ತಕ ಲೋಕಾರ್ಪಣೆಗೊಳಿಸಿದರು.
ಪುಸ್ತಕಗಳಿಂದ ಜೀವನವೇ ಬದಲಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದೆ. ಅಂತಹ ಸಂದರ್ಭದಲ್ಲಿ ಅರ್ಥಶಾಸ್ತ್ರಜ್ಞರ ಪುಸ್ತಕಗಳನ್ನು ಓದುವ ಅವಕಾಶ ಸಿಕ್ಕಿತು. ಅಲ್ಲಿಂದ ವಿಚಾರ ಕ್ರಮವೇ ಬದಲಾಯಿತು. ಹಣ ಚಲಾವಣೆ, ಹೂಡಿಕೆ ಮುಂತಾದ ಬುದ್ಧಿಕೌಶಲಗಳ ಬಗ್ಗೆ ಬರೆಯುವ ಪ್ರೇರಣೆ ಸಿಕ್ಕಿತು. ಪತ್ರಿಕೆಯಲ್ಲಿ “ಹಣ- ಕ್ಲಾಸು” ಮುಂತಾದ ಅಂಕಣಗಳಿಗೆ ಓದುಗರು ಒಳ್ಳೆಯ ಪ್ರತಿಕ್ರಿಯೆ ನೀಡಿದರು. ಜೊತೆಗೆ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಕೂಡ ಬೆಳೆಸಿಕೊಂಡೆ.
ಪ್ರಸ್ತುತ ಖಾರಬಾತ್ ಪುಸ್ತಕದ ಲೇಖಕ ಡಾ. ರಾಘವೇಂದ್ರ ವೈಲಾಯರು ಒಬ್ಬ ಅನನ್ಯ ಚಿಂತಕರು. ನಮ್ಮ ಸಮಾಜ, ಸಂಸ್ಕೃತಿ, ವೈದ್ಯವೃತ್ತಿ ಎಲ್ಲದರ ಬಗ್ಗೆ ವಾಸ್ತವ ಚಿತ್ರಣವನ್ನು ನಿಷ್ಠುರವಾಗಿ, ನೇರನುಡಿಗಳಲ್ಲಿ ಹಿಡಿದಿಟ್ಟಿದ್ದಾರೆ. ಹೀಗಾಗಿ ನನಗೆ ಅವರ ಬರಹಗಳು ಇಷ್ಟವಾಗಿವೆ ಎಂದು ಖಾರಬಾತ್ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ಸನ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ,ಮೂಳೆ ಮತ್ತು ಬೆನ್ನುಹುರಿ ತಜ್ಞ ಡಾ.ಆಕಾಶ್ ಹೊಸತೋಟ ಅವರು ಜ್ಯೋತಿ ಬೆಳಗಿಸಿ, ಭಾರತಾಂಬೆ, ಕನ್ನಡಾಂಬೆ ಹಾಗೂ ಸಾಯಿಬಾಬ ಗುರುಪೀಠಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು.
ಸತ್ಸಂಗಕ್ಕೆ, ತರಬೇತಿ, ಸಮಾಜಕ್ಕೆ ಹಿತವೆನ್ನಿಸುವ ವಿಚಾರ ಸಂಕಿರಣಗಳಿಗೆ ಮೀಸಲಾಗಿರುವ ಸಭಾಂಗಣದಲ್ಲಿ ಖಾರ ಬಾತ್ ನಂತಹ ವೈವಿಧ್ಯ ಲೇಖನಗಳ ಸಂಕಲನ ಲೋಕಾರ್ಪಣೆಯು ನನಗೆ
ಸಂತೋಷದ ವಿಷಯ ಎಂದು ಡಾ. ಆಕಾಶ್ ಹೇಳಿದರು.
ಮುಖ್ಯ ಅತಿಥಿಗಳಾಗಿ’ ಕಗ್ಗ’
ವಾಗ್ಮಿ ಶ್ರೀ ಜಿ.ಎಸ್.ನಟೇಶ್,
ಖಾರ ಬಾತ್ ಲೇಖಕ ಡಾ.ಸಿ.ಜಿ.ರಾಘವೇಂದ್ರ ವೈಲಾಯ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷ ಡಾ.ಸುಧೀಂದ್ರ ಉಪಸ್ಥಿತರಿದ್ದರು.
ಕಾವ್ಯದ ಕೆಲಸವೆಂದರೆ ಮನಸ್ಸನ್ನ ತೀವ್ರ ತಟ್ಟುವುದು, ಹೊಸ ವಿಚಾರಗಳ ಪ್ರೇರಣೆ ಇತ್ಯಾದಿ ಲಕ್ಷಣಗಳಿವೆ. ಅಂತಹ ತೀವ್ರತೆ, ಪ್ರೇರಣೆ, ಮಂಥನಗಳು ಖಾರಬಾತ್ ಪುಸ್ತಕದ ಓದಿನಿಂದ ಸಿಗುತ್ತದೆ. ಹಲವು ಸಂಗತಿಗಳನ್ನಂತೂ ವೇದ ಕಾಲೀನ ಉಕ್ತಿಗಳಿಂದ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ ಎಂದು ಶ್ರೀ ಜಿ.ಎಸ್.ನಟೇಶ್ ತಮ್ಮ ಸೋದಾಹರಣ ಭಾಷಣದಲ್ಲಿ ತಿಳಿಸಿದರು.
ಲೇಖರಾಗಿ ಡಾ.ಸಿಜಿ.ರಾಘವೇಂದ್ರ ವೈಲಾಯರು ತಮ್ಮನ್ನು ತೀವ್ರ ಕಾಡಿದ ವಿಚಾರಗಳು, ಸಾಮಾಜಿಕವಾಗಿ ಅವುಗಳಿಗಿರುವ ಪ್ರತಿರೋಧ, ಜಿಜ್ಞಾಸೆ, ಮಿಥ್ಯ ವಿಶ್ವಾಸಗಳ ಮುಂದುವರಿಕೆಯಿಂದ ದೇಶದಲ್ಲಿ ಭುಗಿಲೆದ್ದಿರುವ ವಾದ ವಿವಾದಗಳು ತಮ್ಮನ್ನು ಖಾರವಾಗಿ ನಿಷ್ಠುರವಾಗಿ ಬರೆಯುವಂತೆ ಮಾಡಿವೆ.ಎಲ್ಲೂ ನನಗೆ ನನ್ನ ವಿಚಾರ ಮತ್ತು ಪರಿಣಾಮಗಳಿಗೆ ರಾಜಿ ಇಲ್ಲದಂತೆ ವಸ್ತುಗಳನ್ನು ಓದುಗರ ಮುಂದಿಟ್ಟುರುವೆ ಎಂದು ನುಡಿದರು.
ಪುಸ್ತಕ ಲೋಕಾರ್ಪಣೆ ,ಕವಿಗೋಷ್ಠಿ , ಕಾವ್ಯಕಮ್ಮಟ , ರಾಜ್ಯೋತ್ಸವ ಆಚರಣೆ ಮೂಲಕ
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಾಹಿತ್ಯ ಚಟುವಟಿಕೆಗಳನ್ನ ಆರಂಭಿಸಿದೆ. ಈ ಮೂಲಕ ಭಾರತೀಯ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಯ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು
ಪರಿಷತ್ತಿನ ಆಶಯವಾಗಿದೆ. ಸಹೃದಯರು ಪರಿಷತ್ತಿಗೆ ಸದಸ್ಯರಾಗುವ ಮೂಲಕ ತಮ್ಮ ಬೆಂಬಲ, ಸಹಕಾರ ನೀಡಬೇಕೆಂದು ಅ.ಭಾ.ಸಾ.ಪ. ಜಿಲ್ಲಾಧ್ಯಕ್ಷರಾದ ಡಾ.ಸುಧೀಂದ್ರ ಅವರು ಮನವಿ ಮಾಡಿದರು.
ಶ್ರೀಶಾರದಾ ಸಂಗೀತ ವಿದ್ಯಾಲಯದ ಗಾಯಕಿಯರು ಪ್ರಾರ್ಥಿಸಿದರು. ಅಭಾಸಾಪ ಇದರ ಉಪಾಧ್ಯಕ್ಷ ಡಾ.ಕೃಷ್ಣ ಎಸ್ ಭಟ್ ಅವರು ಎಲ್ಲರನ್ನೂ ಸ್ವಾಗತಿಸಿದರು.
ಪುಸ್ತಕ ಲೋಕಾರ್ಪಣೆಯನ್ನು
ಬಾಣಸಿಗರ ಛದ್ಮ ವೇಷಧಾರಿಗಳ ಮೂಲಕ ವಿಶಾಲ ಕರಂಡಿಕೆಯಲ್ಲಿ ವೇದಿಕೆ ಪುಸ್ತಕಗಳನ್ನು ” ಲಘು ಉಪಾಹಾರ” ವಿತರಿಸುವಂತೆ ” ಖಾರ ಬಾತ್ ” ಪುಸ್ತಕಗಳನ್ನು ಒಂದೊಂದಾಗಿ ಅನಾವರಣಗೊಳಿಸಿದ ದೃಶ್ಯ ವಿನ್ಯಾಸ ಎಲ್ಲರ ಮೆಚ್ಚುಗೆ ಪಡೆಯಿತು.
ಸಮಾರಂಭದಲ್ಲಿ ಮಧ್ಯಂತರವಾಗಿ ಡಾ.ಸಿ.ಜಿ.ರಾಘವೇಂದ್ರ ವೈಲಾಯರ ಕವಿತೆಗಳನ್ನು ಕಲಾವಿದರು ಸುಶ್ರಾವ್ಯವಾಗಿ ಹಾಡಿದರು.
ಅಭಾಸಾಪ ಕೋಶಾಧಿಕಾರಿ ಕೆ.ಜಿ.ಮಂಜುನಾಥ ಶರ್ಮರ ಆಭಾರ ಮನ್ನಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ ಬೆಂಗಳೂರು




















