
ಕಲ್ಲು ಮಣ್ಣು ರಸ್ತೆ ,ಕೆಸರು ಗುಂಡಿಗಳಲ್ಲೇ ಗ್ರಾಮಸ್ಥರ ನಿತ್ಯ ಸಂಚಾರ! ”

ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದ ಬೇವಿನಹಳ್ಳಿ ಮಜರೆ ದಿನ್ನೆಪಾಳ್ಯ ರಸ್ತೆ.
ಕೊರಟಗೆರೆ (ಕೋಳಾಲ) : ತಾಲ್ಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ವಜ್ಜಿನಕುರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬೇವಿನಹಳ್ಳಿ ಮಜರೆ ದಿನ್ನೆಪಾಳ್ಯ ರಸ್ತೆಯು ಹಲವು ವರ್ಷಗಳಿಂದ ಡಾಂಬರೀಕರಣ ಕಾಣದೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರಸ್ತೆಯುದ್ದಕ್ಕೂ ಮಣ್ಣಿನ ಹಾದಿ ನಿರ್ಮಾಣವಾಗಿದ್ದು, ಮಳೆ ಬಂದಾಗ ಕೆಸರುಮಯವಾಗಿ ದೊಡ್ಡ ದೊಡ್ಡ ಗುಂಡಿಗಳಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಊರಿನಲ್ಲಿ ಹಾಲಿನ ಡೈರಿ ಇದೆ ವಾಹನ ಊರಿಗೆ ಬರುವುದಿಲ್ಲ, ಪಾದಚಾರಿಗಳು, ರೈತರು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ನಿತ್ಯವೂ ಸಂಕಷ್ಟ ಎದುರಿಸುತ್ತಿದ್ದಾರೆ.
ವರ್ಷಗಳು ಕಳೆದರೂ ಈ ರಸ್ತೆಯ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದ್ದು, ತುರ್ತು ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ.
ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ 60 ವರ್ಷಗಳಿಂದ ಇಂತಹ ಸ್ಥಿತಿಯಲ್ಲಿ ಮುನ್ನಡೆಯುತ್ತಿದ್ದೇವೆ. ರಸ್ತೆ ಅಭಿವದ್ಧಿಗೆ ಮಾಡಿಕೊಂಡ ಮನವಿಗೆ ಯಾರು ಸ್ಪಂದಿಸುತ್ತಿಲ್ಲ ಅನ್ನುವುದು ಸ್ಥಳೀಯರ ದೂರು. ಓಟು ಬಂದಾಗ ಭರವಸೆ ನೀಡಿ ಹೋಗುವ ಮಂದಿ ಮತ್ತೆ ಕಣ್ಣೆತ್ತಿಯೂ ನೋಡುವುದಿಲ್ಲ, 45 ಮನೆಗಳಿವೆ 150 ವೋಟುಗಳಿವೆ ಆದರೆ ಒಂದು ಅಂಗನವಾಡಿ ಕೇಂದ್ರವಿಲ್ಲ ಶಾಲೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ , ಈ ಊರಿನ ಮಣ್ಣಿನ ರಸ್ತೆಯನ್ನು ನೋಡಿದರೆ ಯಾರು ಹೆಣ್ಣು ಕೊಡುವುದಿಲ್ಲ , ಹೆಸರಿಗಷ್ಟೇ ಊರು ಈ ಊರಿಗಿಲ್ಲ ರಸ್ತೆ ಭಾಗ್ಯಎಂಬುವುದು ಈ ಗ್ರಾಮದ ರಮ್ಯಾ ರವರ ಅಸಮಾಧಾನದ ನುಡಿ.
ಮಳೆಗಾಲದಲ್ಲಂತೂ ತೊಂದರೆಗಳ ಸರಮಾಲೆಯೇ ತೆರೆದುಕೊಳ್ಳುತ್ತವೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ನೀರು ತುಂಬಿಕೊಂಡಿರುತ್ತದೆ. ಈ ರಸ್ತೆಯಲ್ಲಿ ಬರುವ ದ್ವಿಚಕ್ರ ವಾಹನ ಸವಾರರು ಶಾಲಾ ಮಕ್ಕಳು ಮತ್ತು ವೃದ್ಧರು ಗುಂಡಿಯ ಬಗ್ಗೆ ಅರಿವಿಲ್ಲದೆ ಕೊಚ್ಚೆ ನೀರಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಗಾಯವನ್ನು ವಾಸಿ ಮಾಡಿಕೊಳ್ಳಲು ಮತ್ತು ಹಾನಿವಾಗುವ ವಾಹನಗಳ ರಿಪೇರಿಗೆ ಸಾವಿರಾರು ರೂ. ಖರ್ಚು ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಇದರ ಜೊತೆಗೆ ಈ ಭಾಗದ ಹೈನುಗಾರಿಕೆ ಹೆಚ್ಚಾಗಿದ್ದು, ಅವುಗಳ ಫೀಲ್ಡ್ ಮತ್ತು ದಾಸಾಯನಿಕ ಗೊಬ್ಬರಗಳ ಚೀಲಗಳನ್ನು ಒಂದುವರೆ ಕಿಲೋಮೀಟರ್ ತಲೆ ಮೇಲೆ ಹೊತ್ತುಕೊಂಡು ಬರಬೇಕು.ಇಷ್ಟೆಲ್ಲಾ ಸಮಸ್ಯೆಗಳ ಅರಿವು ಇರುವ ಸ್ಥಳೀಯ ಜನಪ್ರತಿನಿಧಿಗಳು ಕ್ಷೇತ್ರದ ಶಾಸಕರು, ಸರ್ಕಾರಿ ಅಧಿಕಾರಿಗಳು, ಸಂಬಂಧಪಟ್ಟ ರಸ್ತೆ ಅಭಿವೃದ್ಧಿ ಇಲಾಖೆಗಳು, ಇಲ್ಲವೆ ಸಂಸದರನ್ನು ಭೇಟಿ ಮಾಡಿ ಹಾಳಾಗಿರುವ ರಸ್ತೆಯ ಅಭಿವೃದ್ಧಿಗೆ ಅರ್ಜಿ ಸಲ್ಲಿಸಿದರು ಮುಂದಾಗುತ್ತಿಲ್ಲ ಎಂದು ಗ್ರಾಮ ಪಂಚಾಯತಿ ಸದಸ್ಯ ಲಕ್ಷ್ಮಮ್ಮ ಶಾಪ ಹಾಕಿದರು.
ಸಾರ್ವಜನಿಕರ ಪ್ರಮುಖ ಒತ್ತಾಯ:
ಬೇವಿನಹಳ್ಳಿ ಮಜರೆ ದಿನ್ನೆಪಾಳ್ಯ ರಸ್ತೆಯನ್ನು ತಕ್ಷಣವೇ ಅಭಿವೃದ್ಧಿಪಡಿಸಿ, ಗುಣಮಟ್ಟದ ಡಾಂಬರೀಕರಣ ಕಾಮಗಾರಿಯನ್ನು ಕೈಗೊಳ್ಳಬೇಕು. ಕೇವಲ ತಾತ್ಕಾಲಿಕ ದುರಸ್ತಿ ಮಾಡದೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಇನ್ನು ರಸ್ತೆಯ ಬಗ್ಗೆ ಗಮನ ಹರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳಿಗೂ ನಮ್ಮ ಊರಿಗೆ ಬರಲು ಅವಕಾಶವಿಲ್ಲ ಹಾಗೂ ನಾವು ಮತದಾನ ಮಾಡುವುದಿಲ್ಲ ಎಂದು ಚುನಾಯಿತ ಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದರು.
ವರದಿ ಪ್ರಸನ್ನಕುಮಾರ್. ಎಸ್. ಕೊರಟಗೆರೆ.




















