ಸುಗ್ಗಿಯ ಹಬ್ಬವು
ಹಿಗ್ಗುತಲಿ ಸಂಭ್ರವು
ಸಗ್ಗದ ಸಿರಿಯಂತೆ ಧರೆಗಿಳಿದು
ಋತುಮಾನದ ಬದಲಾವಣೆ ತಂದಿಹುದು.
ರವಿ ಪಥವ ಬದಲಿಸಲು
ಹಗಲಿರುಳು ಸಮಪಾಲು
ಮಕರ ರಾಶಿಗೆ ಚಲಿಸುತ
ಸಮೃದ್ಧಿಗೆ ಸಂಕೇತ ಎಂದೆನಿಸುತ.
ಮುಕ್ತಿ ಮಾರ್ಗದ ಪ್ರೇರಣೆ
ಆಧ್ಯಾತ್ಮಿಕ ಚಿಂತನೆಯ ಧಾರಣೆ
ಎಳ್ಳು ಬೆಲ್ಲವ ನೀಡುತ
ಬಾಂಧವ್ಯ ಬೆಸುಗೆ ಬೆಳೆಸುತ.
ಸೂರ್ಯ ರಶ್ಮಿಯ ಸಂಚಲನ
ನವ ಸಂವತ್ಸರ ಆಗಮನ
ಉತ್ತರಾಯಣ ಪುಣ್ಯ ಕಾಲ
ಸ್ವರ್ಗದ ಬಾಗಿಲು ತೆರೆಯುವುದು ಸಲಿಲ.
ಹಸುಗಳ ಶೃಂಗರಿಸಿ
ಕಿಚ್ಚನ್ನು ಹಾಯಿಸಿ
ಭಾಸ್ಕರನ ರಥದಿ ದೇವನ ಸಂಚಾರ
ಭೀಷ್ಮನ ಇಚ್ಚಾಮರಣ ದಿನದ ಸಾರ.
ಗಾಳಿಪಟದ ಮೋಜಿನ ಆಟವು
ಪ್ರಕೃತಿಯ ಸೊಬಗಿನ ಮಾಟವು
ಸಂಸ್ಕೃತಿ ವಿಧವಿಧವು
ಗಂಗಾ ಸ್ನಾನದಿ ಪುಣ್ಯವು.
ವರಾಹ ಅವತಾರ ವಿಷ್ಣುವಿನ ಭೂ ಸ್ಪರ್ಶ
ಸಮುದ್ರ ಮಂಥನದಿ ಲಕ್ಷ್ಮಿಯ ಅವತಾರ ಹರ್ಷ
ಶಿವ ಪಾರ್ವತಿಯ ವಿವಾಹದ ಸಂದರ್ಭವು ಬ್ರಹ್ಮನ ಸೃಷ್ಟಿಯ ಪರ್ವವು.
ಸಂಕ್ರಮಣ ಕಾಲವು
ಸಂತಸದ ವರವು
ಹೊಸ ಬಟ್ಟೆಯ ಧರಿಸುತ
ಸವಿಯೂಟ ಮಾಡಿ ನಲಿಯುತ.
- ರೇಷ್ಮಾ ಕಂದಕೂರ, ಶಿಕ್ಷಕಿ
ಸಿಂಧನೂರು.




















