ಪತ್ರಕರ್ತರ ಹಕ್ಕು, ಹಿತಾಸಕ್ತಿ ರಕ್ಷಣೆಗೆ ಸಂಘಟನೆ ಬದ್ಧ : ಹುಲಿ ಅಮರನಾಥ್
ಬೀದರ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ತಾಲೂಕು ಘಟಕದ ಉದ್ಘಾಟನಾ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭವು ಭಾನುವಾರ ಸಂಜೆ 6 ಗಂಟೆಗೆ ನಗರದ ಎ.ಕೆ. ಕಾಂಟಿನೆಂಟಲ್ನಲ್ಲಿ ನಡೆಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಲಿ ಅಮರನಾಥ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜನಸಾಮಾನ್ಯರ ಸಮಸ್ಯೆಗಳನ್ನು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಗ್ರಾಮೀಣ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರ ಹಕ್ಕು, ಹಿತಾಸಕ್ತಿ, ವೃತ್ತಿಪರ ಗೌರವ ಹಾಗೂ ಅವರಿಗೆ ದೊರೆಯಬೇಕಾದ ಸೌಲಭ್ಯಗಳಿಗಾಗಿ ಸಂಘಟಿತ ಹೋರಾಟ ಅಗತ್ಯವಾಗಿದೆ. ರಾಜ್ಯದ ಎಲ್ಲಾ ಭಾಗಗಳ ಪತ್ರಕರ್ತರನ್ನು ಒಂದೇ ವೇದಿಕೆಯಡಿ ಸಂಘಟಿಸಿ ಅವರ ಧ್ವನಿಯಾಗಿ ಕಾರ್ಯನಿರ್ವಹಿಸುವುದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಬೀದರ್ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಇಮ್ರಾನ್ ಸಾಯಿದ್, ಪ್ರಧಾನ ಕಾರ್ಯದರ್ಶಿ ಅಮೋಸ್ ದಾಸ್, ಜಿಲ್ಲಾ ಕಾನೂನು ಸಲಹೆಗಾರ ಶರಣಪ್ಪ ಶರ್ಮ, ವಕೀಲ ಹಾಗೂ ಕಾನೂನು ಸಲಹೆಗಾರ ಗೌತಮ್ ವಾಗರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು.
ಬೀದರ್ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ :
ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಡಾ. ಸುವಿತ್ ಎಸ್. ಮೋರೆ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಅವರ ನೇತೃತ್ವದಲ್ಲಿ ವಿಶಾಲ್ ಅವರನ್ನು ಗೌರವಾಧ್ಯಕ್ಷರನ್ನಾಗಿ, ಪ್ರೀತಮ್ ಕೆಂಪ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಹರೀಶ್ ಕಾಂಬಳೆ ಅವರನ್ನು ಕಾರ್ಯದರ್ಶಿಯಾಗಿ ಹಾಗೂ ಮಾಲಾಶ್ರೀ ಎಸ್ ಮೊರೆ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು.
ಅಕ್ಷಯ್ ಕುಮಾರ್, ಸುದರ್ಶನ್ ಹಾಗೂ ವಿಜಯಪ್ರಕಾಶ್ ಅವರನ್ನು ತಾಲೂಕು ಘಟಕದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾ ಮತ್ತು ವಿಭಾಗ ಮಟ್ಟದಲ್ಲೂ ನೂತನ ನೇಮಕ
ಇದೇ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಹಾಗೂ ವಿಭಾಗ ಮಟ್ಟದ ಜವಾಬ್ದಾರಿಗಳಲ್ಲಿಯೂ ಮಹತ್ವದ ಬದಲಾವಣೆಗಳನ್ನು ಘೋಷಿಸಲಾಯಿತು.
ಡಾ. ಮಹಮ್ಮದ್ ಇಮ್ರಾನ್ ಸಾಯಿದ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲಾಧ್ಯಕ್ಷರನ್ನಾಗಿ ನಿಯುಕ್ತಿಗೊಳಿಸಿರುವುದಾಗಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಲಿ ಅಮರನಾಥ್ ಘೋಷಿಸಿದರು.
ಅದೇ ರೀತಿ ಚಂದ್ರಶೇಖರ್ ಎಸ್.ಕೆ. ಅವರನ್ನು ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಅಮೋಸ್ ದಾಸ್ ಅವರನ್ನು ಕಲ್ಯಾಣ ಕರ್ನಾಟಕ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿ ಘೋಷಿಸಲಾಯಿತು.
ಶರಣ ಶರ್ಮ ಅವರನ್ನು ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹುಲಿ ಅಮರನಾಥ್ ಹಾಗೂ ಸಂಘದ ಮುಖಂಡರು ಅಭಿನಂದನೆ ಸಲ್ಲಿಸಿ, ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪತ್ರಕರ್ತರು, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ವರದಿ : ರೋಹನ್ ವಾಘಮಾರೆ




















