ಕೊಪ್ಪಳ : ಎನ್. ಎಸ್. ಎಸ್ ವಿದ್ಯಾರ್ಥಿಗಳಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಇರಬೇಕು ಎಂದು ಭೂಗೋಳ ಶಾಸ್ತ್ರ ಉಪನ್ಯಾಸಕರಾದ ನಿಂಗಜ್ಜ ಸೋಂಪುರ ಅವರು ಹೇಳಿದರು.
ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ಸೋಮವಾರದಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ 2025-26 ಸಾಲಿನ ಎನ್. ಎಸ್. ಎಸ್ ವಾರ್ಷಿಕ ವಿಶೇಷ ಶಿಬಿರದ ಆರನೇ ದಿನದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಉತ್ತಮ ನಡುವಳಿಕೆ, ಒಳ್ಳೆಯ ಗುಣಗಳು ಬೆಳೆಸಬೇಕು, ಎನ್. ಎಸ್. ಎಸ್ ನ ವಿದ್ಯಾರ್ಥಿಗಳು ನಿಸ್ವಾರ್ಥ ಸೇವಾ ಮನೋಭಾವನೆ ಹೊಂದಿರಬೇಕು. ಜನಪರವಾಗಿ ಆಲೋಚನೆ ಮಾಡಬೇಕು. ಮನುಕುಲದ ಕಲ್ಯಾಣಕ್ಕಾಗಿ ಶ್ರಮಿಸಬೇಕು. ಸಮಾಜ ಸೇವೆ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಭೂಗೋಳಶಾಸ್ತ್ರ ಉಪನ್ಯಾಸಕ ಕಲ್ಯಯ್ಯ ಪೂಜಾರ್ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಕಡಿಮೆ ಆಗುತ್ತದೆ. ಚೆನ್ನಾಗಿ ಓದಿದವರು ಉನ್ನತ ಮಟ್ಟಕ್ಕೆ ಏರಿತ್ತಾರೆ. ನೀವು ಬುದ್ದಿವಂತರಾದರೆ ಈ ಜಗತ್ತು ನಿಮ್ಮ ಪಾಲಿಗೆ ಸ್ವರ್ಗ. ನೀವು ದಡ್ಡರಾದರೆ ಈ ಜಗತ್ತು ನಿಮ್ಮ ಪಾಲಿಗೆ ನರಕವಾಗುತ್ತದೆ.
ಪ್ರತಿಯೊಬ್ಬರಿಗೂ ಅವಕಾಶಗಳು ಸಿಕ್ಕೇ ಸಿಗುತ್ತವೆ ಅವುಗಳನ್ನು ಬಳಸಿಕೊಳ್ಳಬೇಕು. ಸಾಮಾಜಿಕ ಕಳಕಳಿ ಬೆಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಗ್ರಂಥಾಲಯದ ಸಹಾಯಕ ಮಲ್ಲಿಕಾರ್ಜುನ ಅವರು ಮಾತನಾಡುತ್ತಾ ಇಂದು ಚಿಕ್ಕ ಮಕ್ಕಳಲ್ಲಿ ಪ್ರೀತಿ, ವಿಶ್ವಾಸ ಕಡಿಮೆ ಆಗಿ ದ್ವೇಷ ಜಾಸ್ತಿ ಆಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಕಾನೂನು ಮತ್ತು ಹಕ್ಕುಗಳ ಕುರಿತು ಓದಿ ತಿಳಿದುಕೊಂಡರೆ ನಿಮಗೆ ಕಷ್ಟ ಕಾಲದಲ್ಲಿ ಸಹಾಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎನ್. ಎಸ್. ಎಸ್ ಘಟಕದ ಸಂಚಾಲಕರಾದ ಡಾ. ನರಸಿಂಹ ಅವರು ಮಾತನಾಡುತ್ತ ಈ ರೀತಿಯ ಎನ್. ಎಸ್. ಎಸ್ ಶಿಬಿರಗಳು ವ್ಯಕ್ತಿತ್ವ ವಿಕಾಸನ ಮಾಡುತ್ತವೆ. ಈ ಶಿಬಿರಗಳಿಂದ ಸಾಮಾನ್ಯ ಜ್ಞಾನ, ಸಂಸ್ಕೃತಿ ಮತ್ತು ಸಂಸ್ಕಾರ ಹೆಚ್ಚು ಕಲಿಯುತ್ತೀರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಡಾಟಾ ಎಂಟ್ರಿ ಆಪರೇಟರ್ ಮೆಹಬೂಬ್ ಸಾಬ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭಾಗ್ಯಮ್ಮ ನಿರೂಪಿಸಿದರು. ಶರಣಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶರಣಮ್ಮ ಸ್ವಾಗತಿಸಿದರು.
- ಕರುನಾಡ ಕಂದ ಪತ್ರಿಕೆ




















