ಬೆಳಗಿನ ಮಂಜಿನಲ್ಲೇ ಕಣ್ಣು ತೆರೆದು,
ಹಾಸ್ಟೆಲ್ ಬಾಗಿಲು ಮುಂದೆ ಬಿದ್ದಿರುವ ಆ ಕಾಗದದ ಗುಚ್ಚ
ನನ್ನ ಹೃದಯದ ಸ್ಪಂದನೆ,
ನನ್ನ ದಿನದ ಮೊದಲ ಸ್ನೇಹಿತ….?
ಮಸಿ ವಾಸನೆಯಲ್ಲೇ ಜೀವ ಹುಡುಕುವೆನು,
ಅಕ್ಷರಗಳ ನಡುವೆ ಲೋಕ ನೋಡುವೆನು,
ಒಂದು ಪುಟದಲ್ಲಿ ರಾಜಕೀಯದ ಬಿಸಿ,
ಇನ್ನೊಂದು ಪುಟದಲ್ಲಿ ಕನಸುಗಳ ಕಥೆ….?
ಪತ್ರಿಕೆ ನನಗೆ ಕೇವಲ ಕಾಗದವಲ್ಲ,
ಅದು ಕಾಲದ ಕನ್ನಡಿ,
ಅದು ಸಮಾಜದ ಧ್ವನಿ,
ಅದು ನಿಜಗಳ ನಿರಂತರ ಹರಿವು…..?
ಯುದ್ಧಗಳ ಕಥೆ ಹೇಳುವಾಗ ಕಣ್ಣೀರು ಬರುತ್ತದೆ,
ವಿಜಯಗಳ ಸುದ್ದಿ ಓದಿದಾಗ ಹೃದಯ ಕುಣಿಯುತ್ತದೆ,
ಒಂದು ಚಿಕ್ಕ ಜಾಹೀರಾತಿನಲ್ಲಿ ಜೀವನದ ಹಾದಿ,
ಒಂದು ಲೇಖನದಲ್ಲಿ ಬದಲಾವಣೆಯ ಬೀಜ…..?
ಬೆಳಗಿನ ಎಳೆ ಬಿಸಿಲು ಜೊತೆಗೆ ಕುಳಿತು ಓದುವ ಕ್ಷಣ,
ನನ್ನ ಆತ್ಮಕ್ಕೆ ದೊರೆಯುವ ಶಾಂತಿ,
ಒಂದು ಪುಟ ಮುಗಿದಾಗ ಮತ್ತೊಂದು ಪುಟ,
ಹಾಗೆ ಜೀವನವೂ ಮುಂದುವರಿಯುತ್ತದೆ…..?
ಲೋಕ ಎಷ್ಟೇ ಬೆಳೆದರೂ,
ಈ ಮಸಿ ಅಕ್ಷರಗಳ ಮೌಲ್ಯ ಕಡಿಮೆಯಾಗದು,
ಸ್ಪರ್ಶದಲ್ಲಿ ಸತ್ಯವಿದೆ,
ಪತ್ರಿಕೆಯಲ್ಲಿ ಆತ್ಮವಿದೆ…..?
ನಾನು ಪತ್ರಿಕೆಯ ಪ್ರೇಮಿ
ಪ್ರತಿ ಅಕ್ಷರದಲ್ಲೂ ನನ್ನ ಪ್ರೀತಿ,
ಪ್ರತಿ ಸುದ್ದಿಯಲ್ಲೂ ನನ್ನ ನಂಬಿಕೆ,
ಪ್ರತಿ ಬೆಳಗ್ಗೆಯಲ್ಲೂ ಹೊಸ ಆಶೆ…..?
ಪತ್ರಿಕೆಯ ಜೊತೆ ನನ್ನ ಬಂಧ
ಕಾಲಕ್ಕೂ ಮೀರಿದ ಸ್ನೇಹ,
ಜಗತ್ತಿನೊಂದಿಗೆ ನನ್ನ ನಂಟು
ಅದೇ ನನ್ನ ಹೆಮ್ಮೆ, ಅದೇ ನನ್ನ ಪ್ರೀತಿ ನಾ ಪತ್ರಿಕೆಯ ಪ್ರೇಮಿ….?

- ಮೇಘರಾಜ
ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ,
ಎಸ್ ಕೆ ಎನ್ ಜಿ ಕಾಲೇಜ್, ಗಂಗಾವತಿ. ಕೊಪ್ಪಳ ಜಿಲ್ಲೆ.




















