
ಶಿರಸಿ: ಪ್ರಾಧ್ಯಾಪಕ, ಕವಿ, ಅನುವಾದಕ, ನಟ, ನಿರ್ದೇಶಕ, ಸಂಘಟಕ ಹೀಗೆ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಕ್ರಿಯ ಧನಾತ್ಮಕ ಚಿಂತನೆಯ ಪ್ರೊಫೆಸರ್ ಮೋಹನ ಹಬ್ಬು ಅವರ 50 ಕಥೆಗಳಲ್ಲಿ ಆಯ್ದ 21 ಕಥೆಗಳ ಸಂಕಲನ ಸಂಚಯ ಅತ್ಯಮೂಲ್ಯವಾದ ಕೃತಿ ಎಂದು ಡಾಕ್ಟರ್ ಅಜಿತ್ ಹರೀಶಿ ಅಭಿಪ್ರಾಯಪಟ್ಟರು. ಅವರು ಇಂದು ಶಿರಸಿಯ ಗಾಯತ್ರಿ ಗೆಳೆಯರ ಬಳಗದಲ್ಲಿ ಜಸ್ಟಿಸ್ ಜಿ ಎನ್ ಸಭಾಹಿತ , ಜಸ್ಟಿಸ್ ವಿಷ್ಣು ಸಭಾಹಿತ್ ಸ್ಮರಣೆಯಲ್ಲಿ ಆಯೋಜಿಸಿದ ಸಾಹಿತ್ಯ ಕಾರ್ಯಕ್ರಮದಲ್ಲಿ ಸಂಚಯನ ಕಥಾ ಸಂಕಲನವನ್ನು ಅವಲೋಕನೆ ಮಾಡುತ್ತಾ ಮಾತನಾಡುತ್ತಿದ್ದರು.
ಕೃತಿಯ ಹಲವಾರು ಕಥೆಗಳನ್ನು ವಿಶ್ಲೇಷಿಸುತ್ತಾ, ನಾವು ಗಮನಿಸಬೇಕಾದ ಕಾಲಘಟ್ಟ ,ಕಾಲಧರ್ಮ ಗಳ ಕುರಿತು ತಿಳಿಸಿ, ಬರವಣಿಗೆಯ ಉದ್ದೇಶವನ್ನು ವಿವರಿಸಿ, ಹಬ್ಬು ಅವರ ನೆಲೆ ಕಥೆಯನ್ನು ವಿಸ್ತಾರವಾಗಿ ವಿಶ್ಲೇಷಿಸಿದರು.
ಅವರ ವೈಚಾರಿಕ ವಿಶ್ಲೇಷಣೆಯಿಂದ ಕೃತಿಯ ಮೌಲ್ಯ ಹೊರಹೊಮ್ಮಿತ್ತಲ್ಲದೆ, ಅವರ ಭಾಷಾ ಪ್ರೌಢಿಮೆ, ಪಾಂಡಿತ್ಯ ಕೂಡ ಕೃತಿಯನ್ನು ಓದಲೇಬೇಕೆಂಬ ಪ್ರೇರಣೆ ಸಭಿಕರಿಗೆ ಉಂಟು ಮಾಡಿತು.
ಸಾಹಿತಿ, ಅಂಕಣಕಾರ ಧೀರೇಂದ್ರ ನಾಗರಹಳ್ಳಿ ಅವರ ಇರವಂತ ನಾಟಕವನ್ನು ಅವಲೋಕನ ಮಾಡುತ್ತಾ, ಧರ್ಮ, ಧರ್ಮದ ಅನುಷ್ಠಾನ, ಕ್ಷತ್ರಿಯ, ಪರಾಕ್ರಮ, ಯುದ್ಧ, ರಾಜನಾದವನ ಕರ್ತವ್ಯ ಮುಂತಾದ ಮಹತ್ವವುಳ್ಳ ವಿಷಯದ ಕುರಿತು ಪ್ರೌಢವಾದ ಮಾಹಿತಿಗಳನ್ನು ಸಂಭಾಷಣೆಯ ಮೂಲಕ ತಿಳಿಸಿ ಕೊಡುವ ಅತ್ಯುತ್ತಮ ವೈಚಾರಿಕ ನಾಟಕ ಎಂದು ಪ್ರೊ. ರಾಮಕೃಷ್ಣ ಗುಂದಿ ಅಭಿಪ್ರಾಯಪಟ್ಟರು.
ಜೀವನದ ಹಲವು ಆಯಾಮಗಳಿಗೆ ಈ ನಾಟಕದಲ್ಲಿಯ ಪಾತ್ರಗಳು ಮುಖಾಮುಖಿ ಆಗುವ ಘಟನೆಗಳಿವೆ, ದೀರ್ಘವಾದ, ಪ್ರೌಢ ಸಂಭಾಷಣೆಗಳು ವೈಚಾರಿಕ ರಂಗತಂಡಳಿಗಳಿಗೆ ಪ್ರದರ್ಶನ ಮಾಡಲು ಸವಾಲಾಗಬಹುದು ಎಂದು ಅಭಿಪ್ರಾಯಪಟ್ಟರು.
ನಾಟಕದ ಕುರಿತು ಹಲವು ಆಯಾಮಗಳಲ್ಲಿ ವಿಶ್ಲೇಷಿಸಿ, ಇದೊಂದು ಅತ್ಯುತ್ತಮ ನಾಟಕವಾಗಿದ್ದು ಎಲ್ಲರೂ ಓದಿ ಸಂತೋಷ ಪಡಬೇಕೆಂದು ವಿನಂತಿಸಿ, ಶಿರಸಿಯ ಸಾಂಸ್ಕೃತಿಕ, ಸಾಹಿತ್ಯಿಕ, ಸಂಗೀತದ ಔನ್ಯತ್ಯದ ಬಗ್ಗೆ ತಿಳಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಕ್ಕೆ ಸಂತಸವಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರೊ.ಕೆ. ಎನ್ ಹೊಸಮನಿ ಅವರು ಮಾತನಾಡುತ್ತಾ
ಆಳವಾದ ಅಧ್ಯಯನ, ಜೀವನಾನುಭವ ಇಲ್ಲದೆ ಸುಪುಷ್ಟವಾದ ಸಾಹಿತ್ಯ ಬರಲಾರದು; ಸತ್ಯಯುತ ಸಾಹಿತ್ಯಕ್ಕೆ ಭಾವಶಕ್ತಿ ಭಾಷಾ ಶಕ್ತಿ ಅತ್ಯವಶ್ಯ; ಇತ್ತೀಚೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಭಿನ್ನತೆಗಳೆಲ್ಲ ಕಣ್ಮರೆಯಾಗಿ, ಸಾಹಿತ್ಯದಲ್ಲಿ ವೈವಿಧ್ಯತೆ, ವಿಭಿನ್ನತೆ ಕಾಣುತ್ತಿದ್ದೇವೆ.
ಬದುಕು- ಬರಹ ಬೇರೆಬೇರೆ ಆಗಿರಕೂಡದು, ಇತರರ ನೋವಿಗೆ ಸ್ಪಂದಿಸುವಂತಿರಬೇಕು; ಸತ್ವಯುತ ಬರಹಗಳು ಶಾಶ್ವತತೆಯನ್ನು ಹೊಂದಿರುತ್ತವೆ; ಆದ್ದರಿಂದಲೇ ರಾಮಾಯಣ- ಮಹಾಭಾರತಗಳು ಸಾರ್ವಕಾಲಿಕ ಸಾಹಿತ್ಯ ಕೃತಿಗಳಾಗಿವೆ ಎಂದು ಹೇಳಿ, ಬರವಣಿಗೆ ಬದಲಾವಣೆಗೆ ಕಾರಣವಾಗಬೇಕು ಎಂದು ತಿಳಿಸಿದರು. ಅವರ ಸತ್ವಯುತವಾದ, ಭಾಷಾ ಪ್ರೌಢಿಮೆಯ, ಮೌಲಿಕ ಮಾತುಗಳಿಗೆ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಇಂದಿರಾ ಹೆಗಡೆ ಹಾಗೂ ರೇಣುಕಾ ಭಟ್ಟರವರು ಪ್ರೊ. ಮೋಹನ ಹಬ್ಬು ಅವರ ಕವನಗಳನ್ನು ಹಾಡಿದರು. ಲೇಖಕಿ ಅಂಕಣಗಾರ್ತಿ ಭವ್ಯಾ ಹಳೆಯೂರ ಸ್ವಾಗತಿಸಿ, ಗಣ್ಯರ ಪರಿಚಯ ನೆರವೇರಿಸಿದರು. ಸಾಹಿತಿ ಜಯಪ್ರಕಾಶ ಹಬ್ಬು ಅವರು, ಕಾರ್ಯಕ್ರಮವನ್ನು ಸಂಯೋಜಿಸಿ, ಕತೆ ಹುಟ್ಟುವುದು ಹೇಗೆ? ಕತೆಯ ಮೂಲ ಯಾವುದು, ಮನಸ್ಸೇ, ಬುದ್ಧಿಯೇ, ಬದುಕೇ, ಕಲ್ಪನಾಶಕ್ತಿಯೇ? ಇತ್ಯಾದಿ ಪ್ರಶ್ನೆಗಳ ನಡುವೆ ಕಳೆದ ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ಐವತ್ತರಷ್ಟು ಕತೆಗಳನ್ನು ರಚಿಸಿದ ಅನುಭವ ಹೊಂದಿದ ಆವರ ವೃತ್ತಿಜೀವನದ ನಡುನಡುವೆ ನಾಟಕ, ಕವಿತೆ, ಅನುವಾದ, ನಾಟಕ ನಿರ್ದೇಶನ, ನಟನೆ, ಸಂಘಟನೆ ಇವುಗಳಲ್ಲಿ ಬದುಕಿನ ಬಹುಭಾಗ ಕಳೆದಿರುವ ಪ್ರೊ. ಮೋಹನ ಹಬ್ಬು ಅವರು ಕಾರ್ಯಕ್ರಮಕ್ಕೆ ಅನಿವಾರ್ಯವಾಗಿ ಆಗಮಿಸದಿರುವುದನ್ನು ತಿಳಿಸಿ ಅವರ ಸಂದೇಶವನ್ನು ಓದಿ, ಕಾರ್ಯಕ್ರಮವನ್ನು, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.
ಇರವಂತ ನಾಟಕದ ಕೃತಿ ರಚನೆ ಮಾಡಿದ ಅಂಕಣಕಾರ, ಸಾಹಿತಿ ಧೀರೇಂದ್ರ ನಾಗರಹಳ್ಳಿ ಅವರು ನಾಟಕದ ರಚನೆ ಕುರಿತು ತಿಳಿಸಿ ಎಲ್ಲರನ್ನೂ ವಂದಿಸಿದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬಳಗದ ಮುಖ್ಯಸ್ಥ ಎಂ ಎಸ್ ಹೆಗಡೆಯವರು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಯನ್ನು ಮಾಡಿ, ಗೌರವ ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ, ಅಂಕಣಕಾರರಾದ ವಾಸುದೇವ ಶಾನಭಾಗ, ಡಾ. ಜಿ ಎ ಹೆಗಡೆ, ಸುಬ್ರಾಯ ಭಟ್ ಬಕ್ಕಳ, ವರ್ಗಾಸರ ಗಣಪತಿ ಭಟ್, ಉಮೇಶ್ ನಾಯ್ಕ್, ಸುಧಾ ಭಟ್, ಆಶಾ ಸಭಾಹಿತ, ಇಂದಿರಾ ಬೈಲಕೇರಿ, ಲಕ್ಷ್ಮಣ ಶಾನಭಾಗ , ದೇವೇಂದ್ರಪ್ಪ, ಶಂಕರ ಹೆಗಡೆ ಭದ್ರನ್, ಎಸ್ ಎಸ್ ಹೆಗಡೆ, ಡಿ ಎಸ್ ಹೆಗಡೆ, ಡಿ ಜಿ ಹೆಗಡೆ, ರಾಮಚಂದ್ರ ಬೈಲಕೇರಿ, ಪ್ರಭಾತ ಹೆಗಡೆ, ಆರ್ ಎಸ್ ಹೆಗಡೆ,ಡಿ ಟಿ ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ



















