ಪರಹಿತವೇ ಪರೋಪಕಾರ
ಸತ್ಯ ಸದ್ಭಾವದ ಗುಣವೇ ಸತ್ಕಾರ
ಸ್ವಾರ್ಥ ಗುಣವೇ ಮನುಷ್ಯತ್ವದಪಕಾರ.
ಕಳೆಯಲಿ ಅನಾಚಾರ
ಮನದಲ್ಲುಳಿಯಲಿ ಆಚಾರ
ಸದಾಚಾರಕ್ಕೆ ಕಾರಣ ಸದ್ವಿಚಾರ.
ಮೂಡುವನು ನೇಸರ
ಕಳೆವನು ಮನಸಿನ ಬೇಸರ
ಮತ್ತೇಕೆ ಮನುಜ ಜೀವನದಲ್ಲವಸರ.
ದಯವೇ ಧರ್ಮೋಪಚಾರ
ಮಿತಿ ಮೀರುವುದೇ ಮನಸಿಗಪಚಾರ
ಮನದ ಮೈಲಿಗೆ ಕಳೆವುದೇ ಷೋಡಶೋಪಚಾರ.
ನೆರಳು ನೀಡುವುದು ಮರ
ನೆಲ ನೀಗಿಸುವುದು ಅನ್ನದ ಬರ
ನೇಗಿಲು ಹಿಡಿದು ದುಡಿದರೆ ಮನುಜ ಕರ.
ಬಿಡದೆ ಕಾಡುವುದು ಬೇಸರ
ಮನುಷ್ಯತ್ವಕಡ್ಡಗೋಡೆ ಮದ ಮತ್ಸರ
ಭಾವದಲ್ಲೇಕೆ ನ್ಯಾಯ ನೀತಿಗಳಿಗೆ ತಾತ್ಸಾರ.
- ಡಾ. ಅಶೋಕ ಕುಮಾರ ಎಸ್. ಮಟ್ಟಿ ಮೀನಕೇರಿ, ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು, ಮುದ್ನಾಳ, ಯಾದಗಿರಿ ಜಿಲ್ಲೆ.




















