ಬಳ್ಳಾರಿ / ಕಂಪ್ಲಿ : ಕುಡತಿನಿ ಭೂ ಸಂತ್ರಸ್ತರು ಕಳೆದ ಎರಡ್ಮೂರು ವರ್ಷದಿಂದ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಾ ಬಂದಿದ್ದು, ಇಲ್ಲಿನ ಭೂ ಸಂತ್ರಸ್ತರ ಹೋರಾಟವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಡೆಗಣಿಸಿರುವುದು ವಿಪರ್ಯಾಸವಾಗಿದೆ. ನ್ಯಾಯ ದೊರಕುವರೆಗೂ ಹೋರಾಟ ಅತಿಮುಖ್ಯವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಳ್ಳಾರಿ ನಗರದಲ್ಲಿ ನಡೆದ ಬಿಜೆಪಿಯ ಎಸ್ಐಆರ್ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಸಭೆಯಲ್ಲಿ ಪಾಲ್ಗೊಂಡ ನಂತರ ಕುಡತಿನಿ ಮಾರ್ಗವಾಗಿ ಹೊಸಪೇಟೆಗೆ ತೆರಳುವ ಮಾರ್ಗ ಮಧ್ಯದ ಕುಡತಿನಿಯ ಬೈಪಾಸ್ ರಸ್ತೆಯಲ್ಲಿ ಭೂ ಸಂತ್ರಸ್ತರ ಹೋರಾಟ ಅವರ ಕಾರು ನಿಲ್ಲಿಸಿ, ಲಕ್ಷ್ಮೀ ಮಿತ್ತಲ್ಗೆ ನೀಡಿದ್ದ ರೈತರ ಸಾಕಷ್ಟು ಜಮೀನನ್ನು ಸರ್ಕಾರ ಮುಖೇನ ಕೆಐಎಡಿಬಿ ಮೂಲಕ ಜಿಂದಲ್ಗೆ ಭೂಮಿ ಪರಭಾರೆ ಮಾಡಿದೆ. ಇದರಿಂದ ಇಲ್ಲಿನ ಭೂ ಸಂತ್ರಸ್ತರಿಗೆ ಅನ್ಯಾಯವಾಗಿದೆ ಎಂಬ ಅಳಲನ್ನು ತೋಡಿಕೊಂಡ ನಂತರ ರೈತರಿಗೆ ಭೂಬೆಲೆಯಲ್ಲಿ ವಂಚಿಸಿದ್ದು, ನಮಗೆ ನ್ಯಾಯ ಕೊಡಿಸಬೇಕೆಂದು ನೀಡಿದ ಮನವಿ ಪತ್ರ ಸ್ಚೀಕರಿಸಿ ಮಾತನಾಡಿ, ಕುಡತಿನಿ ಭಾಗದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದ್ದರೂ ಸರ್ಕಾರ ಮಾತ್ರ ಕಿವುಡರಂತೆ ವರ್ತಿಸುತ್ತಿದೆ. ಈಗಾಗಲೇ ರೈತರು ಸೇರಿದಂತೆ ಜನ ಸಾಮಾನ್ಯರು ಜನ ವಿರೋಧ ಸರ್ಕಾರದ ವಿರುದ್ಧ ಆಕ್ರೋಶಿತರಾಗಿದ್ದಾರೆ. ಇಲ್ಲಿನ ರೈತರಿಗೆ ನ್ಯಾಯ ಕೊಡಿಸುವುದು ನಮ್ಮ ಧ್ಯೇಯವಾಗಿದೆ. ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ, ರೈತರ ಬೇಡಿಕೆ ಈಡೇರಿಸಲಾಗುವುದು ಎಂದರು.
ನಂತರ ಭೂ ಸಂತ್ರಸ್ತ ಹೋರಾಟಗಾರರು ಮಾತನಾಡಿ, ಕಳೆದ ಹನ್ನೇರಡು ವರ್ಷದ ಹಿಂದೆ ಕುಡತಿನಿ ಪ್ರದೇಶದಲ್ಲಿ ಮೂರು ಬೃಹತ್ ಕೈಗಾರಿಗಳ ಸ್ಥಾಪನೆಯ ಉದ್ದೇಶದಿಂದ ಸರ್ಕಾರ ಕೆಐಎಡಿಬಿ ಮೂಲಕ 12 ವರೆ ಸಾವಿರ ಎಕರೆ ಜಮೀನನ್ನು ಏಳು ಗ್ರಾಮಗಳ ರೈತರರಿಂದ ಬಲವಂತವಾಗಿ ಸ್ವಾಧೀನಪಡಿಸಿಕೊಂಡಿದೆ. ಮೋಸದ ಭೂ ಬೆಲೆಗೆ ಪಡೆದಿದೆ. ಅಂದಿನಿಂದ ಇಲ್ಲಿತನಕ ನಿರಂತರವಾಗಿ ಧರಣಿ ಸತ್ಯಾಗ್ರಹ ಮಾಡಿಕೊಂಡು ಬರಲಾಗಿದೆ. ಸರ್ಕಾರ ಇದ್ದರೂ ಇಲ್ಲದಂತಾಗಿದೆ. ನಮಗೆ ನ್ಯಾಯ ಕೊಡಿಸಿ. 2010ರಲ್ಲಿ ಕೆಐಎಡಿಬಿಯವರು ಆರ್ಸೆಲರ್ ಮಿತ್ತಲ್ಗಾಗಿ 5300 ಎಕರೆ ನೋಟಿಫಿಕೇಷನ್ ಆದ ಜಮೀನುಗಳನ್ನು ಅರ್ಸೆಲರ್ ಮಿತ್ತಲ್ ಕಂಪನಿಯವರು 15 ವರ್ಷವಾದರೂ ಕಾರ್ಖಾನೆ ಸ್ಥಾಪಿಸಿಲ್ಲ. ಸದರಿ ಕಂಪನಿಯವರು ಜಮೀನುಗಳನ್ನು ವಾಪಸ್ಸು ಬಿಟ್ಟಿರುತ್ತಾರೆ. ಇದೇ ಜಮೀನುಗಳಲ್ಲಿ ಕೆಐಎಡಿಬಿಯವರು ಅಕ್ರಮವಾಗಿ ಜಿಂದಾಲ್ ಕಂಪನಿಗೆ ಮಾರಾಟ ಮಾಡಿದ್ದು, ಅಲ್ಲದೇ ಸುಮಾರು 4 ವರ್ಷಗಳಿಂದ ಹೋರಾಟ ಮಾಡುತ್ತಿರುವ ರೈತರಿಗೆ ಕೇಸು ಹಾಕಿಸುವುದು ಸದರಿ ಕಂಪನಿಯವರು ಹಾಗೂ ಕೆಐಎಡಿಬಿಯವರು ಸೇರಿ ಕಾನೂನು ಬಾಹಿರ ಹಾಗು ದೌರ್ಜನ್ಯಕ್ಕೆ ಮುಂದಾಗಿದ್ದಾರೆ. ಕೂಡಲೇ ಜಿಂದಲ್ ಕಂಪನಿಯವರು ಕಾರ್ಖಾನೆ ಹಾಕಿಸುವುದನ್ನು ನಿಲ್ಲಿಸಲು, ರೈತರಿಗೆ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಭೂ ಸಂತ್ರಸ್ತರಾದ ಹಡಪದ ರಮೇಶ, ಹೋಳಿಗೆ ಸಿದ್ದಪ್ಪ ವಿ.ತಿಮ್ಮಪ್ಪ, ರುದ್ರಪ್ಪ, ಎಲ್ಲಪ್ಪ, ನಾಗಪ್ಪ, ಹನುಮಂತಪ್ಪ, ಬಡಿಯಾರು ಹುಚ್ಚಪ್ಪ, ವಿ.ನಾರಾಯಣಪ್ಪ, ಪಂಪಾಪತಿ, ಕೆಂಚಪ್ಪ, ಗಂಗಮ್ಮ, ಮಲ್ಲಮ್ಮ, ಸುಂಕಮ್ಮ ಸೇರಿದಂತೆ ಭೂ ಸಂತ್ರಸ್ತರ ಹೋರಾಟಗಾರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















