ಬಳ್ಳಾರಿ / ಕಂಪ್ಲಿ : ಸಮಾಜದಲ್ಲಿ ಎದುರಾದ ಅನೇಕ ಕಷ್ಟ, ಅವಮಾನಗಳನ್ನು ಸಹಿಸಿಕೊಂಡು ಜೀವನವಿಡೀ ಹೋರಾಟ ನಡೆಸಿದ ಸಾವಿತ್ರಿಬಾಯಿ ಫುಲೆ ಅವರು ದಲಿತರು ಮತ್ತು ಮಹಿಳೆಯರ ಹೃದಯದಲ್ಲಿ ಅಕ್ಷರಬೀಜ ಬಿತ್ತಿದ ಶಿಕ್ಷಣ ಸಾಧಕಿ ಎಂದು ಮುಖ್ಯೋಪಾಧ್ಯಾಯನಿ ಕೆ. ಶ್ವೇತಾ ಅಭಿಪ್ರಾಯಪಟ್ಟರು.
ಶನಿವಾರ ಪಟ್ಟಣದ ಸ್ಥಳೀಯ ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ
ಸಾವಿರಾರು ವರ್ಷಗಳಿಂದ ಅಕ್ಷರಲೋಕದಿಂದ ವಂಚಿತರಾದ ದಲಿತರು, ಮಹಿಳೆಯರಿಗೆ ಸ್ವತಃ ಶಿಕ್ಷಕಿಯಾಗಿ ಅಕ್ಷರಮಾಲೆ ತೊಡಿಸಿದವರು ಫುಲೆ. ಶೋಷಣೆಯಿಂದ ಪಾರಾಗಲು ಸ್ವಾಭಿಮಾನದ ಜೀವನಕ್ಕೆ ದಾರಿದೀಪವಾದ ಅಕ್ಷರಮಾತೆ. ಅವರ ಜಯಂತಿ ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಾಲ ವಿಧವೆಯರ ನಿಲಯ, ಶಾಲೆ, ಹಾಸ್ಟಲ್ಗಳನ್ನು ತೆರೆದು ಸಮಾಜ ಸುಧಾರಣೆ ಮಾಡಿದ ಜ್ಯೋತಿಭಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಯನ್ನು ಈಗಲಾದರೂ ಸ್ಮರಿಸುವ ಅವಕಾಶ ದೊರೆಕಿಸಿಕೊಟ್ಟಿರುವುದು ಅವರ ತ್ಯಾಗಕ್ಕೆ ಸಂದ ಗೌರವವಾಗಿದೆ. ಆದ್ದರಿಂದ ನಾವೆಲ್ಲಾ ಅವರನ್ನು ಮಾದರಿಯಾಗಿಟ್ಟುಕೊಂಡು ಶಿಕ್ಷಣ ಪಡೆಯುವ ಮೂಲಕ ಸ್ವತಂತ್ರ, ಸ್ವಾಭಿಮಾನ, ಸಮಾನತೆಯ ಅನ್ಯಾಯವನ್ನು ಧಿಕ್ಕರಿಸುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಅವರ ಚಿಂತನೆ ಹಾಗೂ ಶ್ರಮಕ್ಕೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಹ- ಶಿಕ್ಷಕರಾದ ಉಮಾ ಕೊಲ್ಕರ್, ವರ್ಷಾಮಜುಮದಾರ್, ಜೆ. ಅಕ್ಷತಾ, ಗೌಸಿಯಾ, ಸುನೀತಾ, ನಂದಿನಿ, ಕೊಲ್ಕರ್ ಜಯಶ್ರೀ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪಾಲಕ ಪೋಷಕರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















