
ಬಳ್ಳಾರಿ / ಕಂಪ್ಲಿ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕಸಾಪ ತಾಲೂಕು ಘಟಕ ಆಯೋಜಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಿತು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅತಿಥಿ ಉಪನ್ಯಾಸಕ ಆರ್.ರುದ್ರಮುನಿ ‘ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ದಾರಿ’ ಕುರಿತು ಉಪನ್ಯಾಸ ನೀಡಿ, ಕ. ಸಾ. ಪ. ಕನ್ನಡಪರವಾದ ಅತಿದೊಡ್ಡ ಸಂಸ್ಥೆಯಾಗಿದ್ದು 1915ರಲ್ಲಿ ಸ್ಥಾಪನೆಗೊಂಡಿತು. ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಷತ್ ಸ್ಥಾಪನೆಗೆ ಚಾಲನೆ ನೀಡಿದರು. ಆರಂಭದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಎಂದು ಕರೆಯುತ್ತಿದ್ದ ಈ ಸಂಸ್ಥೆಯು 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರುನಾಮಕರಣಗೊಂಡು ಕನ್ನಡಿಗರ ಆರಾಧ್ಯ ಸಂಸ್ಥೆಯಾಯಿತು. ಕನ್ನಡನಾಡಿನ ಪ್ರೇರಕಶಕ್ತಿಯಾಗಿ, ನಾನಾ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡಿಗರ ಮನೆ ಮಾತಾಗಿದೆ. ಸಾರಸ್ವತ ಲೋಕಕ್ಕೆ ಕಸಾಪವು ಮಹತ್ವದ ಕೊಡುಗೆ ನೀಡಿದೆ. ಕನ್ನಡ ಭಾಷೆಯ ಪ್ರೋತ್ಸಾಹಕ್ಕಾಗಿ, ಕನ್ನಡ ಕಲಿಯಲು ಬಯಸುವವರಿಗೆ ಕಸಾಪ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳನ್ನು ನಡೆಸುವ ಮೂಲಕ ಕನ್ನಡ ಪ್ರೀತಿಯನ್ನು ಬೆಳೆಸುವಲ್ಲಿ ಸದಾ ಕ್ರಿಯಾಶೀಲವಾಗಿದೆ ಎಂದರು.
ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗದ ಕಾರ್ಯದರ್ಶಿ ಡಾ.ಜಂಬುನಾಥಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಸಾಪ ಸದಸ್ಯರಾಗುವ ಮೂಲಕ ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ಪ್ರೇರೇಪಿಸಬೇಕಿದೆ. ನಾಡಿನಲ್ಲಿ ಮನೆಗೊಬ್ಬರಾದರೂ ಕಸಾಪ ಸದಸ್ಯರಾಗಬೇಕಿದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು ನುಡಿ ಸರ್ವಾಂಗೀಣ ಬೆಳವಣಿಗೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪ್ರಮುಖಪಾತ್ರವಹಿಸಿದೆ ಎಂದರು.
ನಾನಾ ಕ್ಷೇತ್ರಗಳ ಸಾಧಕರಾದ ಡಾ.ಜಂಬುನಾಥಗೌಡ, ಡಾ.ಕೃಷ್ಣಕುಮಾರ್, ಡಿ.ವಿ.ಸತ್ಯನಾರಾಯಣ, ಪ್ರೋ.ರತನ ಚವ್ಹಾಣ, ಕೃಷ್ಣ ಎಸ್.ಪೋಳ, ಸಿ.ರುದ್ರಪ್ಪ, ಶಂಕರ ಉಬಾಳೆ, ಜಿ.ಚಂದ್ರಶೇಖರಗೌಡ, ಎಲಿಗಾರ ವೆಂಕಟರೆಡ್ಡಿ, ಡಾ.ಹಾದಿಮನಿ ಕಾಳಿಂಗವರ್ಧನ, ಎಸ್.ಡಿ.ಬಸವರಾಜ, ಪರಶುರಾಮ ಬುಸಾರೆ, ಕೊರವರ ಗೋಪಾಲರನ್ನು ಕಸಾಪದಿಂದ ಗೌರವಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಿವಾಸರೆಡ್ಡಿ, ಕಸಾಪ ಪದಾಧಿಕಾರಿಗಳಾದ ಅಂಬಿಗರ ಮಂಜುನಾಥ, ಎಸ್.ಡಿ.ಬಸವರಾಜ, ಎಸ್.ಶಾಮಸುಂದರರಾವ್, ಯು.ಎಂ.ವಿದ್ಯಾಶಂಕರ, ಅಶೋಕ ಕುಕನೂರು, ಎಸ್.ರಾಮಪ್ಪ, ಬಡಿಗೇರ ಜಿಲಾನ್‌ಸಾಬ್, ಡಾ.ಅನ್ನಪೂರ್ಣ ಗುಡದೂರು ಸೇರಿ ಇತರರಿದ್ದರು. ಅತಿಥಿ ಶಿಕ್ಷಕ ಎಸ್.ರಾಮಪ್ಪ ಕಾರ್ಯಕ್ರಮ ನಿರೂಪಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















