
ಬದುಕಿನಲ್ಲಿ ಸೇವೆಗಾಗಿ ಬಾಳುವ ತತ್ವ ಮುಖ್ಯ : ಹೆಚ್.ಜಿ.ಮಿರ್ಜಿ
ಬಾಗಲಕೋಟೆ: ವಿದ್ಯಾರ್ಥಿಗಳು ನಿಸ್ವಾರ್ಥತೆಯಿಂದ ಸೇವೆ ಮಾಡುವ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ಸೇವೆಗಾಗಿ ಬಾಳುವ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ನಾಗರಿಕರಾಗಬೇಕು ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಹೆಚ್.ಜಿ.ಮಿರ್ಜಿ ಅವರು ಹೇಳಿದರು.
ಅವರು ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಆಶ್ರಯದಲ್ಲಿ ಶುಕ್ರವಾರ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ನಡೆದ ೨೦೨೬ ರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಮುಂದುವರಿದು ಮಾತನಾಡಿ, ಮದರ ತೆರೆಸಾ, ಸಾಲು ಮರದ ತಿಮ್ಮಕ್ಕ ಇವರಂತಹ ಸಾಧಕರು ತಮ್ಮ ಬದುಕಿನಲ್ಲಿ ಮಾಡಿರುವ ಸಮಾಜಮುಖಿ ಸೇವೆ ಇಂದಿನ ಯುವ ಜನತೆಗೆ ಪ್ರೇರಣೆ ಮತ್ತು ಸ್ಪೂರ್ತಿಯಾಗಿದೆ. ಹುಟ್ಟಿದ ಮನಿಗೆ, ಕಲಿತ ಶಾಲೆಗೆ ಕೀರ್ತಿ ತರುವಂತ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಂಶುಪಾಲರಾದ ಡಾ,ಅರುಣಕುಮಾರ ಗಾಳಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಾಮರಸ್ಯ ಬೆಳೆಸುತ್ತವೆ. ಇಲ್ಲಿ ಹೊಂದಾಣಿಕೆಯ ಬದುಕು ಕಲಿಯಲು ಅವಕಾಶವಿದ್ದು ಮತ್ತು ಶಿಸ್ತು, ಛಲ, ಪ್ರಯತ್ನಗಳಿಂದ ವ್ಯಕ್ತಿತ್ವದ ಫಲ ದೊರೆಯಲು ಸಾಧ್ಯವಿದೆ. ಸಾಧನೆ ಸಾಧಕರ ಸ್ವತ್ತು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕರಾದ ಪ್ರಮೋದ್ ಚೌಗಲೆ ಅವರು ಮಾತನಾಡಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನಡೆಸುವ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಆತ್ಮಸಾಮಾರ್ಥ್ಯ ಹೆಚ್ಚಿಸುವದರೊಂದಿಗೆ ಭಾವನಾತ್ಮಕವಾದ ಬಾಂಧವ್ಯ ಬೆಳೆಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ರೇಂರ‍್ಸ್ ಲೀಡರ್ ಡಾ.ಸುಮಂಗಲಾ ಮೇಟಿ ಅವರು ಶಿಬಿರದ ಅನುಭವಗಳನ್ನು ಹಂಚಿಕೊಂಡರು. ರೋರ‍್ಸ್ ಲೀಡರ್ ಪ್ರೊ.ಪರಸಪ್ಪ ತಳವಾರ ಅತಿಥಿಗಳನ್ನು ಪರಿಚಯಿಸಿದರು. ರೋರ‍್ಸ್ ಲೀಡರ್ ಚಂದ್ರಶೇಖರ ಕಾಳನ್ನವರ, ಕ್ರೀಡಾ ನಿರ್ದೇಶಕ ನೀಲಪ್ಪ ಕುರಿ, ಪ್ರೊ.ಲೇಪಾಕ್ಷಯ್ಯ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಮಾರಂಭದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ರೋರ‍್ಸ್ ಗಳು ಪಾಲ್ಗೊಂಡಿದ್ದರು.
- ಕರುನಾಡ ಕಂದ ಪತ್ರಿಕೆ




















