ಪರಿಸರ ವಿನಾಶದ ತಡೆಗಟ್ಟದಿದ್ದರೆ ಭಾವ್8ಸ್ಯದಲ್ಲಿ ಮಾನವ ಜನಾಂಗದ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಪರಿಸರ ಚಿಂತಕ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೈಸೂರಿನ ಪೂರ್ಣಚಂದ್ರ ತೇಜಸ್ವಿ ತಪೋವನ ಸಂಸ್ಥೆಯು ಏರ್ಪಡಿಸಿದ್ದ ಸಮಾರಂಭದಲ್ಲಿ 2026 ನೇ ಸಾಲಿನ ಪೂರ್ಣ ಚಂದ್ರ ತೇಜಸ್ವಿ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದ ಅವರು ಮಾನವನ ದುರಾಸೆಯ ಫಲವಾಗಿ ಕಾಡಿನ ನಾಶ ಉಂಟಾಗಿದೆ.ಕಾಡುಪ್ರಾಣಿಗಳ ಆನೆ,ಚಿರತೆ ,ಹುಲಿ ಮೊದಲಾದ ವನ್ಯ ಪ್ರಾಣಿಗಳು ಆಹಾರ ಅರಸಿ ಗ್ರಾಮಗಳಿಗೆ ವಲಸೆ ಬರುತ್ತಿವೆ.ಇದರಿಂದಾಗಿ ಸಾವು ನೋವು ಉಂಟಾಗುತ್ತಿದೆ. ಗದ್ದೆ, ತೋಟಗಳಲಿ ಕೆಲಸ ಮಾಡುವ ಜನರ ಮೇಲೆ ಕಾಡು ಪ್ರಾಣಿಗಳು ಭೀಕರ ಧಾಳಿ ನಡೆಸುತ್ತಿವೆ. ಇದರಿಂದಾಗಿ ಜನರು ಭೀತಿಯಲ್ಲಿ ಬದುಕುವ ಪರಿಸ್ಥಿತಿ ತಲೆದೋರಿದೆ. ಇದಕ್ಕೆ ಕಾಡಿನ ವಿನಾಶವೆ ಕಾರಣ ಎಂದು ಆತಂಕ ವ್ಯಕ್ತಪಡಿಸಿದರು.
ಕಾಡಿನ ವಿನಾಶದ ಫಲವಾಗಿ ಪರಿಸರ ಅಸಮತೋಲನ ಉಂಟಾಗಿದೆ. ಆಗಾಗ್ಗೆ ಉಂಟಾಗುತ್ತಿರುವ ಭೀಕರ ಪ್ರವಾಹ ಪರಿಸ್ಥಿತಿ ,ಬರ ಪರಿಸ್ಥಿತಿ ಜನಜೀವನದ ಮೇಲೆ ಭೀಕರ ಪರಿಣಾಮ ಉಂಟು ಮಾಡುತ್ತಿದೆ. ಮರಗಳ ನಾಶದಿಂದಾಗಿ ಶುದ್ಧ ಗಾಳಿಯ ಕೊರತೆ ಉಂಟಾಗಿ ಜನರು ಹೃದಯದ ಕಾಯಿಲೆಗೆ ಒಳಗಾಗಿ ಸಾವು ನೋವಿಗೆ ಒಳಗಾಗುತ್ತಿದ್ದಾರೆ.ಮನುಷ್ಯನ ದೇಹದಲ್ಲಿ ಕಾಯಿಲೆಗಳನ್ನು ಎದುರಿಸುವ ಶಕ್ತಿ ಕಡಿಮೆ ಆಗುತ್ತಿದೆ ಎಂದು ಭೇರ್ಯ ರಾಮಕುಮಾರ ಆತಂಕ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕಾರ್ಯವಲ್ಲ. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನುಡಿದ ಅವರು ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು,ತಮ್ಮ ತಂದೆ ತಾಯಿಗಳ ಜನ್ಮದಿನದಂದು, ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿಗಳನ್ನು ನೀಡಬೇಕು. ಆ ಮೂಲಕ ಪರಿಸರ ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಎಲ್ಲರಿಂದಲೂ ಪರಿಸರ ಸಂರಕ್ಷಿಸುವ ಪ್ರತಿಜ್ಞೆ ಮಾಡಿಸಿದರು.
ಬ್ಯಾಡರಹಳ್ಳಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಭವ್ಯ, ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕುಮಾರ್ ಮೊದಲಾದವರು ಸಭೆಯಲ್ಲಿ ಮಾತನಾಡಿದರು.
ತೇಜಸ್ವಿ ತಪೋವನ ಸಂಸ್ಥೆ ಉಪಾಧ್ಯಕ್ಷರಾದ ಸ್ವಾಮಿಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷರಾದ ಕೃಷ್ಣಯ್ಯ ಸಂಸ್ಥೆಯ ಉದ್ದೇಶಗಳ ಪರಿಚಯ ಮಾಡಿಕೊಟ್ಟರು.
ಇದೆ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸುಮಾರು ನೂರು ಸಸಿಗಳನ್ನು ನೆಡಲಾಯ್ತು.
ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಯ ಶಿಕ್ಷಕರನ್ನು ಅಭಿನಂದಿಸಲಾಯಿತು.
- ಕರುನಾಡ ಕಂದ ಸುದ್ದಿ




















