ಶಿವಮೊಗ್ಗ: ರಾಜಕೀಯದಲ್ಲಿ ‘ಕೆಲಸ ಮಾಡದ ಎತ್ತಿಗೆ ಗಂಟೆ ಜಾಗಟೆ ಹೆಚ್ಚಂತೆ’ ಎಂಬ ಗಾದೆ ಮಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲಾ ಹಳದಿ ಎನ್ನುವಂತಹ ನಿಮ್ಮ ಈ ಮನಃಸ್ಥಿತಿ ಹಾಗೂ ಸದಾ ರಾಷ್ಟ್ರಪ್ರೇಮಿ ಸಂಘಟನೆಯನ್ನು ಕಂಡು ಹಪಹಪಿಸುವ ಭ್ರಾಂತಿಯಿಂದ ನಿಮಗೆ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೊಸ ಜವಾಬ್ದಾರಿ ಸಿಕ್ಕಾಗಲಾದರೂ ನಿಮ್ಮ ಮನಃಸ್ಥಿತಿ ಬದಲಾಗಬಹುದು ಎಂಬ ನಾಡಿನ ಜನರ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಸ್ವಂತ ಇಲಾಖೆಯ ನಿರ್ವಹಣೆಯ ಮಾಡದೆ, ಸದಾ ರಾಷ್ಟ್ರಪ್ರೇಮಿ ಸಂಘಟನೆಯನ್ನು ನಿಂದಿಸುವುದನ್ನೇ ನೀವು ಸಾಧನೆ ಎಂದುಕೊಂಡಿರುವುದು ಅಸಹ್ಯಕರ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, “ಕಳೆದ ಮೂರು ವರ್ಷಗಳ ಕಾಲ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ನಿಮ್ಮ ಕೊಡುಗೆ ಕೇವಲ ಶೂನ್ಯ. ಈ ಮೂರು ವರ್ಷದ ಅವಧಿಯಲ್ಲಿ ಇಡೀ ಕರ್ನಾಟಕದಲ್ಲಿ ನೀವು ಎಷ್ಟು ಕಿಲೋಮೀಟರ್ ಗ್ರಾಮೀಣ ರಸ್ತೆಯನ್ನು ನಿರ್ಮಿಸಿದ್ದೀರಿ ಎಂಬ ಪ್ರಶ್ನೆಗೆ ನಿಮ್ಮ ಬಳಿ ಇಂದಿಗೂ ಉತ್ತರವಿಲ್ಲ. ಕಾಂಗ್ರೆಸ್ ಸರ್ಕಾರವು ತನ್ನ ವೋಟ್ ಬ್ಯಾಂಕ್ ರಾಜಕಾರಣದ ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಾಗಿದ್ದ ಹಕ್ಕುಬದ್ಧ SCSP-TSP ಕೋಟ್ಯಂತರ ರೂಪಾಯಿ ಹಣವನ್ನು ನಡುಬೀದಿಯಲ್ಲಿ ದುರ್ಬಳಕೆ ಮಾಡಿಕೊಂಡಾಗ, ದಲಿತರ ಪರ ಎಂದು ಬಡಬಡಿಯುವ ನೀವು ಒಂದೇ ಒಂದು ಉಸಿರೆತ್ತದೆ, ನಿಮ್ಮ ಸ್ವಂತ ಜಿಲ್ಲೆಯಾದ ಕಲಬುರ್ಗಿ ಆರ್ಥಿಕವಾಗಿ ಹಿಂದುಳಿದಾಗ, ಶಿಕ್ಷಣ ಇಲಾಖೆಯ ಕಳಪೆ ಪರೀಕ್ಷಾ ಫಲಿತಾಂಶಗಳಿಂದ ಯುವಕರ ಭವಿಷ್ಯ ಕತ್ತಲಾದಾಗ ಮಾತನಾಡದ ನೀವು, ಕೇವಲ ಆರ್ಎಸ್ಎಸ್ ವಿರುದ್ಧ ನಾಲಗೆ ಹರಿಬಿಡುವುದರಲ್ಲಿ ಮಾತ್ರ ‘ಮಾತನಾಡುವವನೇ ಮಹಾಶೂರ’ ಎಂಬಂತೆ ಬೀಗುತ್ತಿರುವುದು ನಿಮ್ಮ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸುತ್ತಲೂ ಇರುವ ಭ್ರಷ್ಟಾಚಾರದ ಜ್ವಲಂತ ಸಾಕ್ಷಿಗಳು ಇಡೀ ರಾಜ್ಯಕ್ಕೆ ಕಾಣಿಸುತ್ತಿವೆ. ಕಿಯೋನಿಕ್ಸ್ (KEONICS) ಸಂಸ್ಥೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿಗಳ ಲೂಟಿ ಮತ್ತು ಪರ್ಸಂಟೇಜ್ ಕಮಿಷನ್ ದಂಧೆಯ ಕರಾಳ ಹಗರಣಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಿರುವ ಗಂಭೀರ ಆರೋಪಗಳಿಗೆ ನೀವು ಇಂದಿಗೂ ಉತ್ತರಿಸಿಲ್ಲ. ಇಲಾಖೆಯ ಪ್ರಭಾವ ಬಳಸಿ ಸ್ವಂತ ಕುಟುಂಬದ ಸದಸ್ಯರಿಂದ ‘ರಿಜಿಸ್ಟರ್ಡ್’ ಆದ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ಗೆ ಕಾನೂನುಬಾಹಿರವಾಗಿ ಅತ್ಯಂತ ಬೆಲೆಬಾಳುವ ಕೆಐಎಡಿಬಿ (KIADB) ಜಮೀನನ್ನು ಹಂಚಿಕೆ ಮಾಡಿಕೊಂಡ ಅಧಿಕಾರ ದುರ್ಬಳಕೆಯ ಅಕ್ರಮ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಷ್ಟೇ ಅಲ್ಲದೆ, ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಕರ ಭವಿಷ್ಯವನ್ನು ಹರಾಜಿಗಿಟ್ಟ ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI) ನೇಮಕಾತಿ ಹಗರಣದ ಅಕ್ರಮಗಳು ನಿಮ್ಮದೇ ಕಲಬುರ್ಗಿ ಜಿಲ್ಲೆಯ ನೆಲದಲ್ಲಿ ವ್ಯವಸ್ಥಿತವಾಗಿ ನಡೆದಿದ್ದರೂ, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇಡೀ ಭ್ರಷ್ಟ ಜಾಲಕ್ಕೆ ರಾಜಕೀಯ ರಕ್ಷಣೆ ನೀಡುತ್ತಿರುವುದು ನಿಮ್ಮ ಆಡಳಿತದ ನೈಜ ಮುಖವನ್ನು ಜಗತ್ತಿಗೆ ತೋರಿಸಿದೆ,” ಎಂದು ಶಾಸಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೃಹ ಸಚಿವರಾಗಿ ಅವರ ಸದ್ಯದ ವೈಫಲ್ಯಗಳನ್ನು ಬಯಲಿಗೆಳೆದ ಶಾಸಕರು, “ನಾಗರಿಕರ ಸುರಕ್ಷತೆ ಕಾಯಬೇಕಾದ ಗೃಹ ಇಲಾಖೆಯ ಜವಾಬ್ದಾರಿ ಈಗ ನಿಮ್ಮ ಮುಂದಿದೆ. ಆದರೆ ಪ್ರಸ್ತುತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಭ್ರಷ್ಟಾಚಾರದ ಮಡುವಿನಲ್ಲಿ ಮುಳುಗಿಹೋಗಿರುವ ಪೊಲೀಸ್ ಇಲಾಖೆಯನ್ನು ತಹಬದಿಗೆ ತರುವ ಕನಿಷ್ಠ ತಾಕತ್ತು ನಿಮಗಿಲ್ಲದಂತಾಗಿದೆ. ಅಕ್ಕಪಕ್ಕದ ಅನ್ಯ ರಾಜ್ಯಗಳಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಮಾನ ಹರಾಜಾಗುತ್ತಿದ್ದರೂ ಇಡೀ ಖಾಕಿ ವ್ಯವಸ್ಥೆ ತನ್ನ ಕರ್ತವ್ಯ ಮರೆತು ಮೌನವಾಗಿದೆ. ಇಷ್ಟೆಲ್ಲಾ ಸವಾಲುಗಳು ಕಣ್ಣಮುಂದಿದ್ದರೂ, ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಆರ್ಎಸ್ಎಸ್ ಬಗ್ಗೆ ನಿರಂತರವಾಗಿ ವ್ಯರ್ಥ ಪ್ರಲಾಪ ಮಾಡಿಕೊಳ್ಳುತ್ತಿರುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ನಿಲ್ಲಿಸಿ,” ಎಂದು ಎಚ್ಚರಿಸಿದ್ದಾರೆ.
“ನಿಮ್ಮ ಸಚಿವಾಲಯದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದೇಶಭಕ್ತ ಸಂಘಟನೆಯನ್ನು ಗುರಾಣಿ ಮಾಡಿಕೊಳ್ಳುವ ರಾಜಕಾರಣ ಇನ್ನು ನಡೆಯುವುದಿಲ್ಲ. ನಿಮ್ಮ ಅಪ್ರಬುದ್ಧ ಹೇಳಿಕೆಗಳಿಂದ ರಾಜ್ಯದ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರೇ, ಸುಳ್ಳು ಆಪಾದನೆಗಳನ್ನು ಬಿಟ್ಟು ಗೃಹ ಇಲಾಖೆಯ ಗಂಭೀರ ಕರ್ತವ್ಯದ ಕಡೆಗೆ ಗಮನ ಹರಿಸಿ, ಇಲ್ಲದಿದ್ದರೆ ನಿಮ್ಮ ಈ ಬೇಜವಾಬ್ದಾರಿಯುತ ಆಡಳಿತಕ್ಕೆ ನಾಡಿನ ಜನತೆಯೇ ಬೀದಿಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ತಮ್ಮ ಪ್ರಕಟಣೆಯಲ್ಲಿ ಸವಾಲು ಹಾಕಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.




















