ವಿಕಲಚೇತನರು, ಹಿರಿಯ ನಾಗರಿಕರು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ನೀಡಲಾಗುವ ಮಾಶಾಸನಕ್ಕೆ ಆದಾಯ ಮಿತಿಯನ್ನು ನಿಗದಿಪಡಿಸುವ ಕ್ರಮವನ್ನು ಹಿಂಪಡೆಯಲು ಒತ್ತಾಯಿಸಿದ ಅಶೋಕ ಗುಡಿಕೋಟಿ.
ಗಂಗಾವತಿ: ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವ ವಿಕಲಚೇತನರಿಗೆ, ವಿಧವೆಯರಿಗೆ ಹಾಗೂ ಹಿರಿಯ ನಾಗರಿಕರು ಸೇರಿದಂತೆ ಇನ್ನಿತರರಿಗೆ ಪಿಂಚಣಿಯನ್ನು ನೀಡುತ್ತಾ ಬರುತ್ತಿದ್ದು, ಇಲ್ಲಿಯವರೆಗೂ ಪಿಂಚಣಿದಾರರಿಗೆ ಯಾವುದೇ ಆದಾಯದ ಮಿತಿಯಿಲ್ಲದೇ ಪಿಂಚಣಿ ನೀಡುತ್ತಾ ಬಂದಿದ್ದು, ಈಗ ಏಕಾಏಕಿ ಕೆಲವು ಯೋಜನೆಗಳಡಿಯ ಪಿಂಚಣಿದಾರರಿಗೆ ವಾರ್ಷಿಕ ರೂ. 32,000/- ಗಳ ಆದಾಯದ ಮಿತಿಯನ್ನು ನಿಗದಿಪಡಿಸಿರುವ ಕ್ರಮ ಖಂಡನೀಯವಾಗಿದೆ, ಕೂಡಲೇ ಈ ಕ್ರಮವನ್ನು ಹಿಂಪಡೆಯಲು ಒತ್ತಾಯಿಸಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಅಂಗವಿಕಲರ ವಿಭಾಗದ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಸರ್ಕಾರದ ಆದಾಯ ಮಿತಿ ಕ್ರಮವನ್ನು ಖಂಡಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು. ಸರ್ಕಾರ ಯಾವ ಮಾನದಂಡದ ಮೇಲೆ ಈ ಆದಾಯಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಯಕ್ಷ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರ ವಿವಿಧ ಪಿಂಚಣಿ ಯೋಜನೆಗಳಲ್ಲಿ ವ್ಯಯ ಮಾಡುತ್ತಿರುವ ಅನುದಾನವನ್ನು ಕಡಿತಗೊಳಿಸಲು ಪಿಂಚಣಿದಾರರಿಗೆ ಆದಾಯದ ಮಿತಿಯನ್ನು ಜಾರಿಗೆ ತಂದಿರುವುದು ನ್ಯಾಯಸಮ್ಮತವಾಗಿರುವುದಿಲ್ಲ. ನಾನಾ ಕಾರಣಗಳನ್ನು ನೀಡಿ ಈಗಾಗಲೇ ಕಳೆದ 3-4 ತಿಂಗಳುಗಳಿಂದ ಕೆಲವು ಪಿಂಚಣಿದಾರರಿಗೆ ಮಾಶಾಸನವನ್ನು ಸ್ಥಗಿತಗೊಳಿಸಲಾಗಿರುತ್ತದೆ. ಅದರಲ್ಲೂ ವಿಕಲಚೇತನರು ದುಡಿಯುವ ಶಕ್ತಿ ಇಲ್ಲದವರಾಗಿದ್ದು, ಸರ್ಕಾರದ ಪಿಂಚಣಿ ಮೇಲೆಯೇ ಜೀವನ ಸಾಗಿಸುತ್ತಿದ್ದಾರೆ.
2016ರ ವಿಕಲಚೇತನರ ಹಕ್ಕುಗಳ ಕಾಯ್ದೆ (RPwD) ಸೆಕ್ಷನ್ 24, 2007ರ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ ಸೆಕ್ಷನ್ 19-20 ಹಾಗೂ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ (NSAP) ನಿಯಮಗಳ ಪ್ರಕಾರ ಅಶಕ್ತರಿಗೆ ಗೌರವಯುತ ಮಾಸಾಶನ ನೀಡುವುದು ಸರ್ಕಾರದ ಹೊಣೆಯಾಗಿದೆಯೇ ಹೊರತು ಇವರ ಭಿಕ್ಷೆಯಲ್ಲ! “ನಮಗಾಗಿ ನಾವು – ನಮ್ಮಿಂದಲೇ ನಾವು” “ಸಾಮಾಜಿಕ ಭದ್ರತೆ ನಮ್ಮ ಸಾಂವಿಧಾನಿಕ ಹಕ್ಕು – ಪಿಂಚಣಿ ನಮ್ಮ ಬದುಕು!”
ಬೇರೆ ಬೇರೆ ರಾಜ್ಯಗಳಲ್ಲಿ ವಿಕಲಚೇತನರಿಗೆ ಪ್ರತಿ ತಿಂಗಳು ರೂ. 3,000/- ರಿಂದ 5,000/- ಗಳವರೆಗೆ ಮಾಶಾಸನ ನೀಡಲಾಗುತ್ತಿದ್ದು, ಯಾವುದೇ ಆದಾಯದ ಮಿತಿಯನ್ನು ಜಾರಿಗೆ ತಂದಿರುವುದಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಅಲ್ಪಸ್ವಲ್ಪ ನೀಡಲಾಗುವ ಮಾಶಾಸನದಲ್ಲಿ ವಿಕಲಚೇತನರು ಜೀವನ ನಡೆಸುವುದೇ ದುಃಸ್ಥರವಾಗಿದೆ. ಆದರೆ ಈಗ ಸರ್ಕಾರ ನಿಗದಿಪಡಿಸಿರುವ ವಾರ್ಷಿಕ ಆದಾಯ ಕೇವಲ ರೂ. 32,000/- ಇದ್ದು, ಇದು ಯಾವ ಮಾನದಂಡದ ಮೇಲೆ ನಿಗದಿಪಡಿಸಲಾಗಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕನಿಷ್ಟ ಆದಾಯ ಮಿತಿಯಲ್ಲಿ ಬರುವ ಒಬ್ಬ ಕೂಲಿ ಕಾರ್ಮಿಕನು ದಿನಕ್ಕೆ ರೂ. 500 ರಿಂದ 600 ದುಡಿಯುವುದು ಸರ್ವೇ ಸಾಮಾನ್ಯ. ಆದರೂ ಆ ಕೂಲಿ ಕಾರ್ಮಿಕ ಈಗಿನ ದುಬಾರಿ ಕಾಲದಲ್ಲಿ ಜೀವನ ನಡೆಸುವುದು ದುಃಸ್ಥರವಾಗಿದೆ.
ಇಂತಹ ಸಂದರ್ಭದಲ್ಲಿ ವಾರ್ಷಿಕ 32 ಸಾವಿರ ಆದಾಯ ಮಿತಿ ನಿಗದಿಪಡಿಸಿರುವುದು ಹಾಸ್ಯಾಸ್ಪದವಾಗಿದೆ. ಅಷ್ಟಲ್ಲದೇ ವಿವಿಧ ನಾನಾ ಕಾರಣಗಳನ್ನು ನೀಡಿ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಎ.ಪಿ.ಎಲ್ ಗೆ ವರ್ಗಾಂತರಿಸಲಾಗುತ್ತಿದೆ. ಇದಕ್ಕೆ ಕಾರಣ ಕೇಳಿದರೆ ಜಿ.ಎಸ್.ಟಿ ಹೊಂದಿದ್ದೀರಿ, ಐ.ಟಿ ರಿಟರ್ನ್ಸ್ ಸಲ್ಲಿಸಿದ್ದೀರಿ ಎಂದು ಸಬೂಬು ಹೇಳಲಾಗುತ್ತಿದೆ.
ಆದರೆ ಒಬ್ಬ ಸಣ್ಣ ವ್ಯಾಪಾರಿ, ವ್ಯಾಪಾರದ ಅಭಿವೃದ್ಧಿ ದೃಷ್ಟಿಯಿಂದ ಬ್ಯಾಂಕ್ ಸಾಲ ಪಡೆಯಬೇಕಾದರೆ, ಬ್ಯಾಂಕ್‌ಗಳು ಐ.ಟಿ ರಿಟರ್ನ್ಸ್ ಮೇಲೆಯೇ ಸಾಲ ನೀಡುತ್ತಿವೆ. ಸದರಿ ಸಣ್ಣ ವ್ಯಾಪಾರಿಗಳು ಐ.ಟಿ ರಿಟರ್ನ್ಸ್ ಸಲ್ಲಿಸಿದ್ದಾರೆಯೇ ಹೊರತು, ಆದಾಯ ತೆರಿಗೆ ಇಲಾಖೆಯ ಆದಾಯ ಮಿತಿಗಿಂತ ಹೆಚ್ಚಿನ ಆದಾಯ ಗಳಿಸುತ್ತಿಲ್ಲ ಹಾಗೂ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಿಲ್ಲವಾದರೂ ಅಂತಹ ಬಿ.ಪಿ.ಎಲ್ ಕಾರ್ಡುದಾರರನ್ನೂ ಎಪಿಎಲ್ ಗೆ ವರ್ಗಾಂತರಿಸಿ ಸಾಮಾಜಿಕ ನ್ಯಾಯದಲ್ಲಿ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ನಕಲಿ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಸ್ಥಗಿತಗೊಳಿಸುವ ಕ್ರಮ ಸ್ವಾಗತಾರ್ಹವಾಗಿದ್ದು, ಆದರೆ ನಕಲಿ ಫಲಾನುಭವಿಗಳ ಜೊತೆಗೆ ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಸರ್ಕಾರ ಕ್ರಮವಹಿಸಬೇಕಾಗಿದೆ. ಈಗ ನಿಗದಿಪಡಿಸಿರುವ ಆದಾಯ ಮಿತಿಯನ್ನು ರದ್ದುಪಡಿಸಲು ಕ್ರಮವಹಿಸಬೇಕು ಹಾಗೂ ಅರ್ಹ ಫಲಾನುಭವಿಗಳ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ವರ್ಗಾಂತರಿಸಬಾರದು, ಸರ್ಕಾರ ನಿಗದಿಪಡಿಸಿರುವ ರೂ. 32,000/- ಗಳ ಆದಾಯದ ಮಿತಿಯನ್ನು ಹಿಂಪಡೆಯಬೇಕು, ವಿಕಲಚೇತನರಿಗೆ ನೀಡಲಾಗುವ ಮಾಶಾಸನವನ್ನು ರೂ. 5,000/- ಕ್ಕೆ ಹೆಚ್ಚಳ ಮಾಡಬೇಕು, ಸರಕಾರಿ ಮತ್ತು ಖಾಸಗಿ ಉದ್ಯೋಗಗಳ ನೇಮಕಾತಿಯ ವಿಕಲಚೇತನರ ಮೀಸಲಾತಿಯಲ್ಲಿ ಎಲ್ಲಾ ವಿಧದ ವಿಕಲಚೇತನರಿಗೂ ಸಮಾನ ಅವಕಾಶ ಮಾಡಿಕೊಡಬೇಕು, ಮುಂಬರುವ ಗ್ರಾ.ಪಂ / ತಾ.ಪಂ., / ಜಿ.ಪಂ / ಸ್ಥಳೀಯ ಸಂಸ್ಥೆ / ಶಾಸನ ಸಭೆಗಳ ಚುನಾವಣೆಯಲ್ಲಿ ವಿಕಲಚೇತನ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರಗಳನ್ನು ಮೀಸಲಿಡಬೇಕು, ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ವಿಕಲಚೇತನರ ಕುಂದುಕೊರತೆಗಳ ಸಭೆಗಳನ್ನು ಕಡ್ಡಾಯವಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಸ್ತುಬದ್ಧ ಆದೇಶ ಹೊರಡಿಸಬೇಕು, ಎಂ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ಹಾಗೂ ವಿ.ಆರ್.ಡಬ್ಯ್ಲೂ ಗಳಿಗೆ ಕನಿಷ್ಟ ವೇತನ ಮಾಡಬೇಕು, ವಿಕಲಚೇತನರ 2016ರ ಕಾಯ್ದೆ ಪ್ರಕಾರ ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಲ್ಲಿ ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ ನಿರ್ಮಾಣ ಮಾಡುವ ಮೂಲಕ ಸರ್ಕಾರದ ಅರ್ಹ ಫಲಾನುಭವಿಗಳ ಜೀವನಕ್ಕೆ ಭದ್ರತೆ ನೀಡಬೇಕೆಂದು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಂಗವಿಕಲರ ವಿಭಾಗದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಮಂಜುನಾಥ ಹೊಸಕೇರಿ ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ


















