ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವ್ಯಾಘ್ರಪುರದ ಆಚರಣಾ ಪ್ರಧಾನ ದೇವತೆ ಹುಲಿಗೆಮ್ಮ : ಪವಾಡಗಳೇ ಪ್ರಮುಖ ಆಕರ್ಷಣೆ

ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿ
ಜಾತ್ರಾ ಮಹೋತ್ಸವದ ನಿಮಿತ್ಯ ಲೇಖನ.

ಕೊಪ್ಪಳ ಜಿಲ್ಲೆಯ ಹುಲಿಗಿ (ಮುನಿರಾಬಾದ್) ಗ್ರಾಮವು ತನ್ನದೇ ಆದ ಹಿನ್ನೆಲೆಯನ್ನು ಹೊಂದಿದೆ. ಪ್ರತಿ ನಿತ್ಯ ಅಸಂಖ್ಯಾತ ಭಕ್ತರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಧಾರ್ಮಿಕ ಕ್ಷೇತ್ರವಾಗಿ ಪರಿಣಮಿಸಿದೆ. ಈ ಗ್ರಾಮವು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿದ್ದರೂ ಸಹ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ 16 ಕಿ. ಮೀ. ದೂರದಲ್ಲಿರುವುದರಿಂದ ಈ ಭಾಗದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹುಲಿಗೆಮ್ಮ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಈ ದೇಗುಲವು ಮುನಿರಾಬಾದ್ ರೈಲ್ವೆ ನಿಲ್ದಾಣದಿಂದ ಒಂದು ಪರ್ಲಾಂಗ್ ದೂರದಲ್ಲಿ ವಿಶಾಲವಾದ ಸ್ಥಳದಲ್ಲಿ ನಿರ್ಮಿಸಲಾಗಿದೆ. ವಾರದ ಮಂಗಳವಾರ, ಶುಕ್ರವಾರ ದೇವಿವಾರಗಳoದು ವಾಡಿಕೆಗಿಂತ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಾರೆ. ದೇವಿ ವಾರ ಬಿಟ್ಟು ಉಳಿದ ದಿನಗಳಲ್ಲಿಯೂ ಸಹ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ರಾಯಚೂರು,ಗದಗ, ಅವಳಿ ನಗರಗಳಾದ ಹುಬ್ಬಳ್ಳಿ – ಧಾರವಾಡ, ಬೆಳಗಾವಿ, ಬೆಂಗಳೂರು, ಮೈಸೂರು ಮುಂತಾದ ಜಿಲ್ಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ.
ಈ ಧಾರ್ಮಿಕ ಕ್ಷೇತ್ರವು ಪೌರಾಣಿಕವಾಗಿಯೂ, ಐತಿಹಾಸಿಕವಾಗಿಯೂ, ಧಾರ್ಮಿಕವಾಗಿಯೂ, ಮಹತ್ವವನ್ನು ಹೊಂದಿದೆ. ಹಿಂದೊಮ್ಮೆ ಈ ಗ್ರಾಮವು ಪುರವಾಗಿ ‘ವ್ಯಾಘ್ರಪುರ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ದೇವಿಪುರಾಣದಲ್ಲಿ ಈ ಪುರವನ್ನು ವ್ಯಾಘ್ರಪುರ ಎಂದು ಉಲ್ಲೇಖಿಸಲಾಗಿದೆ.
ವ್ಯಾಘ್ರಪುರ ಎಂದರೆ ಹುಲಿಗಳ ವಾಸದ ಊರು. ಈಗ ದೇಗುಲವಿರುವ ಹಿಂಬದಿಗೆ ಗುಂಡುಕಲ್ಲುಗಳ ಸಮೂಹವು ಕಾಣಸಿಗುತ್ತವೆ. ಈ ಗುಂಡುಕಲ್ಲುಗಳ ಗುಹೆಗಳಲ್ಲಿ ಹುಲಿಗಳು ವಾಸವಾಗಿದ್ದವೆನ್ನಲಿಕ್ಕೆ ಸ್ಥಳ ಐತಿಹ್ಯವೊಂದಿದೆ. ಆದರೆ ಐತಿಹಾಸಿಕವಾಗಿ ಇಂದಿನ ಹುಲಿಗಿ ಎಂಬ ಪದವು 10 ನೇ ಶತಮಾನದಲ್ಲಿ ಪುಲಿಗೆ ಎಂದು ಬಳಕೆಯಲ್ಲಿತ್ತು ಎನ್ನಲಿಕ್ಕೆ ನದಿ ದಂಡೆಯಲ್ಲಿರುವ ಸೋಮೇಶ್ವರ ದೇಗುಲದ ಅವರಣದಲ್ಲಿರುವ ದಾನ ಶಾಸನವು ಸಾಕ್ಷಿಯಾಗಿದೆ. ಈ ಶಾಸನವು ಕಲ್ಯಾಣ ಚಾಲುಕ್ಯರ  ಕಾಲಾವಧಿಯ ಪಾಳೆಯಗಾರನಿಗೆ ಅದರಲ್ಲೂ ಚೌವೇಧಿ ಭಟ್ಟ ಎಂಬುವರಿಗೆ ದಾನ ನೀಡಿದ ಉಲ್ಲೇಖವನ್ನು ನೀಡುತ್ತದೆ. ಈ ಕುರಿತು ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗದಿಂದ ಪ್ರಕಟವಾದ ಕೊಪ್ಪಳ ಜಿಲ್ಲಾ ಶಾಸನಗಳು ಕೃತಿಯಿಂದ ತಿಳಿದುಬರುತ್ತದೆ.
ಈ ಕಾರಣಕ್ಕಾಗಿ ‘ಪಂಪ ಮಹಾತ್ಮೆ’ ಕೃತಿಯಲ್ಲಿ ಪೂರ್ವಕ್ಕೆ ಮತoಗೇಶ್ವರ, ಪಶ್ಚಿಮಕ್ಕೆ ಸೋಮೇಶ್ವರ, ಉತ್ತರಕ್ಕೆ ಕಿನ್ನರೇಶ್ವರ, ದಕ್ಷಿಣಕ್ಕೆ ಜಂಬುಕೇಶ್ವರ ದೇಗುಲಗಳಿವೆ ಎಂದು ಉಲ್ಲೇಖಿಸಲಾಗಿದೆ.

ಹುಲಿಗೆಮ್ಮ ದೇಗುಲದ ರಚನೆ :
ಹುಲಿಗೆಮ್ಮ ದೇಗುಲ ವಿಶಾಲವಾದ ಸ್ಥಳದಲ್ಲಿ ನಿರ್ಮಾಣಗೊಂಡಿರುವುದು ಕಂಡು ಬರುತ್ತದೆ. ದಕ್ಷಿಣಾಭಿಮುಖವಾಗಿ ರಚನೆಗೊಂಡಿರುವ ಈ ದೇಗುಲಕ್ಕೆ ನದಿ ಸ್ನಾನ ಮುಗಿಸಿಕೊಂಡ ಭಕ್ತರು ಪೂರ್ವದಿಂದ ಆಗಮಿಸಲು ಹಾಗೂ ಪಶ್ಚಿಮದಿಂದ ಭಕ್ತರು ದೇಗುಲಕ್ಕೆ ಬರಲು ಗೋಪುರ ದ್ವಾರಬಾಗಿಲುಗಳಿವೆ. ಈ ದ್ವಾರ ಬಾಗಿಲುಗಳು ಬೃಹತ್ತಾದ ಕಟ್ಟಿಗೆಯಿಂದ ತಯಾರಿಸಲಾಗಿದೆ. ಆದರೂ ವೇಸರ ಶೈಲಿಯಲ್ಲಿ ದೇಗುಲ ರಚನೆಯಾಗಿವುದರಿಂದ ಇದು ಕಲ್ಯಾಣ ಚಾಲುಕ್ಯರ ಕಾಲದ್ದಾಗಿರಬಹುದೆಂದು ತಿಳಿದುಬರುತ್ತದೆ. ಸ್ಥಳಪುರಾಣದ ಪ್ರಕಾರ ಮೂಲದಲ್ಲಿ ಸೋಮೇಶ್ವರ ದೇವಾಲಯವಾಗಿರಬೇಕು. ಹಾಗೆಯೇ ಸೋಮೇಶ್ವರಕ್ಕೂ ಮುಂಚೆ ಜೈನ ಮಂದಿರವಾಗಿರಲೂ ಗರ್ಭಗೃಹದ ಬಾಗಿಲ ಪಟ್ಟಿಕೆಗೆ ಜಿನ ಬಿಂಬ ಇರುವುದನ್ನ ಕ್ಷೇತ್ರಾಧ್ಯಯನದಿಂದ ತಿಳಿದುಬಂದ ಸಂಗತಿಯಾಗಿದೆ. ಇದರೊಂದಿಗೆ ಹುಲಿಗೆಮ್ಮ ದೇಗುಲವು ಕ್ರಿ. ಶ.1667 ರಲ್ಲಿ ನಿರ್ಮಾಣವಾಗಿರಬೇಕೆಂದು ರಾಯಚೂರು ಜಿಲ್ಲಾ ಗೆಜಿಟಿಯರ್ ನಲ್ಲಿ ಉಲ್ಲೇಖಸಲಾಗಿದೆ.

ದೇಗುಲವು ಮುಖಮಂಟಪ, ರಂಗಮಂಟಪ, ಗರ್ಭಗುಡಿ ರಚನೆಯನ್ನು ಹೊಂದಿದೆ. ಆದರೂ ಗರ್ಭಗುಡಿಗೆ ಪ್ರದಕ್ಷಿಣೆ ಹಾಕಲು ಸುಕನಾಸಿ ಇಲ್ಲ.ಆದರೆ ಇಡೀ ದೇಗುಲದ ಸುತ್ತಲೂ ಪ್ರದಕ್ಷಿಣೆ ಹಾಕಲು ವ್ಯವಸ್ಥೆ ಕಲ್ಪಿಸಿದೆ. ಅಂತರಾಳದಲ್ಲಿ ಜಾಲoದ್ರ ಕಿಟಕಿಗಳಿಲ್ಲ. ನವರಂಗದ ಬೃಹತ್ ಕಲ್ಲುಕಂಬಗಳು ದೇವಾಲಯವನ್ನು ಹೊತ್ತಂತೆ ಕಾಣಸಿಗುತ್ತವೆ . ಗರ್ಭಗೃಹದ ಗೋಡೆಗೆ ಐದಾರು ವೀರಗಲ್ಲುಗಳು ಜೋಡಿಸಲಾಗಿದೆ. ನವರಂಗವು ವಿಶಾಲವಾಗಿದ್ದು ಕುಳಿತುಕೊಳ್ಳಲು ಬೃಹತ್ ಗಾತ್ರದ ಗ್ರಾನೈಟ್ ಹಾಸು ಬಂಡೆಗಳಿವೆ. ನವರಂಗವು 9 ಕಂಬಗಳ ಮೂರು ಸಾಲುಗಳಿಂದ ಕೂಡಿದೆ. ಕಂಬಗಳಿಗೆ ಯಾವುದೇ ರೀತಿಯ ಕೆತ್ತನೆ ಕಾಣಸಿಗುವುದಿಲ್ಲ. ಆದರೂ ಕಂಬದ ಮೇಲೆ ಕೆಳಗಡೆ ವೃತ್ತಾಕಾರದ, ಚೌಕಕಾರದ ಕೆತ್ತನೆ ಕಂಡುಬರುತ್ತದೆ.ಹೆಚ್ಚಾಗಿ ಹೆಜ್ಜೆ ನಮಸ್ಕಾರ, ದೀಡ್ ನಮಸ್ಕಾರ, ಬೇವಿನುಟಗಿ ಸೇವೆ ಮತ್ತು ದೇವಿಗೆ ಕೊರಿಕೊಂಡವರು ತಮ್ಮ ಮಕ್ಕಳನ್ನು ಮುತ್ತು ಕಟ್ಟುವ ಪದ್ಧತಿ ಹಾಗೇನೆ ಜೋಗಪ್ಪ – ಜೋಗಮ್ಮಗಳಾಗುವುದು ಕಂಡುಬರುತ್ತದೆ. ಭಕ್ತರ ಅನುಕೂಲಕ್ಕಾಗಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಹುಲಿಗೆಮ್ಮ ದೇಗುಲದ ಗರ್ಭಗುಡಿಯಲ್ಲಿ ದೇವಿಯ ಮೂರ್ತಿಗೆ ಬೆಳ್ಳಿ ತಗಡಿನ ಪಟ್ಟಿಕೆ ಅಳವಡಿಸಲಾಗಿದೆ. ಗರ್ಭಗುಡಿಯಲ್ಲಿ ನಾಗಜೋಗಿ – ಬಸವಜೋಗಿಗೆ ದೊರಕಿದ ಸಾಲಿಗ್ರಾಮಗಳನ್ನು ಮೂರ್ತಿಗೆ ಇರಿಸಲಾಗಿದೆ. ದೇವಿಯ ಶಕ್ತಿಗೆ ಮೆಚ್ಚಿದ ಟಿಪ್ಪುಸುಲ್ತಾನ ದೇವಿಗೆ ಮುತ್ತಿನ ಹಾರ ನೀಡಿದ್ದಾನೆ ಎಂಬ ಮಾತಿದೆ ಅದರ ಕುರಿತು ಕಾವ್ಯಗಳಲ್ಲಿ ಉಲ್ಲೇಖವಿದೆ. ಆ ಮುತ್ತಿನ ಯಾರ ಕಡೆ ಇದೆ ತಿಳಿಯುತ್ತಿಲ್ಲ. ಇನ್ನು ಇಡೀ ದೇಗುಲವನ್ನು ಹೊಯ್ಸಳ ಶೈಲಿ ಮಾದರಿಯ ಬೃಹತ್ ಆಕಾರದ ಕಲ್ಲು ಕಂಭಗಳಿವೆ. ದೇವಿಯ ಗುಡಿಯ ಎದುರಿಗೆ ಮಾತಂಗಿ ಪ್ರತ್ಯೇಕ ಗುಡಿ ಇದೆ. ಬಲಬದಿಗೆ ಕ್ಷೇತ್ರಪಾಲಕನ ಮೂರ್ತಿಯಿದೆ. ಇದರ ಬಳಿಯಲ್ಲಿ ಪರಶುರಾಮನ ದೇಗುಲವಿದೆ. ಹುಲಿಗೆಮ್ಮ ಗುಡಿಯ ಎದುರಿಗೆ ಎತ್ತರವಾದ ದೀಪಸ್ತoಭವಿದೆ. ಇದರ ಕಟ್ಟೆಯ ಮೇಲೆ ಗುಂಡುಕಲ್ಲುಗಳಿವೆ. ಅವುಗಳನ್ನು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಎತ್ತುತ್ತಾರೆ. ಹಾಗೇನೆ ಸ್ಥoಭದ ಬಳಿಯಲ್ಲಿ ಆಳೆತ್ತರದ ಕಂಬಕ್ಕೆ ಕೈಯಿಂದ ತಿರುಗುವ ಕಲ್ಲುಕಂಬ ಇದೆ. ಇದರ ಎಡಕ್ಕೆ ಅದರಲ್ಲೂ ಮಾತಂಗಿ ಗುಡಿಯ ಎದುರಿಗೆ ಈ ಹಿಂದೆ ಸಿಡಿ ಆಚರಣೆ ನಡೆಸಲಾಗುತಿತ್ತು ಎನ್ನಲಿಕ್ಕೆ ಸಿಡಿಕಂಬವಿದೆ. ಇದರ ಬಳಿಗೆ ಅಗ್ನಿಪವಾಡ ನಡೆಸುವ ಕೊಂಡ ಇದೆ.ಪೂಜೆ ಸಲ್ಲಿಸಿದ ಭಕ್ತರು ದೇಗುಲದ ಎದುರಿಗೆ ಕುಳಿತು ಕೊಳ್ಳಲು ವಿಶಾಲವಾದ ಜಾಗವಿದೆ.

ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವವು ಒಂದು ತಿಂಗಳ ಕಾಲ ಜರುಗುತ್ತದೆ. ಆಗಿಹುಣ್ಣಿಮೆಯಿಂದ ಆರಂಭಗೊಂಡ ಜಾತ್ರೆ ಕಾರಹುಣ್ಣಿಮೆವರೆಗೂ ಜರುಗುತ್ತದೆ. ಎತ್ತಿನಬಂಡಿ, ಟೆಂಪೋ, ಕಾರು, ಬಸ್ಸು ಇಲ್ಲವೇ ರೈಲಿನ ಮೂಲಕ ಬರುವ ಭಕ್ತರು ಹುಲಿಗೆಮ್ಮ ಗುಡಿ ಹತ್ತಿರ ಬಂದಂತೆಲ್ಲಾ ಪ್ರತಿಯೊಬ್ಬರೂ ‘ಹುಲಿಗೆಮ್ಮ ನಿನ್ನಾಲ್ಕುದೋ’ ಎನ್ನುತ್ತಾರೆ ಆ ಉದ್ಘಾರದ ಅರ್ಥ ಹೀಗೆದೆ. ಹುಲಿಗೆಮ್ಮ ನಿನಗೆ ನಾಲ್ಕು ಬಾರಿ ಉಧೋ ಉಧೋ ಉಧೋ ಉಧೋ ಎಂದು ನಾಲ್ಕು ಸಾರಿ ಉಚ್ಚರಿಸುವುದರಿಂದ ನಿನ್ನಾಲ್ಕುದೋ ಎಂದರ್ಥ. ಹುಲಿಗೆಮ್ಮ ದೇವಿ ಎಲ್ಲಮ್ಮ ದೇವಿಯ ಪ್ರತಿರೂಪ ಎಂದು ಬಹುತೇಕರ ಅಭಿಪ್ರಾಯವಿದ್ದರೆ ಇನ್ನು ಕೆಲವರು ಎಲ್ಲಮ್ಮ ದೇವಿಯ ತಂಗಿ ಎಂದರೆ ಇನ್ನುಳಿದವರು ಹುಲಿಗೆಮ್ಮ ಪ್ರತ್ಯೇಕ ದೇವತೆ ಎಂತಲೂ ತಿಳಿಸುವರು. ಹುಲಿಗೆಮ್ಮ ದೇವತೆ ಎಲ್ಲಿಂದ ಬಂದು ನೆಲೆಸಿದಳೆನ್ನಲೂ ಯಾವುದೇ ಪುರಾವೆಗಳಿಲ್ಲವಾದರೂ ಜನಪದರ ಕಥೆ, ಸ್ಥಳೀಯ ಐತಿಹ್ಯಗಳು ಈ ರೀತಿಯಾಗಿವೆ.

ಹುಲಿಗೆಮ್ಮ ಕುರಿತು ಐತಿಹ್ಯ ಮತ್ತು ಕಥೆಗಳು :

ಹುಲಿಗಿ ಗ್ರಾಮದಲ್ಲಿ ವಾಸವಾಗಿದ್ದ ನಾಗ ಜೋಗಿ, ಬಸವ ಜೋಗಿ ಎಂಬುವರು ಎಲ್ಲಮ್ಮ ದೇವಿಯ ಭಕ್ತರಾಗಿರುತ್ತಾರೆ. ಪ್ರತಿ ವರ್ಷ ಸವದತ್ತಿಗೆ ಹೋಗಿ ಬರುತ್ತಿದ್ದರು. ಒಂದು ವರ್ಷ ಸವದತ್ತಿಗೆ ಹೋಗುವ ಸಮಯದಲ್ಲಿ ನಿರಂತರ ಮಳೆಯಾಗಿ ನಡಿದಂಡೆಯ ಬಳಿ ಆ ದಿನ ರಾತ್ರಿ ಕಳೆಯುತ್ತಾರೆ. ಅಂದು ಸವದತ್ತಿಗೆ ಹೋಗಲಾಗಲಿಲ್ಲ ಎಂದು ಪರಿತಪಿಸುತ್ತ ಮಲಗಿದ ಅವರಿಗೆ ಎಲ್ಲಮ್ಮ ಕನಸಲ್ಲಿ ಬಂದು ನಾನು ಇನ್ನು ಮುಂದೆ ನಿಮ್ಮ ಊರಲ್ಲಿ ನೆಲೆಗೊಳ್ಳುತ್ತೇನೆ ಎಂದು ಹೇಳುತ್ತಾಳೆ. ಅದೇ ವೇಳೆ ಎರಡು ಸಾಲಿಗ್ರಾಮಗಳು ಅವರಿಗೆ ದೊರಕುತ್ತವೆ. ಅವುಗಳನ್ನು ತೆಗೆದುಕೊಂಡು ಹೋಗಿ ಈಗ ಇರುವ ದೇಗುಲದ ಗರ್ಭಗುಡಿಯ ಗುಂಡು ಕಲ್ಲಿಗೆ ಇಟ್ಟಾಗ ಎರಡು ಕಣ್ಣುಗಳಾಗಿ ಪರಿಣಮಿಸುತ್ತವೆ. ಅಂದಿನಿಂದ ಆ ಕಲ್ಲಿಗೆ ಪೂಜೆ ಮಾಡುತ್ತಾರೆ ಹುಲಿಗೆಯ ಗುಂಡು ಕಲ್ಲಿಗೆ ಪೂಜೆ ಮಾಡುತ್ತಿದ್ದರಿಂದ ಆ ಪದವೇ ಹುಲಿಗೆಮ್ಮ ಆಗಿರಬೇಕೆನಿಸುತ್ತದೆ.ಮತ್ತೊಂದು ಐತಿಹ್ಯವು ಹೀಗಿದೆ ಕೃಷಿಪ್ರಧಾನ ಗ್ರಾಮದಿಂದ ವ್ಯಾಪಾರಕ್ಕಾಗಿ ನದಿ ದಾಟಿ ಹೋಗಬೇಕಾಗಿತ್ತು. ನದಿಗೆ ಹೋಗಬೇಕಾದರೆ ಗುಂಡುಕಲ್ಲಿನ ಮೂಲಕ ಹೋಗಬೇಕು ಈಗ ಇರುವ ಗುಡಿಯ ಗುಂಡುಕಲ್ಲಿನ ಗುಹೆಯಲ್ಲಿ ಹುಲಿಗಳು ವಾಸವಾಗಿದ್ದವು. ಅವುಗಳಲ್ಲಿ ಒಂದು ಹುಲಿ ಮನುಷ್ಯರನ್ನು ತಿನ್ನುತಿತ್ತು. ಇದರಿಂದ ಗುಂಡುಕಲ್ಲಿನ ಮೂಲಕ ಹೋಗಲು ಜನರು ಭಯಪಡುತ್ತಿದ್ದರು. ಒಮ್ಮೆ ಗ್ರಾಮದ ವ್ಯಕ್ತಿಯೊಬ್ಬ ಮನುಷ್ಯರನ್ನು ತಿನ್ನುತ್ತಿದ್ದ ಹುಲಿ ವಾಸವಾಗಿರುವ ಗುಂಡುಕಲ್ಲಿಗೆ ಕಾಪಾಡು ಹುಲಿರಾಯ ಎಂದು ನಮಸ್ಕಾರ ಮಾಡಿ ನದಿದಾಟಿ ಹೋಗಿ ಹಿಂತಿರುಗಿ ಬರುವಾಗಲೂ ಗುಂಡುಕಲ್ಲಿಗೆ ನಮಸ್ಕಾರ ಮಾಡಿ ಸುರಕ್ಷಿತವಾಗಿ ಮನೆಗೆ ಬಂದ ಬಗ್ಗೆ ಊರಿನ ಜನರಿಗೆ ತಿಳಿಸಿದನು. ಊರಿನ ಜನರು ಆ ಗುಂಡುಕಲ್ಲಿಗೆ ನಮಿಸಿ ನಗರಕ್ಕೆ ಹೋಗಿ ಬರುತ್ತಿದ್ದರು. ಹುಲಿಕಲ್ಲಿಗೆ ಪೂಜೆ ಮಾಡುತ್ತಿದ್ದರಿಂದ ಹುಲಿಕಲ್ಲಿಗೆ ಎಂಬ ಪದದಲ್ಲಿನ ಕಲ್ಲಿಗೆ ಎಂಬ ಪದವು ಲೋಪವಾಗಿ ಹುಲಿಗೆ ಎಂದು ಬಳಸಲ್ಪಟ್ಟರು. ಈ ಐತಿಹ್ಯ ಸರಿ ಎನಿಸುತ್ತದೆ.

ಇನ್ನೆರಡು ಕಥೆಗಳು ಹುಲಿಗೆಮ್ಮ ದೇವಿ ಪ್ರತ್ಯೇಕ ಬೇರೆ ಭಾಗದಿಂದ ಬಂದು ಈಗ ಇರುವ ದೇಗುಲದಲ್ಲಿ ನೆಲೆಗೊಂಡ ಚಿತ್ರಣವನ್ನು ಬಿಂಬಿಸುತ್ತವೆ. ಒಮ್ಮೆ ರಾತ್ರಿವೇಳೆ ಅಡ್ಡಲಿಗೆ ಹಿಡಿದು ಕುಳಿತ ವ್ಯಕ್ತಿಯೊಬ್ಬ ಆಕೆಯನ್ನು ಸೋಮೇಶ್ವರ ದೇಗುಲದಲ್ಲಿ ತಂಗಲು ಸೂಚಿಸುತ್ತಾನೆ. ಆಕೆ ಅಡ್ಡಲಗಿ ಹಿಡಿದು ಕೊಂಡು ಬಂದು ಈ ರಾತ್ರಿ ಉಳಿದುಕೊಳ್ಳಲು ಸ್ಥಳ ಕೇಳುತ್ತಾಳಂತೆ. ಆಗ ಸೋಮೇಶ್ವರನ ಗುಡಿಗೆ ಹೋಗು ಎಂದು ಸೂಚಿಸುತ್ತಾನೆ. ಗುಡಿಗೆ ಬಂದವಳು ಆ ದಿನ ರಾತ್ರಿ ತಂಗಲು ಸ್ಥಳ ಕೇಳುತ್ತಾಳೆ. ಸೋಮೇಶ್ವರ ಒಪ್ಪಿಗೆ ನೀಡಿದ ಕೂಡಲೇ ಕೈಲಿ ಇಡಿದುಕೊಂಡ ಅಡ್ಡಲಗಿಯನ್ನು ಕೆಳಗೆ ಇಟ್ಟ ತಕ್ಷಣ ಅಗಲ ಆಗುತ್ತಾ ಇಡೀ ದೇಗುಲವೆಲ್ಲ ವ್ಯಾಪಿಸಿಕೊಳ್ಳುತ್ತದೆ. ಸ್ವಲ್ಪ ಜಾಗ ಕೊಟ್ಟಿದ್ದಕ್ಕೆ ಇಡೀ ದೇಗುಲವೆಲ್ಲ ಆಕ್ರಮಿಸಿದಳೆಂದು ಸೋಮೇಶ್ವರನು ಈಗ ಇರುವ ಗರ್ಭಗುಡಿಯ ಹಿಂದಿನ ಬಾಗಿಲು ಹೊಡೆದು ಕೊಂಡು ಕಂಪ್ಲಿಯ ಕಡೆಗೆ ಹೋದನಂತೆ. ಈಗಲೂ ಗೋಡೆ ಹೊಡೆದು ಹೋದ ಸ್ಥಳದಲ್ಲಿ ಕಟ್ಟಿಗೆಯ ಬಾಗಿಲು ಹೊಂದಿಸಲಾಗಿದೆ. ಕಂಪ್ಲಿಗೆ ಹೋದ ಸೋಮೇಶ್ವರ ಎಂಬುದಕ್ಕೆ ಈಗಲೂ ಕಂಪ್ಲಿಯಲ್ಲಿ ಸೋಮೇಶ್ವರನ ದೇಗುಲವೊಂದಿದೆ.

ಹಾಗೇನೆ ಮತ್ತೊಂದು ಜನಪದರ ಕಥೆ ಹೀಗಿದೆ.ಈ ಗ್ರಾಮವು ಸೋಮೇಶ್ವರ ಶಾಸನದಲ್ಲಿ ನಿರೂಪಿತವಾದಂತೆ ಕೃಷಿಗಾರಿಕೆ ತಾಣವಾಗಿತ್ತಂತೆ. ಗರ್ಭಿಣಿ ಆಗಿದ್ದ ಹುಲಿಗೆಮ್ಮ ಗೌಡನ ಹೊಲದಲ್ಲಿ ಬೆಳೆದ ತರಕಾರಿಯನ್ನು ಕದ್ದು ಮನೆಗೆ ಬರುವಾಗ  ಮಾತಂಗಿ ಮನೆಯಲ್ಲಿ ಹುಲಿಗೆಮ್ಮ ಅಡಗಿ ಕುಳಿತಿರುತ್ತಾಳೆ. ಗೌಡ ಬಂದು ಕೇಳಿದರು ತನ್ನ ಮನೆಯಲ್ಲಿ ಇಲ್ಲ ಎಂದು ಮಾತಂಗಿ ಸುಳ್ಳು ಹೇಳಿದ್ದಕ್ಕೆ ಗೌಡನು ಮಾತಂಗಿಯ ಮೂಗನ್ನು ಕೊಯುತ್ತಾನೆ. ಈಗಲೂ ಮಾತಂಗಿ ಮೂರ್ತಿಯ ಮೂಗು ಕೊಯ್ದoತೆ ಕಾಣಸಿಗುತ್ತದೆ. ಗೆಳತಿಗೆ ತೊಂದರೆ ನೀಡಿದ ಗೌಡನ ವಿರುದ್ಧ ಸಿಟ್ಟಿಗೆದ್ದ ಹುಲಿಗೆಮ್ಮ ಗೌಡನ ಮೈಮೇಲೆ ಭಂಡಾರ ಎಸೆದು ಕುಷ್ಠರೋಗಿಯಾಗು ಎಂದು ಶಾಪ ನೀಡುತ್ತಾಳೆ. ಅದರ ವಿಮೋಚನೆಗಾಗಿ ದೇವಿಗೆ ಜಗ ಹೊತ್ತು ಅಡ್ಡಲಿಗೆ ಹಿಡಿದು ಹರಕೆ ತೀರಿಸುತ್ತಾನೆ.

ಹುಲಿಗೆಮ್ಮ ತವರುಮನೆ ಕಂಪ್ಲಿ :
ಹುಲಿಗೆಮ್ಮ ದೇವಿಯ ಕಟ್ಟಿಗೆ  ಮೂರ್ತಿಗೆ ಈ ಹಿಂದೆ ಕಂಪ್ಲಿಯಲ್ಲಿ ಬಣ್ಣ ಹಾಕಿಸಿಕೊಂಡು ಬರುವ ಪದ್ಧತಿ ಇತ್ತು. ಈ ಕಾರಣಕ್ಕಾಗಿ ಕಂಪ್ಲಿಯು ಹುಲಿಗೆಮ್ಮಳ ತವರು ಮನೆ ಎಂಬುದು ಜನಪದರ ನಂಬಿಕೆಯಾಗಿದೆ.

ಸ್ಯಾಕೆ ಹರಿಯುವ ಆಚರಣೆ :
ವಿಶೇಷವಾಗಿ ಕಂಪ್ಲಿ ಬಳಿಯ ರಾಮಸಾಗರದ ಮಾದಿಗರು ಸ್ಯಾಕೆ ಹರಿಯುವ ಆಚರಣೆಯನ್ನು ಇಂದಿಗೂ ಭಕ್ತಿಭಾವದಿಂದ ನೆರವೇರಿಸುತ್ತಾರೆ. ಅಡ್ಡಲಿಗಿಯಲ್ಲಿ ಅಕ್ಕಿ,ತರಕಾರಿ ಇಟ್ಟು ವಿಶೇಷವಾಗಿ ಮೊದಲು ಹೆಂಡವನ್ನು ಪೂಜೆಗೆ ಇಡುತ್ತಿದ್ದರು. ಈಗ ಸಾರಾಯಿ ಇಲ್ಲವೇ ಬ್ರಾಂಡಿ ಇಟ್ಟು ಜೋಗಮ್ಮರಿಗೆ ನೀಡುವ ಪದ್ಧತಿ ಈಗಲೂ ಇದೆ. ಇದಕ್ಕೆ ಜೋಗಪಂಕ್ತಿ ನೀಡುವರೆನ್ನುವರು. ಈ ಭಕ್ತರು ಹಿಂದೊಮ್ಮೆ ಕಾಲ್ನಡಿಗೆ ಇಲ್ಲವೇ ಎತ್ತಿನ ಬಂಡಿಯ ಮೂಲಕ ಕುಟುಂಬದವರೆಲ್ಲರೂ ತೆರಳಿ ಬಂದು ದೇಗುಲದಲ್ಲಿ ನಡೆಯುವ ಆಚರಣೆಗಳನ್ನು ನೋಡಿ ಊರಿಗೆ ಮರಳಿ ಬರುತ್ತಿದ್ದರು. ಈಗ ಬಸ್ಸಿನ ಮೂಲಕ ಬಂದು ದೇಗುಲದ ಆವರಣದಲ್ಲಿ ಜಾತ್ರೆ ಆರಂಭದಿಂದ ಮುಕ್ತಾಯದವರೆಗೂ ಇದ್ದು ತೆರಳುವುದು ಕ್ಷೇತ್ರ ಅಧ್ಯಯನದಿಂದ ತಿಳಿದುಬಂದ ಅಂಶವಾಗಿದೆ.

ತಂಗು ಸ್ಥಳದಲ್ಲೇ ಹುಲಿಗೆಮ್ಮ ದೇವಿ ಆರಾಧನೆ, ವಿಭಿನ್ನ ಪೂಜೆ :
ಬೇರೆ ಸ್ತ್ರೀ ಶಕ್ತಿ ದೇವತೆಗಳ ದೇಗುಲಕ್ಕೆ ತೆರಳಿ ಪ್ರಸಾದ ನೀಡುವ ಪದ್ಧತಿ ಇರುವುದು ಸಹಜ. ಆದರೆ ಹುಲಿಗೆಮ್ಮ ಗುಡಿಯ ಬಳಿ ತುಂಬಾ ಭಿನ್ನವಾದ ಪೂಜೆ ಕೈಗೊಳ್ಳುವುದು ಕಾಣಸಿಗುತ್ತದೆ.ಆಯಾ ಊರುಗಳಿಂದ ಹುಲಿಗಿಗೆ ಬಂದ ಭಕ್ತರು ತಾವು ತಂಗಿರುವ ಸ್ಥಳದಲ್ಲೇ ಅಡ್ಡಲಗಿ ಪೂಜೆ ಮಾಡಿ ಅಲ್ಲಿಯೇ ಜೋಗತಿಯರಿಗೆ ಪ್ರಸಾದ ನೀಡಿದರೆ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಈಗಲೂ ಜನಜನಿತ. ತಾವು ತಂಗಿರುವ ಸ್ಥಳದಲ್ಲಿಯೇ ತನು ಬಿಂದಿಗೆ ಇರಿಸಿ ಅಡ್ಡಲಗಿ ಪೂಜೆಯನ್ನು ಭಕ್ತಿ ಭಾವದಿಂದ ಕೈಗೊಳ್ಳುತ್ತಾರೆ. ಈ ಕಾರಣಕ್ಕಾಗಿ ಭಕ್ತರ ಬಳಿಗೆ ಹುಲಿಗೆಮ್ಮ ದೇವಿ ಆಗಮಿಸುವಳೆಂಬ ನಂಬಿಕೆ ಈಗಲೂ ಜನರಲ್ಲಿದೆ.

ಪವಾಡಗಳೇ ಪ್ರಮುಖ ಆಕರ್ಷಣೆ :
ಹುಲಿಗೆಮ್ಮ ದೇಗುಲವು ಧಾರ್ಮಿಕ ದತ್ತಿ ಇಲಾಖೆಗೆ ಸೇರುವ ಮುಂಚೆ ಪೂಜಾ ಕಾರ್ಯಗಳನ್ನು ನಾಲ್ಕು ಪೂಜಾರಿ ಮನೆತನಗಳು ನಿತ್ಯವೂ ಪೂಜಾ ಕಾರ್ಯ ನೆರವೇರಿಸುತ್ತಿದ್ದರು. ಈಗ ಬ್ರಾಹ್ಮಣರು ನಿತ್ಯವೂ ಪೂಜೆ ಕೈoಕರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಜಾತ್ರೆಯ ವೇಳೆಯಲ್ಲಿ ರಥೋತ್ಸವದ ನಂತರದ ದಿನದಿಂದ ಪವಾಡಗಳನ್ನು ಆಯಾ ಮನೆತನದವರು ನಡೆಸಿಕೊಡುತ್ತಾರೆ.ಅವರಲ್ಲಿ ಅಕ್ಕಿಪಡೆ, ಬಾಳೆದಿಂಡು, ಪಾಯಸ ಹಾಗೂ ಅಗ್ನಿಕೊಂಡ ಪವಾಡ ಮನೆತನದವರೆಂದು ಕರೆಯಲಾಗುತ್ತದೆ.

ಅಕ್ಕಿ ಪಡೆ ಪವಾಡ : ಈ ಎಲ್ಲಾ ಪವಾಡಗಳು ರಥೋತ್ಸವದ ಮರು ದಿನದಿಂದ ಆಯಾ ಮನೆತದವರು ಸರದಿಯಂತೆ ನಡೆಸಿಕೊಡುತ್ತಾರೆ. ಅಕ್ಕಿಪಡೆ ಪವಾಡವು ಇಲ್ಲಿ ಹೆಸರೇ ಸೂಚಿಸುವಂತೆ ಕುಮ್ಮಟದುರ್ಗದ ಕುಮಾರರಾಮನಿಂದ ವೀಳೆ ಹಾಗೂ ಅಕ್ಕಿಯನ್ನು ತರಲಾಗುತ್ತದಂತೆ. ಆದರೆ ಹೊಸಪೇಟೆಯ ಜಾತ್ರೆಯ ಮುಗಿದ ಬಳಿಕ ವಡಕರಾಯನ ವೀಳೆ ಹುಲಿಗೆಗೆ ಕೊಂಡೊಯ್ಯಲಾಗುತ್ತದೆಯಂತೆ ಎಂಬ ಮಾತು ಈ ಭಾಗದಲ್ಲಿದೆ. ಒಟ್ಟಿನಲ್ಲಿ ಮೊದಲ ಪವಾಡ ಅಕ್ಕಿಪಡೆ ಪವಾಡವಾಗಿರುತ್ತದೆ. ಬಹುತೇಕ ಪವಾಡಕ್ಕೆ ಮುನ್ನ ದೇವಿಯಿಂದ ಅಪ್ಪಣೆಗಾಗಿ ಹೂ ಕೇಳುವುದು ವಾಡಿಕೆ. ಉಂಡೆ ಗಾತ್ರದ ಹೂ ನೀಡುವುದರ ಮೂಲಕ ಪವಾಡ ನಡೆಸುವರು.ಗುಡಿಯ ಒಳಗಡೆ ಅಕ್ಕಿಯನ್ನು ಗದ್ದುಗೆಯ ಮಾದರಿಯಲ್ಲಿಟ್ಟು ಸೇರಿನಿಂದ ಅಳೆದು ಪೂಜೆ ಸಲ್ಲಿಸುವರು. ಈ ಅಕ್ಕಿಯನ್ನು ಪಾಯಸ ಪವಾಡಕ್ಕೆ ಬಳಸುವರು. ಅಲ್ಲಿಯವರೆಗೂ ಅಕ್ಕಿಯಯನ್ನು ತೆಗೆದಿರಿಸಲಾಗುತ್ತದೆ.ಇದಕ್ಕೆ ಅಕ್ಕಿಪಡೆ ಪವಾಡವೆನ್ನುವರು.

ಬಾಳೆದಿಂಡು ಪವಾಡ : ಈ ಪವಾಡವು ನೋಡಲು ಕುತೂಹಲ ಹಾಗೂ ವಿಸ್ಮಯವಾಗಿರುತ್ತದೆ.ಈ ಹಿಂದೆ ಬಾಳೆದಿಂಡಿನಿಂದ ಪಲ್ಲಕ್ಕಿ ಮಾಡಿ ಪವಾಡ ನಡೆಸುತ್ತಿದ್ದರಂತೆ. ಅದರಲ್ಲಿ ಬಾಳೆದಿಂಡು ನಡೆಸುವ ಬಾಲಕನನ್ನು ಕುಳ್ಳಿರಿಸಿ ಪ್ರದಕ್ಷಿಣೆ ಹಾಕುತ್ತಿದ್ದರು. ಈಗ ಬಾಳೆದಿಂಡು ಮತ್ತು ಕಬ್ಬಿನ ಕೋಲು ಹಿಡಿದಿರುತ್ತಾರೆ. ಈ ಪವಾಡ ನಡೆಸುವ ಇಬ್ಬರು ಮುಖಕ್ಕೆ ಕುಂಕುಮವನ್ನು ಹಚ್ಚಿಕೊಂಡು ಕೈಯಲ್ಲಿ ಬಾಕು ಹಿಡಿದಿರುತ್ತಾರೆ. ಇವರನ್ನು ಭಕ್ತರು ಹೆಗಲ ಮೇಲೆ ಹೊತ್ತು ಗುಡಿಯ ಹೊರ ಅಂಗಳದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ಉದೋ ಉದೋ ಎನ್ನುತ್ತಾ ಜೋಗತಿಯರು ಹಿಂದೇನೆ ಸಾಗುತ್ತಾರೆ. ಇದು ಐದು ಪ್ರದಕ್ಷಿಣೆ ಹಾಕುವ ಪದ್ಧತಿ. ಪ್ರದಕ್ಷಿಣೆಯು ಮೂರನೇ ಸುತ್ತಿಗೆ ಬಂದಾಗ ಪವಾಡ ನಡೆಸಿಕೊಡುವ ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಗೆ ತಲುಪಿರುತ್ತಾರೆ. ಇದನ್ನು ಗಮನಿಸಿದ ಜೋಗಮ್ಮರು ದೇವಿಯನ್ನು ಬೈಯ್ಯುತ್ತಾರೆ. ಪ್ರದಕ್ಷಿಣೆಯು ಐದನೇ ಸುತ್ತು ಬರುವದರೊಳಗಾಗಿ ಪವಾಡ ನಡೆಸಿ ಕೊಡುವವರು ಸಹಜ ಸ್ಥಿತಿಗೆ ತಲುಪುತ್ತಾರೆ. ಅವರನ್ನು ದೇಗುಲದೊಳಗೆ ಕರೆದೊಯ್ದು ಮುಖಕ್ಕೆ ಭಂಡಾರ ಹಚ್ಚಿದಾಗ ಸಹಜ ಸ್ಥಿತಿಗೆ ಬರುತ್ತಾನೆ.ಪಾಲ್ಗೊಂಡ ಭಕ್ತರಿಗೆ ಕಬ್ಬಿನ ತುಂಡು ನೀಡುತ್ತಾರೆ. ಇಲ್ಲಿ ಬಳಸಿದ ಬಾಳೆದಿಂಡು ಮತ್ತು ಕಬ್ಬು ಫಲವಂತಿಕೆ ಪ್ರತೀಕ ಎಂಬುದು ಜನಪದರ ನಂಬಿಕೆಯಾಗಿದೆ.

ಪಾಯಸ ಹಾಗೂ ಅಗ್ನಿಕೊಂಡ ಪವಾಡ :
ಪಾಯಸ ಪವಾಡವು ಸಹ ಫಲವಂತಿಕೆಯ ಪ್ರತೀಕವಾಗಿದೆ. ಈ ಪವಾಡವನ್ನು ದೇಗುಲದ ನವರಂಗ ಮಂಟಪದ ಎದುರಿಗೆ ತೋರಿಸಲಾಗುತ್ತದೆ. ಅಕ್ಕಿಪಡೆ ಪವಾಡದ ದಿನದಂದು ಪೂಜೆ ಮಾಡಿ ಇರಿಸಿದ ಅಕ್ಕಿಯನ್ನು ಬೃಹತ್ ಗಾತ್ರದ ಗಡಿಗೆಯಲ್ಲಿ ಹಾಕಿ ಅದರಲ್ಲಿ ಬೆಲ್ಲ ನೀರು ಬೆರೆಸಿ ಗಡಿಗೆಯ ಕೆಳಗೆ ಒಲೆ ಹಚ್ಚಿ ಕುದಿಸಲಾಗುತ್ತದೆ. ಈ ವೇಳೆ ವಿಶೇಷವಾಗಿ ಗಡಿಗೆಯ ಮೂರು ಮೂಲೆಗೆ ಇರಿಸಿದ್ದ ಬಟ್ಟೆಯ ಸಣ್ಣ ಸಿಂಬೆಗಳಿಗೆ ಬೆಂಕಿ ತಗುಲಿದರೂ ಸುಟ್ಟಿರುಹುದಿಲ್ಲ. ನಿಗದಿತ ವೇಳೆಗೆ ಗರ್ಭಗುಡಿಯಲ್ಲಿ ತೆರಳಿದ ಪಾಯಸ ಪವಾಡ ನಡೆಸಿ ಕೊಡುವವರು ದೇವಿಯ ಮೂರ್ತಿಯ ಎದುರಿಗೆ ನಿಂತು ಪವಾಡ ಸುಗಮವಾಗಿ ಜರುಗಲು ಒಪ್ಪಿಗೆಗಾಗಿ ಹೂ ಕೇಳುತ್ತಾರೆ. ಹೂ ನೀಡಿದ ತಕ್ಷಣ ಗರ್ಭಗುಡಿಯಿಂದ ಮುಖಕ್ಕೆ ಕುಂಕುಮ ಹಚ್ಚಿಕೊಂಡ ಇಬ್ಬರು ಪೂಜಾರಿಗಳು ಬಂದು ಕುದಿಯುವ ಪಾಯಸದ ಗಡಿಗೆಯಲ್ಲಿ ಕೈಹಾಕಿ ಕಂಚಿನ ತಟ್ಟೆಯಲ್ಲಿ ಪಾಯಸ ಹಾಕುತ್ತಾರೆ. ಈ ಪವಾಡವನ್ನು ಭಕ್ತರು ಸೂಕ್ಷ್ಮವಾಗಿ ಗಮನಿಸುತ್ತಾರೆ. ತಟ್ಟೆಯಲ್ಲಿ ಹಾಕಿದ ಪಾಯಸವು ಯಾವ ಕಡೆ ಸರಿಯಾಗಿ ಬೆಂದಿರುತ್ತದೋ ಆ ದಿಕ್ಕಿಗೆ ಮಳೆ – ಬೆಳೆ ಸಮೃದ್ಧಿ ಎಂದು ತಿಳಿಯುವರು. ಬೆಂದಿಲ್ಲದ ದಿಕ್ಕಿಗೆ ಮಳೆ – ಬೆಳೆ ಸರಿಯಾಗಿ ಆಗಲಾರದೆಂದು ಜನರು ಈಗಲೂ ನಂಬುತ್ತಾರೆ. ಈ ಕಾರಣಕ್ಕಾಗಿ ಪಾಯಸ ಪವಾಡವು ಫಲವಂತಿಕೆಯ ಆಚರಣೆಯಾಗಿದೆ ಎನಿಸುತ್ತದೆ. ಈ ಪವಾಡದ ಬಳಿಕ ಕೊಂಡ ಪವಾಡಕ್ಕೆoದು ಪೇರಿಸಿದ್ದ ಕೊರಡುಗಳು ನಿಗಿ ನಿಗಿ ಉರಿಯುತ್ತಿರುತ್ತವೆ.ಮತ್ತೆ ಕೊಂಡಪವಾಡ ಜರುಗಿಸಲು ಅಪ್ಪಣೆಗಾಗಿ ದೇವಿಗೆ ಇಬ್ಬರು ಪೂಜಾರಿಗಳು ಮತ್ತು ದೇಗುಲದ ಆಡಳಿತ ಮಂಡಳಿ ಹಾಗೂ ಊರಿನ ಮುಖಂಡರು ಸೇರಿರುತ್ತಾರೆ.ಹೂ ನೀಡಿದ ತಕ್ಷಣ ಕುಂಕುಮ ಮುಖಕ್ಕೆ ಹಚ್ಚಿಕೊಂಡ ಇಬ್ಬರು ಪೂಜಾರಿಗಳು ಕೈಲಿ ಬಾಕು ಹಿಡಿದು ಕೊಂಡು ಕೊಂಡ ಪವಾಡದ ಸ್ಥಳಕ್ಕೆ ಬರುತ್ತಾರೆ. ಬರುವಾಗ ಭಕ್ತರೆಲ್ಲರೂ ಉದೋ ಉದೋ ಎಂಬ ಉದ್ಘೋಷ ಧ್ವನಿ ಮೊಳಗಿಸುತ್ತಾರೆ. ಇಬ್ಬರು ಪೂಜಾರಿಗಳು ಗುಡಿಯ ಎದುರಿಗೆ ನಿಂತು ಕೋಳಿಯನ್ನು ಕೈಲಿ ಹಿಡಿದುಕೊಂಡು ತೂರುತ್ತಾರೆ. ಇದಕ್ಕೆ ‘ಹಾರ್ಗೋಳಿ’ ಎನ್ನುತ್ತಾರೆ. ಬಳಿಕ ತುಪ್ಪವನ್ನು ಬೆಂಕಿಯಲ್ಲಿ ಎರೆದ ಬಳಿಕ ಕೊಂಡ ಪವಾಡ ನಡೆಸುವ ಪೂಜಾರಿಗಳು ನಿಗಿ ನಿಗಿ ಉರಿಯುವ ಕೊಂಡದಲ್ಲಿ ನಡೆದು ಸಾಗುತ್ತಾರೆ. ಇಲ್ಲಿಗೆ ಪವಾಡಗಳು ಮುಗಿಯುತ್ತವೆ. ಕೊಂಡದಲ್ಲಿಯ ಆಧಾರವನ್ನು ಭಕ್ತರು ತೆಗೆದುಕೊಂಡು ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ.

ನಂಬಿಕೆ : ಹುಲಿಗೆಮ್ಮ ದೇವಾಲಯಕ್ಕೆ  ಬಹುತೇಕವಾಗಿ ಗ್ರಾಮೀಣ ಭಾಗದಿಂದ ಭಕ್ತರು ಆಗಮಿಸಿರುತ್ತಾರೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ತಮಗೆ ಬೇಗ ಸಂತಾನ ಪ್ರಾಪ್ತಿ ಆಗದಿದ್ದರೆ ದೇವಿಯನ್ನು ಬೇಡಿಕೊಂಡು ಬೇವಿನ ಹುಟ್ಟಗಿ ಸೇವೆ ಮಾಡುತ್ತಾರೆ. ಒಂದು ವೇಳೆ ಹೆಣ್ಣು ಸಂತಾನ ಆದರೆ ಆ ಮಗುವಿಗೆ ಮುತ್ತು ಕಟ್ಟ ಬೇಕೆಂಬ ನಂಬಿಕೆ ಇದೆ ಆದರೆ ಕೆಲವು ಮಹಿಳಾ ಸಂಘಟಕರ ಜಾಗೃತಿಯಿಂದ ಜೋಗತಿ ಮುಡಿಯನ್ನು ಕತ್ತರಿಸುತ್ತಾರೆ. ಈಗ ಕೂದಲು ಗಂಟು ಕಟ್ಟುವ ಸಂಖ್ಯೆ ಕಡಿಮೆ ಇದೆ. ದೇಗುಲದ ಎದುರಿನ ಕಟ್ಟೆಯ ಮೇಲೆ ಉಪ್ಪು ಸುರಿದರೆ ತಮಗೆ ಇಲ್ಲವೇ ಸಾಕು ಪ್ರಾಣಿಗಳಿಗೆ ರೋಗ ಬರುವುದಿಲ್ಲ ಎಂಬ ಅಚಲವಾದ ನಂಬಿಕೆ ಈಗಲೂ ಇದೆ.

ಲೇಖನ : ಡಾ. ಗೋವಿಂದ.
ಸಹಾಯಕ ಪ್ರಾಧ್ಯಾಪಕರು.
ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!