ಬಳ್ಳಾರಿ / ಕಂಪ್ಲಿ : ದೇಶದ ಮೂರು ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಹಿನ್ನಲೆ ಕಂಪ್ಲಿ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಸೋಮವಾರ ಮಾಡಿದರು.
ಬಿಜೆಪಿ ಗೆಲುವಿನ ಹಿನ್ನಲೆ ಕಂಪ್ಲಿ ಪಟ್ಟಣದ ಕೊಟ್ಟಾಲ್ ರಸ್ತೆಯಲ್ಲಿರುವ ಮಾಜಿ ಶಾಸಕ ಟಿ.ಎಚ್.ಸುರೇಶಬಾಬು ಅವರ ನಿವಾಸ ತುಂಗಭದ್ರಾ ನಿಲಯದ ಬಿಜೆಪಿ ಪಾರ್ಟಿ ಕಛೇರಿಯಿಂದ ಬೈಕ್ ರ್ಯಾಲಿ ಆರಂಭಿಸಿ, ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ, ಅಂಬೇಡ್ಕರ್ ವೃತ್ತದಲ್ಲಿ ಸಮಾಹಿಸಿ, ವಿಜಯೋತ್ಸವ ಅದ್ಧೂರಿಯಾಗಿ ಆಚರಿಸಿದರು.
ನಂತರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನತಾ ಪಾರ್ಟಿಯ ಬಿಎಲ್ಎ1 ಜಿ.ಶ್ರೀನಿವಾಸ ಮಾತನಾಡಿ, ಪಶ್ಚಿಮ ಬಂಗಾಳ, ಪುದುಚೇರಿ, ಅಸ್ಸಾಂ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಪಕ್ಷವೂ ಗೆಲುವಿನ ನಗೆ ಬೀರಿದೆ. ವಿಶ್ವ ನಾಯಕನೆಂದೇ ಪ್ರಸಿದ್ಧಿ ಪಡೆದಿರುವ ನರೇಂದ್ರ ಮೋದಿಜೀ ರವರ ಜನಪರ ಅಭಿವೃದ್ಧಿ ಕಾರ್ಯ ಮತ್ತು ಯೋಜನೆಗಳನ್ನು ಮೆಚ್ಚಿ, ಮೂರು ರಾಜ್ಯದ ಮತಬಾಂಧವರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯಗಳ ಚುಕ್ಕಾಣಿಗೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ವಿರೋಧ ಪಕ್ಷದವರು ಮೂಲೆ ಗುಂಪಾಗಿದ್ದಾರೆ. ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ಮಂಡಲ ಅಧ್ಯಕ್ಷ ಸಿ.ಡಿ.ಮಹಾದೇವ, ಮುಖಂಡರಾದ ಡಾ.ವಿ.ಎಲ್.ಬಾಬು, ರಾಮಾಂಜಿನೇಯ, ಶ್ರೀನಿವಾಸ, ಕೆ.ಭಾಸ್ಕರ್ರೆಡ್ಡಿ, ಯಣ್ಣಿ ವೆಂಕಟೇಶ, ಟಿ.ವಿ.ಸುದರ್ಶನರೆಡ್ಡಿ, ಪ್ರಶಾಂತ, ಕಾರ್ತಿಕ ಚೇತನ್, ಪಾಲಾಕ್ಷಿ ಸೇರಿದಂತೆ ಕಾರ್ಯಕರ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















