
ರಾಮಸಾಗರದಲ್ಲಿ 13ನೇ ವರ್ಷದ ಸಾಮೂಹಿಕ ವಿವಾಹ: 21 ಜೋಡಿಗಳು ದಾಂಪತ್ಯಕ್ಕೆ : ಆರ್.ಎಂ. ರಾಮಯ್ಯ ನೇತೃತ್ವ.
ಕಂಪ್ಲಿ: “ಜನರು ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಮೆರೆಸಲು ಆಡಂಬರದ ವಿವಾಹಗಳನ್ನು ಮಾಡಿಕೊಂಡು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇಂತಹ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಸರಳ ಸಾಮೂಹಿಕ ವಿವಾಹಗಳಿಗೆ ಆದ್ಯತೆ ನೀಡುವ ಮೂಲಕ ಬದುಕನ್ನು ಸುಂದರಗೊಳಿಸಬೇಕು” ಎಂದು ಶಾಸಕ ಜೆ.ಎನ್. ಗಣೇಶ್ ಕರೆ ನೀಡಿದರು.
ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ ಬಣ) ತಾಲೂಕು ಸಂಚಾಲಕ ಹಾಗೂ ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಆರ್.ಎಂ. ರಾಮಯ್ಯ ನೇತೃತ್ವದಲ್ಲಿ ಗೌರಿ ಹಬ್ಬದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗಳು ಶಿಸ್ತು, ಸಂಯಮದಿಂದ ಬಾಳ್ವೆ ನಡೆಸಬೇಕು. ತಂದೆ-ತಾಯಿ, ಅತ್ತೆ-ಮಾವಂದಿರನ್ನು ಗೌರವದಿಂದ ಕಾಣಬೇಕು. ಕಾರ್ಯಕ್ರಮಗಳಲ್ಲಿ ಹಾರ ಹಾಕಿ, ಪಟಾಕಿ ಸಿಡಿಸಿ ಹಣ ವ್ಯರ್ಥ ಮಾಡುವ ಬದಲು, ಬಡ ಮಕ್ಕಳಿಗೆ ಪುಸ್ತಕ ವಿತರಿಸುವಂತಹ ಮಾನವೀಯ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡಬೇಕು. ಆರ್.ಎಂ. ರಾಮಯ್ಯ ಅವರು ಸತತ 13 ವರ್ಷಗಳಿಂದ ಬಡವರ ಹಿತಕ್ಕಾಗಿ ಸಾಮೂಹಿಕ ವಿವಾಹ ಆಯೋಜಿಸುತ್ತಿರುವುದು ಶ್ಲಾಘನೀಯ. ಪಕ್ಷಕ್ಕಾಗಿ ದುಡಿದ ಸಮಾಜದ ಮುಖಂಡರಿಗೆ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸೂಕ್ತ ಸ್ಥಾನಮಾನ ನೀಡಿ ಗೆಲ್ಲಿಸಲಾಗುವುದು” ಎಂದು ಭರವಸೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ಹಾಗೂ ಕೆಆರ್‌ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎ. ಮಾನಯ್ಯ ಮಾತನಾಡಿ, “ಸ್ಥಳೀಯ ಶಾಸಕರು ರೈತರು ಮತ್ತು ಜನಪರವಾಗಿ ಕ್ರಿಯಾಶೀಲರಾಗಿ ಶ್ರಮಿಸುತ್ತಿದ್ದಾರೆ. ಸತತ 13 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ನಡೆಸುವ ಮೂಲಕ ಆರ್.ಎಂ. ರಾಮಯ್ಯ ಅವರು ರಾಮಸಾಗರ ಗ್ರಾಮದ ಕೀರ್ತಿಯನ್ನು ಜಿಲ್ಲೆಗೆ ಪಸರಿಸಿದ್ದಾರೆ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆರ್.ಎಂ. ರಾಮಯ್ಯ, “ಎಲ್ಲರ ಸಹಕಾರದಿಂದ ಆಯೋಜಿಸಿರುವ ಈ ಸಾಮೂಹಿಕ ವಿವಾಹವು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗಿದೆ” ಎಂದು ತಿಳಿಸಿದರು.
ಸಮಾರಂಭದಲ್ಲಿ ಒಟ್ಟು 21 ಜೋಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟವು. ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ನರಸಪ್ಪ, ಜೆಸ್ಕಾಂ ನಿರ್ದೇಶಕ ಕೆ. ಷಣ್ಮುಖಪ್ಪ, ಮುಖಂಡರಾದ ಎಚ್. ಶಿವಶಂಕರಗೌಡ, ಬಿ. ನಾರಾಯಣಪ್ಪ, ಶೇಖಣ್ಣ, ಜಿ. ರಾಮಣ್ಣ, ಹೊನ್ನಳ್ಳಿ ಗಂಗಾಧರ, ಸಿ.ಆರ್. ಹನುಮಂತ, ಸಿದ್ದಪ್ಪ, ಎ.ಸಿ. ದಾನಪ್ಪ, ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ಅನ್ನಸಂತರ್ಪಣೆ ನೆರವೇರಿತು.
ವರದಿ : ಜಿಲಾನಸಾಬ್ ಬಡಿಗೇರ್




















