
ಬಳ್ಳಾರಿ / ಕಂಪ್ಲಿ: ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದ ಹಾಗೂ ಜಲಾಶಯದ ಕ್ರೆಸ್ಟ್ಗೇಟ್ಗಳ ಶಿಥಿಲಗೊಂಡಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ನೀರನ್ನು ನದಿಗೆ ಬಿಡುತ್ತಿರುವುದರಿಂದ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ತುಂಗಭದ್ರಾ ನದಿಯ ಪ್ರವಾಹದಿಂದಾಗಿ ಕಂಪ್ಲಿ ಪಟ್ಟಣವೂ ಸೇರಿದಂತೆ ಕೆಲವು ಗ್ರಾಮಗಳು ನಲುಗಿ ಹೋಗಿವೆ.
ತುಂಗಭದ್ರಾ ನದಿಗೆ 1.22.ಲಕ್ಷ ಕ್ಯೂಸೆಕ್ಸ್ ನೀರನ್ನು ಬಿಟ್ಟಿರುವುದರಿಂದ ಕೋಟೆಯಲ್ಲಿ ತುಂಗಭದ್ರಾ ನದಿಗೆ ನಿರ್ಮಿಸಲಾದ ಕಂಪ್ಲಿ ಗಂಗಾವತಿ ಸಂಪರ್ಕಿಸುವ ಸೇತುವೆ ನೀರಿನಲ್ಲಿ ಮುಳುಗಿದ್ದು, ಮೂರನೇ ದಿನವೂ ವಾಹನ ಹಾಗೂ ಜನರ ಸಂಚಾರ ಸ್ಥಗಿತಗೊಂಡಿದೆ. ನದಿ ತೀರದ ಹೊಳೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ನೀರು ನುಗ್ಗಿದ್ದರೆ, ಕೋಟೆ ಪಂಪಾಪತಿ ದೇವಸ್ಥಾನ ಹತ್ತಿರದ ಉತ್ತರ ಕ್ರಿಯಾಮಂಟಪ, ಮಾಧವತೀರ್ಥರ ಬೃಂದಾವನ ಜಲಾವೃತಗೊಂಡಿವೆ. ಕೋಟೆಯ ಸ್ಮಶಾನ ರಸ್ತೆ ಜಲಾವೃತಗೊಂಡು ಶವಗಳ ಅಂತ್ಯಕ್ರಿಯೆಗೆ ಹರಿಗೋಲಿನಲ್ಲಿ ತೆರಳುವ ಪರಿಸ್ಥಿತಿ ತಲೆದೋರಿದ್ದರೆ, ನದಿ ತೀರದ ಕಬ್ಬು,ಬಾಳೆ,ಭತ್ತದ ಜಮೀನುಗಳಿಗೆ ನೀರು ನುಗ್ಗಿದೆ. ಕಂಪ್ಲಿ ಕೋಟೆಯಿಂದ ರಾಮಸಾಗರಕ್ಕೆ ಸಂಪರ್ಕ ಕಲ್ಪಿಸುವ ಮಾಗಾಣಿ ರಸ್ತೆ ಜಲಾವೃತಗೊಂಡಿದೆ.

ತುಂಗಭದ್ರಾ ನದಿಯ ಪ್ರವಾಹದ ಹಿನ್ನೀರು ನುಗ್ಗಿ ಸಿರಗುಪ್ಪಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 49 ರ ಸಣಾಪುರ ಗ್ರಾಮದ ಹತ್ತಿರ ಇಟಗಿ ಹಳ್ಳದ ಸೇತುವೆ ಮುಳುಗಿದ್ದು, ಇಟಗಿ, ಮಣ್ಣೂರು,ಸೂಗೂರು ಸೇರಿದಂತೆ ಸಿರಗುಪ್ಪ ಸಂಪರ್ಕ ಕಡಿತಗೊಂಡಿದ್ದು, ಪ್ರಯಾಣಿಕರು ಸುತ್ತು ಬಳಸಿ ಸಂಚರಿಸಬೇಕಾಗಿದೆ.
ನದಿ ತೀರದಲ್ಲಿ ಪಂಪ್ಸೆಟ್ಗಳ ಸ್ಥಳಾಂತರ : ತಾಲ್ಲೂಕಿನ ಸಣಾಪುರ,ಇಟಗಿ ಗ್ರಾಮಗಳ ನದಿ ತೀರದಲ್ಲಿ ಬೇರೆ ಬೇರೆ ಗ್ರಾಮಗಳ ರೈತರು ನೂರಾರು ಪಂಪ್ಸೆಟ್ಗಳನ್ನು ಅಳವಡಿಸಿದ್ದಾರೆ. ಆದರೆ, ಪ್ರತಿ ಭಾರಿ ನದಿಯಲ್ಲಿ ಪ್ರವಾಹ ಬಂದಾಗ ನದಿ ದಂಡೆಯಲ್ಲಿನ ಪಂಪ್ಸೆಟ್ಗಳನ್ನು ಸುರಕ್ಷತೆಗಾಗಿ ಬೇರೆ ಕಡೆಗೆ ಸ್ಥಳಾಂತರ ಮಾಡುವ ಕಾರ್ಯ ರೈತರು ಮಾಡಬೇಕಾಗಿದೆ. ಈ ಮೊದಲು ಜುಲೈ ತಿಂಗಳಲ್ಲಿ ಪ್ರವಾಹ ಬಂದಾಗ ರೈತರು ಪಂಪ್ಸೆಟ್ಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಪುನಃ ಜೋಡಿಸಿದ್ದರು. ಇದೀಗ ಮತ್ತೆ ಪ್ರವಾಹ ಬಂದಿರುವುದರಿಂದ ರೈತರು ತಮ್ಮ ಪಂಪ್ಸೆಟ್ಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವಲ್ಲಿ ನಿರತರಾಗಿದ್ದಾರೆ. ಪ್ರತಿಸಲ ಪ್ರವಾಹ ಬಂದಾಗ ಸ್ಥಳಾಂತರ ಮಾಡುವುದು ಮತ್ತೆ ಜೋಡಿಸುವುದು ಇದೇ ಕಾಯಕವಾಗಿದೆ. ಇದರಿಂದ ಸಾವಿರಾರು ರೂಗಳ ಖರ್ಚು ಮಾಡಬೇಕಾಗಿದೆ ಎಂದು ರೈತರು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ತುಂಗಭದ್ರಾ ನದಿಯ ಪ್ರವಾಹಕ್ಕೆ ತಾಲ್ಲೂಕಿನ ಜನತೆ ನಲುಗಿ ಹೋಗಿದ್ದಾರೆ.
ತುಂಗಭದ್ರಾ ನದಿಯಲ್ಲಿ ಪ್ರವಾಹ ಅಧಿಕವಾದರೆ, ಕೋಟೆಯ ಮೀನುಗಾರರ ಕಾಲೋನಿಗೆ ನೀರು ನುಗ್ಗಲಿದ್ದು, ಅವರಿಗಾಗಿ ಕಾಳಜಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನದಿ ತೀರದ ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುವುದು. ಜನರು ಶುದ್ಧ ಕುಡಿಯುವ ನೀರನ್ನು ಸೇವಿಸಬೇಕು ಹಾಗೂ ಬಟ್ಟೆ ತೊಳೆಯಲು, ಮೀನು ಬೇಟೆಗೆ ನದಿಗೆ ಇಳಿಯಬಾರದು. ಪ್ರವಾಹ ಪರಿಸ್ಥಿತಿ ಬಗ್ಗೆ ಕಂದಾಯ,ಆರೋಗ್ಯ, ಪೊಲೀಸ್,ಪುರಸಭೆ ಹಾಗೂ ಜೆಸ್ಕಾಂ ಇಲಾಖೆ ಕಟ್ಟೆಚ್ಚರ ವಹಿಸಿದೆ.
- ಜೂಗಲ್ ಮಂಜುನಾಯಕ, ತಹಶೀಲ್ದಾರರು, ಕಂಪ್ಲಿ.
ವರದಿ : ಜಿಲಾನಸಾಬ್ ಬಡಿಗೇರ್



















