ಕಲಾ ತಂಡಗಳೊಂದಿಗೆ ಪ್ರಕಾರದೊಂದಿಗೆ ಸಂಭ್ರಮ ಸಡಗರ
ಬಳ್ಳಾರಿ / ಕಂಪ್ಲಿ : ಪಟ್ಟಣದ 2/11ನೇ ವಾರ್ಡಿನ ಕುಂಬಾರ್ ಓಣಿಯಲ್ಲಿರುವ ಆರಾಧ್ಯ ದೇವತೆಗಳಾದ ಶ್ರೀ ಮಾರೆಮ್ಮ ಮತ್ತು ಹುಲಿಗೆಮ್ಮ ದೇವಿಯ ಗಂಗೆಸ್ಥಳ, ಪೂಜಾ ಮಹೋತ್ಸವ ಮತ್ತು ಉತ್ಸವ ಮೆರವಣಿಗೆ ವಿವಿಧ ಕಲಾ ಪ್ರಕಾರದೊಂದಿಗೆ ಸಂಭ್ರಮ ಸಡಗರದಿಂದ ಮಂಗಳವಾರ ಜರುಗಿತು.
ಇಲ್ಲಿನ ತುಂಗಭದ್ರ ನದಿ ದಂಡೆಯಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ಮೆರವಣಿಗೆ ಜೋಗಿ ಕಾಲುವೆ ಮುಖಾಂತರ ನಡುವಲ ಮಸೀದಿ, ಡಾರಾಜಕುಮಾರ ಮುಖ್ಯ ರಸ್ತೆ, ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನ, ಅಂಬೇಡ್ಕರ್ ವೃತ್ತಕ್ಕೆ ತೆರಳಿ, ಪುರ್ನ ಪ್ರಮುಖ ರಸ್ತೆಗಳ ಮೂಲಕ ಗಂಗಾನಗರ, ಭಾರತ್ ಚಿತ್ರಮಂದಿರ ಬಳಿಯಿಂದ ಕುಂಬಾರ್ ಓಣಿಯಲ್ಲಿರುವ ಮೂಲ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಕುಂಭ, ಸುಮಂಗಲಿಯರ ಕಳಸ, ಡೊಳ್ಳು ಕುಣಿತ, ನಂದಿ ಕೋಲು, ಭಜನೆ, ಕೋಲಾಟ, ಚೆಂಡೆ ಜೊತೆಗೆ ಹುಡುಗಿಯರ ತಾಳ ಕುಣಿತ, ಹುಲಿ ಕುಣಿತ, ಮಂಗಳವಾಧ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರಗು ನೀಡಿದವು. ಆಕರ್ಷಣೀಯ ಕಲಾ ತಂಡಗಳ ಪ್ರದರ್ಶನವನ್ನು ರಸ್ತೆಯುದ್ದಕ್ಕೂ ನೆರೆದಿದ್ದ ಜನರು ನೋಡಿ ಕಣ್ತುಂಬಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ಮರಿಯಪ್ಪ, ಗಂಡಿ ಗಣೇಶ, ಶರ್ಮಸ್‌ಸಾಬ್, ಬಿ.ಮಹೇಶ, ಎನ್.ಬಸವರಾಜ, ವರ್ದಿ ಜಾಕೀರ್ ಹುಸೇನ್, ಕಾಸಿಂ, ರಾಜ, ಗೌಸ್, ಮಂಜು, ಸಿದ್ದು, ಬಸಪ್ಪ, ಬಿ.ಮಂಜು ಸೇರಿದಂತೆ ಸ್ಥಳೀಯ, ತಾಲೂಕು, ಜಿಲ್ಲೆ ಸೇರಿದಂತೆ ಸಾಕಷ್ಟು ಭಕ್ತರು ಜನರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















