ಕೊಪ್ಪಳ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೂಗೊಳಶಾಸ್ತ್ರ ವಿದ್ಯಾರ್ಥಿಗಳಿಗೆ ಜೇನು ಸಾಕಾಣಿಕೆಯ ಮಹತ್ವ ಹಾಗೂ ಅದರ ಉಪಯೋಗಗಳ ಕುರಿತು ಸ್ಥಳೀಯ ಮಟ್ಟದಲ್ಲಿ ವಿಶೇಷ ಅರಿವುಗಾಗಿ ತಾಲ್ಲೂಕಿನ ಗಿಣಿಗೇರಿಯಲ್ಲಿನ ಜೇನು ಸಾಕಣಿಗೆ ಕೇಂದ್ರವಾದ ಸೋಮಶ್ವರ ಎಂಟರ್ ಪ್ರೈಸಸ್ ಫಾರ್ಮ್ ಗೆ ಭೇಟಿ ನೀಡಿ
ಈ ಕೇಂದ್ರದಲ್ಲಿ ಜೇನು ಸಾಕಾಣಿಕೆಯ ವಿವಿಧ ವಿಧಾನಗಳು, ಜೇನುಕಳ್ಳಿಗಳ ಸಂರಕ್ಷಣೆ, ಜೇನು ಉತ್ಪಾದನೆ ಹಾಗೂ ಗ್ರಾಮೀಣ ಜೀವನೋಪಾಯದಲ್ಲಿ ಜೇನು ಸಾಕಾಣಿಕೆಯ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ಸೋಮಶ್ವರ ಎಂಟರ್ ಪ್ರೈಸ್ ಫಾರ್ಮ್ ನ ಸಚಿನ್ ಅವರು ನೀಡಿದರು.
ತಜ್ಞರು ಜೇನು ಸಾಕಾಣಿಕೆ ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದಾದ ಪರಿಸರ ಸ್ನೇಹಿ ಸ್ವಯಂ ಉದ್ಯೋಗವಾಗಿದ್ದು, ರೈತರು ಹಾಗೂ ಗ್ರಾಮೀಣ ಯುವಕರಿಗೆ ಉತ್ತಮ ಆದಾಯದ ಮೂಲವಾಗಬಹುದು ಎಂದು ಅವರು ವಿವರಿಸುತ್ತಾ ಜೇನುಕಳ್ಳಿಗಳ ಸಂರಕ್ಷಣೆ ಪರಿಸರ ಸಮತೋಲನ ಕಾಪಾಡುವುದಲ್ಲದೆ ಕೃಷಿ ಉತ್ಪಾದಕತೆಯನ್ನೂ ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜೇನು ಗೂಡುಗಳ ನಿರ್ವಹಣೆ, ಜೇನು ಸಂಗ್ರಹಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ತಿಳಿದುಕೊಂಡರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸ್ವಯಂ ಉದ್ಯೋಗ ಹಾಗೂ ಪರಿಸರ ಸ್ನೇಹಿ ಕೃಷಿ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಿತು.
ಈ ಪ್ರಾಯೋಗಿಕ ಭೇಟಿ ಕಾರ್ಯಕ್ರಮದಲ್ಲಿ ಕಾಲೇಜಿನ ಭೂಗೋಳಶಾಸ್ತ್ರದ ಉಪನ್ಯಾಸಕರಾದ ಡಾ. ಪ್ರಕಾಶ ಹುಲ್ಲೂರು, ಶ್ರೀಕಾಂತ್ ಸಿಂಗಾಪುರ್, ಕಸ್ತೂರಿ ಹೊರಪೇಟೆ, ಮಂಜುನಾಥ್, ಸಮಿ ಉದ್ದಿನ್ ಕ್ವಾಜಿ, ಮಹ್ಮದ್ ರಫಿ ಕೆ ಸೂಡಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
- ಕರುನಾಡ ಕಂದ ಸುದ್ದಿ




















