ಬಳ್ಳಾರಿ / ಕಂಪ್ಲಿ: ಪ್ರಸಕ್ತ ಸಾಲಿನಲ್ಲಿ ಸಹಕಾರಿ ಸಂಘಗಳು ಸದಸ್ಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಧೃತಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಮತಿ ಐ. ವಿಜಯ ತಿಳಿಸಿದರು.
ಪಟ್ಟಣದ ಮಾರಮ್ಮ ಗುಡಿ ಕ್ಯಾಂಪ್ ಮುಖ್ಯ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಭಾನುವಾರ (ಸೆ. 6) ಹಮ್ಮಿಕೊಳ್ಳಲಾಗಿದ್ದ ಧೃತಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ 6ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದಸ್ಯರ ನಿರಂತರ ಸಹಕಾರ ಹಾಗೂ ಆಡಳಿತ ಮಂಡಳಿಯ ಪಾರದರ್ಶಕ ಆಡಳಿತದಿಂದಾಗಿ ಸಂಘವು ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ (CEO) ಶ್ರೀ ಐ. ಚಂದ್ರಶೇಖರ ರೆಡ್ಡಿ ಅವರು ಮಾತನಾಡಿ, 2025-26ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಸಭೆಯ ಮುಂದೆ ಮಂಡಿಸಿದರು.
ಸಭೆಯಲ್ಲಿ ಸಂಘದ ಪ್ರಗತಿ ಹಾಗೂ ಮುಂದಿನ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಸಂಘದ ಕಳೆದ ಸಾಲಿನ ಆರ್ಥಿಕ ಪ್ರಗತಿಯನ್ನು ಸಭೆಯ ಗಮನಕ್ಕೆ ತರಲಾಯಿತು. ಸಂಘವು 2025-26ನೇ ಸಾಲಿನಲ್ಲಿ ಒಟ್ಟು ₹31,14,274/- ಆದಾಯ ಗಳಿಸಿದ್ದು, ₹27,06,436/- ವೆಚ್ಚ ಭರಿಸಿದೆ ಎಂದು ಆಡಳಿತ ಮಂಡಳಿ ತಿಳಿಸಿತು. ಈ ವಾಸ್ತವಿಕ ಆಯವ್ಯಯದ ವಿವರಗಳನ್ನು ಹಾಗೂ 2025-26ನೇ ಸಾಲಿನ ಆಡಿಟ್ ವರದಿಯ ‘ಅಢಾವೆ ಪತ್ರಿಕೆ’ ಮತ್ತು ‘ಲಾಭ-ಹಾನಿ’ ಪಟ್ಟಿಯನ್ನು ಸರ್ವಸದಸ್ಯರ ಸಭೆಯು ಪರಿಶೀಲಿಸಿ ಏಕಕಂಠದಿಂದ ಅನುಮೋದಿಸಿತು.
ರೂ. 4.07 ಲಕ್ಷ ನಿವ್ವಳ ಲಾಭ : 6% ಡಿವಿಡೆಂಡ್:ಪ್ರಸ್ತುತ 2025-26ನೇ ಹಣಕಾಸು ಸಾಲಿನಲ್ಲಿ ಸಹಕಾರಿ ಸಂಘವು ಒಟ್ಟು ರೂ. 4,07,838/- ಗಳ ಭರ್ಜರಿ ನಿವ್ವಳ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ಲಾಭದಲ್ಲಿ ಶೇ. 52 ರಷ್ಟನ್ನು ವಿವಿಧ ಕಡ್ಡಾಯ ನಿಧಿಗಳಿಗೆ ವರ್ಗಾಯಿಸಲಾಗಿದೆ.
ನಿಧಿಗಳ ವರ್ಗಾವಣೆಯ ನಂತರ ಸಂಘದ ಬಳಿ ರೂ. 1,95,762/- ಉಳಿಕೆಯಾಗಿದ್ದು, ಈ ಬಾರಿ ತನ್ನ ಎಲ್ಲಾ ಶೇರುದಾರರಿಗೆ ಶೇ. 6% ರಷ್ಟು ಲಾಭಾಂಶ (Dividend) ಹಂಚಿಕೆ ಮಾಡಲು ಆಡಳಿತ ಮಂಡಳಿಯು ಸಭೆಯ ಪರಿಶೀಲನೆಗೆ ಪ್ರಸ್ತಾಪಿಸಿದೆ.
2026-27ನೇ ಸಾಲಿಗೆ ರೂ. 60 ಲಕ್ಷ ಮುಂಬರುವ 2026-27ನೇ ಸಾಲಿನ ವರ್ಷಕ್ಕೆ ಸಂಘದ ವತಿಯಿಂದ ಸಿದ್ಧಪಡಿಸಲಾದ ವಾರ್ಷಿಕ ಆಯ-ವ್ಯಯದ (ಬಜೆಟ್) ಅಂದಾಜನ್ನು ಮಹಾಸಭೆಯ ಅಂಗೀಕಾರಕ್ಕೆ ಮಂಡಿಸಲಾಗುತ್ತಿದೆ.
ಈ ಹೊಸ ಸಾಲಿನಲ್ಲಿ ಸಹಕಾರಿ ಸಂಘಕ್ಕೆ ಅಂದಾಜು ರೂ. 60 ಲಕ್ಷ ಆದಾಯ ಹರಿದುಬರಲಿದ್ದು, ಒಟ್ಟು ರೂ. 48 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಮೂಲಕ ಮುಂಬರುವ ವರ್ಷದಲ್ಲೂ ಸಂಘವು ಲಾಭದಾಯಕ ಹಾದಿಯಲ್ಲಿ ಮುನ್ನಡೆಯುವ ವಿಶ್ವಾಸ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ನಿರ್ದೇಶಕರಾದ ಆರ್ ರಾಜಶೇಖರ್, ಬಿ. ಉಮೇಶ, ವೀರನಗೌಡ ಜಿ, ಐ. ಶರಣಗೌಡ, ಬಳ್ಳಾರಿ ಪುಷ್ಪಾವತಿ, ವ್ಯವಸ್ಥಾಪಕರಾದ ವಿಶ್ವನಾಥ ಸಿಬ್ಬಂದಿ ಐಶ್ವರ್ಯ ಸೇರಿದಂತೆ ಅರ್ಹ ಸರ್ವ ಸದಸ್ಯರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ದೇವತಾ ಪ್ರಾರ್ಥನೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿತು.
ವರದಿ : ಜಿಲಾನಸಾಬ್ ಬಡಿಗೇರ್




















