ಬಳ್ಳಾರಿ / ಕಂಪ್ಲಿ : ಈ ಬಾರಿ ತುಂಗಭದ್ರಾ ಜಲಾಶಯದಲ್ಲಿ ನೀರಿದ್ದರೂ ಸಹ ಬಲದಂಡೆಯ ಎಲ್.ಎಲ್.ಸಿ ಮತ್ತು ಎಚ್.ಎಲ್.ಸಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯದ ಪರಿಣಾಮ ರೈತರು ಬೆಳೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸರ್ಕಾರ ಬರ ಪೀಡಿತ ಪ್ರದೇಶವೆಂದು ಘೋಷಿಸಿ, ಪರಿಹಾರ ಕಲ್ಪಿಸುವ ಮೂಲಕ ರೈತರ ಬದುಕಿಗೆ ಬೆಳಕಾಗಬೇಕು ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಕಂಪ್ಲಿ ಮಂಡಲ ಯುವ ಮೋರ್ಚ ಅಧ್ಯಕ್ಷ ಬಡಿಗೇರ್ ವಿರೇಶ ಆಗ್ರಹಿಸಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿ, ಹಲವು ವರ್ಷಗಳ ಕಾಲ ಪ್ರತಿ ಬಾರಿ ಸಮರ್ಪಕವಾಗಿ ನೀರು ಹರಿಸಿದ ಹಿನ್ನಲೆ ರೈತರು ಬದುಕು ಸಮೃದ್ಧಿಯಾಗಿತ್ತು. ಆದರೆ, ಈಗ ನೀರಿಲ್ಲದೇ, ರೈತರ ಜೀವನ ಕಷ್ಟಕರವಾಗಿದೆ. ಜಲಾಶಯದಲ್ಲಿ ನೀರಿದ್ದರೂ ಸಹ ರೈತರಿಗೆ ನೀರಿಲ್ಲ. ಸರ್ಕಾರ ಮತ್ತು ಸ್ಥಳೀಯ ಶಾಸಕರಿಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಂತಾಗಿದೆ. ಕಂಪ್ಲಿ, ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ರೈತರು ಬೆಳೆ ಬೆಳೆಯದೇ ಕಂಗಾಲಾಗಿದ್ದಾರೆ. ಹೇಗಪ್ಪಾ ಮುಂದಿನ ಜೀವನ ಎನ್ನುವ ಸ್ಥಿತಿಯಲ್ಲಿ ರೈತರಿದ್ದಾರೆ. ತುಂಗಭದ್ರಾ ಜಲಾಶಯ ಕರ್ನಾಟಕದಲ್ಲಿದ್ದರೂ ಆಂಧ್ರದವರ ಹಿಡಿತದಲ್ಲಿಂದ್ದಂತೆ ಇದೆ ಹಾಗಾಗಿ ರಾಜ್ಯ ಸರ್ಕಾರ ಕಂಪ್ಲಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















