ಬಳ್ಳಾರಿ / ಕಂಪ್ಲಿ : ಪಟ್ಟಣದ ಹಳೆಯ ಶ್ರೀ ರಾಮಕೃಷ್ಣ ಹಿರಿಯ ಪ್ರಾಥಮಿಕಯಲ್ಲಿನ 2002- 2003 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ಭಾನುವಾರ ತಾಲೂಕಿನ ರಾಮಸಾಗರ ಸಮೀಪದ ಪಂಪ ವಿದ್ಯಾಪೀಠ ಬಳಿಯ ತುಂಗಭದ್ರಾ ರಿವರ್ ವ್ಯೂ ರೆಸಾರ್ಟ್‌ನಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ರಾಮಕೃಷ್ಣ ಹಿರಿಯ ಪ್ರಾಥಮಿಕ ನೆಚ್ಚಿನ ಗುರುಗಳಿಗೆ ಅದ್ದೂರಿ ಸ್ವಾಗತ ಕೋರಿದರು.
ವಿದ್ಯಾರ್ಥಿಗಳು ಶಿಕ್ಷಕರು ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಮಾರಂಭದ ಉದ್ದಕ್ಕೂ ಹಲವು ನೆನಪುಗಳನ್ನು ಮೆಲುಕು ಹಾಕಲಾಯಿತು.
ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಎಲ್ಲಾ ಗುರುಗಳಿಗೆ ಸನ್ಮಾನ ಮಾಡುವ ಮೂಲಕ ಗುರುಭಕ್ತಿ ಮೆರೆದರು.
ತಮಗೆ ಅಕ್ಷರ ಕಲಿಸಿದ ಶಿಕ್ಷಕರನ್ನ ಹಲವು ವರ್ಷಗಳ ನಂತರ ಕಂಡ ವಿದ್ಯಾರ್ಥಿಗಳು ಸಂತಸ ಪಟ್ಟರು .
ತಮ್ಮನ್ನು ಇನ್ನೂ ನೆನಪಿಟ್ಟು ಸನ್ಮಾನಿಸುತ್ತಿರುವ ಮಕ್ಕಳ ಪ್ರೀತಿಯನ್ನು ಕಂಡ ಶಿಕ್ಷಕರ ಕಣ್ಣಂಚಿನಲಿ ಆನಂದಭಾಷ್ಪ ಸುರಿಸಿದರು.
ದೈಹಿಕ ಶಿಕ್ಷಕ ರಮೇಶ ಮಾತನಾಡಿ ಹಳೇ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಸ್ಮರಿಸಿ ಗುರುವಂದನೆ ಕಾರ್ಯಕ್ರಮ ಕೈಗೊಂಡಿದ್ದು ನಿಜಕ್ಕೂ ಸಂತಸ ತಂದಿದೆ. ಬಾಲ್ಯದಲ್ಲಿ ವಿದ್ಯೆ ಕಲಿಯುವಾಗ ಸಾಕಷ್ಟು ಮಕ್ಕಳಿಗೆ ಗುರುಗಳ ಶ್ರಮದ ಬಗ್ಗೆ ಅರಿವಿರುವುದಿಲ್ಲ. ಮಕ್ಕಳ ಭಾವನೆಯಲ್ಲಿ ಗುರುಗಳೆಂದರೆ ಕೇವಲ ಶಿಕ್ಷಿಸುವ ಹಾಗೂ ದೈನಂದಿನ ಪಠ್ಯ ಬೋಧಿಸುವರೆಂದೇ ಭಾವಿಸಿರುತ್ತಾರೆ. ಹತ್ತಾರು ವರ್ಷ ಕಳೆದಾಗ ಶಿಕ್ಷಕರ ಶ್ರಮ ಮತ್ತು ಮಹತ್ವ ಅರಿತು ಗೌರವಿಸುತ್ತಾರೆ ಎಂದರು.
ನಂತರ ಮಾತನಾಡಿದ ಮುಖ್ಯಗುರು ವಿ. ರಾಮಚಂದ್ರರಾವ ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ಇಂದಿನ ಜನ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಅಗತ್ಯವಿದೆ. ಆ ಮೂಲಕ ಬಾಲ್ಯದ ನೆನಪುಗಳನ್ನು ಮತ್ತೆ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.
ಆ ನಂತರ ಎಲ್ಲಾ ಶಿಕ್ಷಕರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಮೆಲಕು ಹಾಕಿ ಆನಂದಭಾಷ್ಪಗೈದು ಮಾತನಾಡಿ ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಬಾಲ್ಯದಲ್ಲಿ ನೀವು ನೀಡಿದ ನಿಸ್ವಾರ್ಥ ಶಿಕ್ಷಣದ ಪರಿಣಾಮ ನಾವುಗಳು ನಮ್ಮ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಗುರುಗಳ ಸೇವೆಯನ್ನು ಮುಕ್ತಕಂಠದಿಂದ ಹೊಗಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ವಿ. ರಾಮಚಂದ್ರರಾವ್, ಕೆ. ರಮೇಶ, ಪದ್ಮ, ಜಯಲಕ್ಷ್ಮಿ, ಶಾಂತಾ ಇವರನ್ನು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇನ್ನೂ ಊಟವಂತೂ ತುಂಬಾ ರುಚಿಯಾಗಿತ್ತು. ಉಸ್ತುವಾರಿ ವಹಿಸಿದ್ದ ಗೆಳೆಯರನ್ನು ಹೊಗಳಿದ್ದೇ ಹೊಗಳಿದ್ದು.
ಒಂದೆಡೆ ಸೇರಿದ ಸ್ನೇಹಿತರೆಲ್ಲರೂ ಸಕ್ಕತ್ ಹಾಡುಗಳಿಗೆ ಸ್ಟೆಪ್ ಹಾಕಿದ್ರೆ ಇನ್ನು ಕೆಲವು ಕುಚುಕುಗಳು ಇಡೀ ದಿನ ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ ಎಂದು ಗೊಣಗುತ್ತ ಸಮಾರಂಭದ ನಂತರ ಹಳೇಯ ನೆನಪುಗಳೊಂದಿಗೆ ಹಿಂತಿರುಗಿದರು.
ಈ ಸಂದರ್ಭದಲ್ಲಿ 2002- 03 ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳಾದ ಕೆ. ಶ್ವೇತಾ, ಜೆ. ಬಿ. ವಿನಾಯಕ, ನವೀನ್, ಧನಪಾಲ್ ಕಿರಣ್, ಸಾಗರ್, ಎನ್. ಮಂಜುನಾಥ, ದೀಪಾಶ್ರೀ, ದೀಪಾ ಕೆ. ಎಂ. ಜಿ. ರೇಖಾ, ಯು. ವನಜಾಕ್ಷಿ, ಕೆ. ತುಳುಸಿ, ವೀರನಗೌಡ, ಎನ್. ಪ್ರೀತಿ, ಸಂತೋಷ, ಈ. ನಾಗರಾಜ, ಶ್ರುತಿ, ಈಶ್ವರಿ, ಸಿ. ಕೆ. ಮಂಜುನಾಥ, ಸಂದೀಪ್ ಬಿ., ಲಿಂಗರಾಜ್, ವಿನಾಯಕ, ಬಿ. ವೆಂಕಟೇಶ, ಎಸ್. ಉಮೇಶ, ರೇಖಾ ಎಂ. ರಘು, ಮಂಜು ಎಂ, ರಾಘವೇಂದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















