ಎಷ್ಟೊಂದನ್ನ ಬಿಟ್ಟಿದ್ದೇನೆ
ನೋಡಿಯೂ ಬದುಕಲ್ಲಿ
ಬೆನ್ನಿಗೆ ಮುಳುವಾಗಿ
ನಿತ್ಯ ಚುಚ್ಚಿದವರನ್ನು
ಮುಖವಾಡ ಧರಿಸಿ
ನಗುತ ಧಗೆ ಹಚ್ಚಿದವರನ್ನು
ನಗುತಲೇ ನಗುವನ್ನ
ಅಳುವಾಗಿಸಿದವರನ್ನ
ನೋಡು ನೋಡುತ್ತಲೇ
ನನ್ನದನ್ನ ಕಸಿದುಕೊಂಡವರನ್ನ
ಕೈಚಾಚಿ ಬೇಡಿ
ಕಸಿದುಕೊಂಡವರನ್ನ
ಮನಕೆ ಲಗ್ಗೆ ಇಟ್ಟು
ಮನವನ್ನೆ ಮಸಣವಾಗಿಸಿದವರನ್ನ
ಒಂಟಿಯಾಗಿಹೆನೆಂದು
ಏಕಾಕಿಯಾಗಿಸಿ ಹೊರಟವರನ್ನ
ಅದೆಷ್ಟು ಮುಖವಾಡಗಳನ್ನ
ನೋಡಿಯೂ ನೋಡದಂತೆ ಹಾಗೆಯೇ ಬಿಟ್ಟಿದ್ದೆನಲ್ಲಾ
ಹೇಳಬೇಕಾದದ್ದನ್ನೆಲ್ಲಾ ಹಾಗೆಯೇ
ಉಳಿಸಿಬಿಟ್ಟಿದ್ದೆನಲ್ಲಾ…
- ಡಾ.ಲೋಹಿತೇಶ್ವರಿ ಎಸ್. ಪಿ.




















