ರಾಜ್ಯದ ಪ್ರತಿಷ್ಠಿತ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಬಾಗಲಕೋಟೆ ಜಿಲ್ಲೆಯ ಹಿರೇಮಳಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀ ಎಂ.ಎಚ್. ಪೂಜಾರಿ ಅವರು ಕೆ ಪಿ ಸಿ ಸಿ ಶಿಕ್ಷಕರ ಘಟಕದ ರಾಜ್ಯ ಅಧ್ಯಕ್ಷರು ಆಗಿರುವ ಶ್ರೀ ಬಸವರಾಜ ಗುರಿಕಾರವರ ನೇತೃತ್ವದಲ್ಲಿ ಸ್ವೀಕರಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಿದ ಕಾರ್ಯ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ತೋರಿದ ವಿಶೇಷ ಕಾಳಜಿ ಹಾಗೂ ಕೋವಿಡ್ ಸಂದರ್ಭದಲ್ಲಿಯೂ ಮನೆ-ಮನೆಗೆ ತೆರಳಿ ಮಕ್ಕಳಿಗೆ ಪಾಠ ಮಾಡಿದ ಅವರ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಕಳೆದ 18 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಶಾಲೆ ಬಿಟ್ಟ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಕಲಿಕಾ ಚೇತರಿಕೆ, ಸೃಜನಶೀಲ ಚಟುವಟಿಕೆಗಳು ಹಾಗೂ ಪೋಷಕರಲ್ಲಿ ಶಿಕ್ಷಣದ ಜಾಗೃತಿ ಮೂಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಹಲವು ಶಿಕ್ಷಣ ಪ್ರೇಮಿಗಳ ಮತ್ತು ಶಿಕ್ಷಕರ ಜೊತೆಗೆ ಸೇರಿ ಶಾಲೆಯ ಅಭಿವೃದ್ಧಿಯನ್ನು ಭೌತಿಕವಾಗಿ ಬಹಳ ಸುಂದರಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಮಾರಂಭದಲ್ಲಿ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ನಗದು ಪುರಸ್ಕಾರವನ್ನು ನೀಡಿ ಅಭಿನಂದಿಸಲಾಗಿದೆ.
ಶ್ರೀ ಎಂ.ಎಚ್. ಪೂಜಾರಿ ಅವರ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಮತ್ತು ತಾಲೂಕಿನ ಸಮಸ್ತ ಶಿಕ್ಷಕ ಬಳಗ ಹಾಗೂ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















