ಬಳ್ಳಾರಿ / ಕಂಪ್ಲಿ : ತಾಲೂಕು ಕೇಂದ್ರವಾದ ಬಹುದಿನಗಳ ನಂತರ ಸ್ಥಳೀಯ ಶಾಸಕರ ಮುತುವರ್ಜಿಯಿಂದಾಗಿ ಕಂಪ್ಲಿ ಪಟ್ಟಣದ ಜೆಸ್ಕಾಂನಲ್ಲಿ ಎಇಇ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಆದರೆ, ಅಡಿಗಲ್ಲು ಪೂಜೆ ಸಲ್ಲಿಸಿ, ಒಂದು ತಿಂಗಳು ಗತಿಸುತ್ತಾ ಬಂದರೂ ಕಾಮಗಾರಿ ಮಾತ್ರ ಇನ್ನೂ ಆರಂಭಗೊಳ್ಳದೆ ಗ್ರಹಣ ಹಿಡಿದಂತಾಗಿದೆ.
ಪಟ್ಟಣದಲ್ಲಿ ಜೆಸ್ಕಾಂ ಎಇಇ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶಾಸಕ ಜೆ.ಎನ್.ಗಣೇಶ್ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ. ಆದರೂ ಕಂಪ್ಲಿ ಜೆಸ್ಕಾಂ ಉಪ ವಿಭಾಗ (ಎಇಇ)ದ ಕಚೇರಿ ಕಟ್ಟಡ ಕಾಮಗಾರಿ ಆರಂಭಗೊಳ್ಳಲು ಕಟ್ಟಡ ನಿರ್ಮಾಣದ ಸ್ಥಳದಲ್ಲಿರುವ 10 ಮರಗಿಡಗಳು ತಡೆಗೋಡೆಯಾಗಿ ನಿಂತಿದ್ದು, ಅರಣ್ಯ ಇಲಾಖೆಯ ಅನುಮತಿಗಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಜೆಸ್ಕಾಂ ಕಚೇರಿ ಉನ್ನತೀಕರಣಗೊಂಡು ಎರಡು ವರ್ಷ ಕಳೆದರೂ ಜೆಸ್ಕಾಂ ಉಪವಿಭಾಗದ ಕಚೇರಿಗೆ ಸ್ವಂತ ಕಟ್ಟಡ ಭಾಗ್ಯ ಮಾತ್ರ ಕೂಡಿ ಬಂದಿಲ್ಲ.
2024ರಆ.9ರಂದು ಸ್ಥಳೀಯ ಜೆಸ್ಕಾಂ ಸಹಾಯಕ ಇಂಜಿನಿಯರ್(ವಿ) ಕಾರ್ಯಪಾಲನಾ ಶಾಖೆಯನ್ನು ಉಪವಿಭಾಗ (ಎಇಇ) ಕಚೇರಿಯಾಗಿ ಉನ್ನತೀಕರಿಸಲಾಗಿತ್ತು. ಆದರೆ, ಉನ್ನತೀಕರಣಗೊಂಡು ಎರಡು ವರ್ಷಗಳದರೂ ಎಇಇ ಕಚೇರಿಗೆ ಪ್ರತ್ಯೇಕ ಕಟ್ಟಡ ಇಲ್ಲದ ಕಾರಣ ಸಹಾಯಕ ಇಂಜಿನಿಯರ್ ಕಾರ್ಯಪಾಲನಾ ಕಚೇರಿ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಕಂಪ್ಲಿ ಜೆಸ್ಕಾಂ ಇಲಾಖೆಗೆ ಪ್ರತ್ಯೇಕ ಎಇಇ ಕಚೇರಿ ನಿರ್ಮಾಣದ ಅಗತ್ಯತೆಯನ್ನು ಅರಿತ ಶಾಸಕರಾದ ಜೆ.ಎನ್.ಗಣೇಶ್ ಅವರು 2025-26ನೇ ಸಾಲಿನ ಜೆಸ್ಕಾಂ ಅನುದಾನ ಯೋಜನೆಯಡಿಯಲ್ಲಿ 1.50.ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ 2026ರ ಏ.18ರಂದು ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಉತ್ತಮ ಗುಣಮಟ್ಟದ ಕಟ್ಟಡವನ್ನು ನಿಗಧಿತ ಸಮಯದಲ್ಲಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಶಾಸಕರು ಸೂಚಿಸಿದ್ದರು. ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದರೂ, ಭೂಮಿ ಪೂಜೆ ನಡೆದು ತಿಂಗಳಾದರೂ ಸಹಿತ ಅರಣ್ಯ ಇಲಾಖೆಯ ನಿಧಾನ ಗತಿಯಿಂದಾಗಿ ಕಟ್ಟಡ ಕಾಮಗಾರಿ ಮಾತ್ರ ಆರಂಭವಾಗಿಲ್ಲ.
ಎಇಇ ಕಚೇರಿ ಕಟ್ಟಡ ನಿರ್ಮಿಸಲು ಉದ್ದೇಶಿಸಿರುವ ಜೆಸ್ಕಾಂ ಕಚೇರಿ ಆವರಣದಲ್ಲಿ ಹತ್ತು ಮರಗಿಡಗಳುಬೆಳೆದು ನಿಂತಿದ್ದು, ಅವುಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಾಗಿದೆ. ಈಗಾಗಲೇ ಜೆಸ್ಕಾಂ ಕಚೇರಿಯಿಂದ ಮರಗಿಡಗಳ ತೆರವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.ಆದರೂ ಇನ್ನು ಪರವಾನಿಗೆ ದೊರೆತಿಲ್ಲ.
” ಜೆಸ್ಕಾಂ ಕಚೇರಿ ಆವರಣದಲ್ಲಿ ಎಇಇ ಕಚೇರಿಕಟ್ಟಡನಿರ್ಮಾಣ ಮಾಡುವಲ್ಲಿ ಹತ್ತು ಮರಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಒಪ್ಪಿಗೆ ಅಗತ್ಯವಿದೆ. ಮರಗಿಡಗಳ ತೆರವಿಗೆ ಜೆಸ್ಕಾಂ ಕಚೇರಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮರಗಿಡಗಳನ್ನು ತೆರವುಗೊಳಿಸಿದಲ್ಲಿ ಎಇಇಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.
- ಕೆ.ಶ್ರೀನಿವಾಸ ಪ್ರಸಾದ್, ಎಇಇ ಜೆಸ್ಕಾಂ ಕಂಪ್ಲಿ.
” ಕಂಪ್ಲಿ ಜೆಸ್ಕಾಂ ಕಚೇರಿ ಆವರಣದಲ್ಲಿನ ಮರಗಿಡಗಳನ್ನು ತೆರವುಗೊಳಿಸಲು ಜೆಸ್ಕಾಂ ಇಲಾಖೆಯಿಂದ ಪ್ರಸ್ತಾವನೆ ಬಂದಿದ್ದು, ಶೀಘ್ರದಲ್ಲಿ ಮರಗಿಡಗಳ ತೆರವಿಗೆ ಟೆಂಡರ್ ಕರೆದು ಮರಗಿಡಗಳನ್ನು ತೆರವುಗೊಳಿಸಲಾಗುವುದು “.
- ಕೌಶಿಕ್ ದಳವಾಯಿ, ವಲಯ ಅರಣ್ಯಾಧಿಕಾರಿ ಹೊಸಪೇಟೆ.
” ಜೆಸ್ಕಾಂನಲ್ಲಿ ಎಇಇ ಕಛೇರಿ ಕಟ್ಟಡ ನಿರ್ಮಾಣ ಶೀಘ್ರವೇ ಆರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು “.
- ಬಳೆ ಮಲ್ಲಿಕಾರ್ಜುನ.
ಅಧ್ಯಕ್ಷ, ಕರವೇ ತಾಲೂಕು ಘಟಕ, ಕಂಪ್ಲಿ. ವರದಿ : ಜಿಲಾನಸಾಬ್ ಬಡಿಗೇರ್




















