ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜಯದೇವಿ ತಾಯಿ ಲಿಗಾಡೆ: ಗಡಿನಾಡಿನ ಸಿಂಹಿಣಿ, ಕನ್ನಡದ ಕಿಚ್ಚು – ಬಸವ ತತ್ವದ ಜೀವಂತ ದೀಪ, ಸ್ತ್ರೀ ಶಕ್ತಿಯ ಸೇವಾಶಕ್ತಿ.

ಓದಿದ್ದು ಕೇವಲ ನಾಲ್ಕನೇ ತರಗತಿ, ಅದೂ ಮರಾಠಿ ಮಾಧ್ಯಮದಲ್ಲಿ. ಆದರೂ ಸಹ 1974ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಆಗಿ ಸಿಂಹಾಸನ ಏರಿದವರು! ಪದವಿಗಳಿಲ್ಲದೆ ಪಾಂಡಿತ್ಯ ಗಳಿಸಬಹುದು ಎಂದು ಜಗಕ್ಕೆ ತೋರಿದ ಶಿವಶರಣರ ವರಪುತ್ರಿ.
ಜಿ. ಪಿ. ರಾಜರತ್ನಂ ಅವರು ಇವರ ‘ಶ್ರೀ ಸಿದ್ಧರಾಮ ಪುರಾಣ’ವನ್ನು ಮಹಾಕಾವ್ಯ ಎಂದು ಕೊಂಡಾಡಿದ್ದು ಸುಮ್ಮನೇ ಅಲ್ಲ. ಸೊಲ್ಲಾಪುರದಲ್ಲಿ ರಜಾಕಾರರ ಹಾವಳಿ ಮಿತಿಮೀರಿದ್ದ ಕಾಲ. ಕನ್ನಡ ಶಾಲೆಗಳು ಮುಚ್ಚುತ್ತಿದ್ದವು. ಆಗ ತಾಯಿ ಮಾಡಿದ್ದೇನು ಗೊತ್ತೇ? ಹೆಸರಿಗೆ ಉರ್ದು ಶಾಲೆ, ಒಳಗೆ ಕನ್ನಡ ಪಾಠ ಶಾಲೆ! ಹೀಗೆ 25ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ರಹಸ್ಯವಾಗಿ ಸ್ಥಾಪಿಸಿ, ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಿದವರು. ಇದು ಬರೀ ಶಿಕ್ಷಣವಲ್ಲ, ಸಾಂಸ್ಕೃತಿಕ ಸ್ವಾತಂತ್ರ್ಯ ಹೋರಾಟ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.
ಇದಲ್ಲದೆ 1950ರಲ್ಲಿ ಹೈದರಾಬಾದ್ ಪ್ರದೇಶದಲ್ಲಿ ಕನ್ನಡ ಶಾಲೆಗಳು ಶಿಕ್ಷಕರಿಲ್ಲದೆ ಮುಚ್ಚುತ್ತಿವೆ ಎಂದು ತಿಳಿಯಿತು. ಸೊಲ್ಲಾಪುರಕ್ಕೆ ಬಂದವರೇ ತಮ್ಮ ಸ್ವಂತ ಖರ್ಚಿನಲ್ಲಿ ಜಾಹೀರಾತು ನೀಡಿ, 400 ಕನ್ನಡ ಶಿಕ್ಷಕರನ್ನು ನೇಮಿಸಿ, ಕನ್ನಡವನ್ನು ಉಳಿಸಿ – ಬೆಳೆಸಲು ಕಳಿಸಿಕೊಟ್ಟರು! ಎನ್ನುವುದು ಇಂದಿನ ಕನ್ನಡಿಗರು ಎಂದೆಂದಿಗೂ ಮರೆಯಬಾರದು.
ಮನೆಯ ಸಂಪತ್ತನ್ನೆಲ್ಲ ಶಿಕ್ಷಣ ಮತ್ತು ಸಮಾಜ ಸೇವೆಗೆ ಸುರಿದರು. ಅವರ ದೃಷ್ಟಿಯಲ್ಲಿ “ಗಡಿಯ ಶಿಕ್ಷಕರು ಕೇವಲ ಶಿಕ್ಷಕರಲ್ಲ, ಕನ್ನಡವನ್ನು ಕಾಯುವ ಸೈನಿಕರು, ಸ್ವಯಂಸೇವಕರು ಎಂದು ಭಾವಿಸಿ ಹಗಲಿರುವೆನ್ನದೆ ದುಡಿದರು.”
ಅಂತೆಯೇ ಬೆಳಗಾವಿ, ಬೀದರ್, ಸಾಂಗ್ಲಿ, ಕೊಲ್ಲಾಪುರ, ಉಸ್ಮಾನಾಬಾದ್‌ನ ಹಳ್ಳಿಹಳ್ಳಿಗೆ ತೆರಳಿ ಕನ್ನಡ ಜಾಗೃತಿ ಮೂಡಿಸಿದರು. ‘ಕನ್ನಡ ಕೋಟೆ’ ಎಂಬ ಪ್ರಕಾಶನ ಸಂಸ್ಥೆ ಕಟ್ಟಿ ಗಡಿನಾಡಿನಲ್ಲಿ ಸಾಹಿತ್ಯಾಭಿರುಚಿ ಬೆಳೆಸಿದರು. ರಜಾಕರರ ದೌರ್ಜನ್ಯದಲ್ಲಿ ನೊಂದ ನೂರಾರು ನಿರಾಶ್ರಿತರಿಗೆ ಅನ್ನದಾತೆ ಆದರು.
ಆದರೆ ವಿಪರ್ಯಾಸ ನೋಡಿ – ಅವರ ಹುಟ್ಟೂರು ಸೊಲ್ಲಾಪುರ ಕರ್ನಾಟಕದಲ್ಲಿ ವಿಲೀನವಾಗಬೇಕೆಂಬ ಕನಸು ಇಂದಿಗೂ ಕನಸಾಗಿಯೇ ಉಳಿಯಿತು, ಉಳಿದಿದೆ.ಅವರದ್ದು ನಿಜವಾದ ಶಿವಶರಣೆಯರ ಬದುಕು. ಬಸವಣ್ಣನವರ ಕಾಯಕ, ದಾಸೋಹ ತತ್ವಗಳನ್ನು ಅಕ್ಷರಶಃ ಪಾಲಿಸಿದರು. ಬಸವ ಮತ್ತು ಗಾಂಧೀತತ್ವಗಳ ಅನುಸರಣೆಯಾಗಿ ಅಸ್ಪೃಶ್ಯರ ಸೇವೆಯನ್ನು ತಾಯಿಯವರು ಅವರ ಜೀವನದಲ್ಲಿ ಶಾಶ್ವತವಾಗಿ ಮುಡುಪಾಗಿಟ್ಟಿದರು. ತರುವಾಯ ಸೊಲ್ಲಾಪುರ ಮತ್ತು ಬಾರ್ಶಿಗಳಲ್ಲಿದ್ದ ರಿಮ್ಯಾಂಡ್ ಹೋಂ, ಹರಿಜನಸಂಘ, ಗಾಂಧೀ ಪ್ರಾರಂಭಿಸಿ, ಯಾವುದೇ ಊರಿಗೇ ಮೊದಲು ಹೋಗಲಿ ಹರಿಜನ ಕೇರಿಯನ್ನು ಭೇಟಿಯಾಗಿ ಬರುತ್ತಿದ್ದರು. ಅಸ್ಪ್ರಶ್ಯತೆ ನಿವಾರಣೆಗಾಗಿ ‘ಶರಣ ಸಮಾಜ’ವೆಂಬ ಸಂಘವನ್ನು ಸ್ಥಾಪಿಸಿದರು. ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿದರು.
ಅಂತೆಯೇ ಒಬ್ಬ ಹೆಣ್ಣುಮಗಳು, ಒಂದು ಜೀವಮಾನದಲ್ಲಿ ಅದೂ ತನ್ನ ಇತಿಮಿತಿಗಳಲ್ಲಿ ಇಷ್ಟೊಂದು ಬಗೆಯ ಸಾಧನೆಗಳನ್ನು ಸಾಧಿಸಿದ್ದು ಇತಿಹಾಸದಲ್ಲೇ ಅಪರೂಪವೆನ್ನಬಹುದು. ಅವರ ಶ್ರಮಕ್ಕೆ ತಕ್ಕ ಫಲವನ್ನು ಅವರು ಕಾಣಲಿಲ್ಲ. ಯಾವ ಅಧಿಕಾರವನ್ನೂ ಬಯಸಲಿಲ್ಲ. ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯಲಿಲ್ಲ. ನಾಡಿಗಾಗಿ – ನುಡಿಗಾಗಿ – ಮಹಿಳೆಯರಿಗಾಗಿ – ಕಾರ್ಮಿಕರಿಗಾಗಿ – ಅಸ್ಪೃಶ್ಯರಿಗಾಗಿ ಮಾಡಿದ ಅವರ ಸೇವೆ – ಚಿಂತನೆಗಳು ಸ್ಮರಣೀಯವಾಗಿವೆ.
ಆದರೆ ವಿಷಾದವಿದೆ… ಯಾಕೆಂದರೆ
ಇಂತಹ ಅಪ್ರತಿಮ ಕನ್ನಡದ ಕಟ್ಟಾಳು, ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ, ಗಡಿನಾಡಿನ ಸಿಂಹಿಣಿ ಜಯದೇವಿ ತಾಯಿ ಲಿಗಾಡೆಯವರ ಜನ್ಮ ಶತಮಾನೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತಾಗಲೀ, ಕರ್ನಾಟಕ ಸರ್ಕಾರವಾಗಲೀ ಯೋಗ್ಯರೀತಿಯಲ್ಲಿ ಆಚರಿಸದೆ ನಿರ್ಲಕ್ಷಿಸಿದ್ದು ಕ್ಷಮಿಸಲಾಗದ ತಪ್ಪು.
ಪದವಿ, ಪ್ರಶಸ್ತಿ, ಪ್ರಚಾರ ಇಲ್ಲದೆಯೇ ಕನ್ನಡಕ್ಕಾಗಿ ತನು-ಮನ-ಧನ ಅರ್ಪಿಸಿದ ತಾಯಿಯನ್ನು ಮರೆತರೆ, ನಾವು ಕನ್ನಡಿಗರು ಎನಿಸಿಕೊಳ್ಳಲು ನಾಲಾಯಕ್.
“ತನಗಿಂತ ಕಿರಿಯರಿಲ್ಲ, ಶಿವಶರಣರಿಗಿಂತ ಹಿರಿಯರಿಲ್ಲ”_ – ಬಸವಣ್ಣನವರು ಹೇಳಿದಂತೆ ನಡೆದ ಜಯದೇವಿ ತಾಯಿಯವರು ತಮ್ಮನ್ನು ಕಿರಿಯರು ಎಂದುಕೊಂಡರು, ಆದರೆ ಕನ್ನಡದ ಇತಿಹಾಸದಲ್ಲಿ ಅವರು ಹಿರಿಯರ ಸಾಲಿನಲ್ಲಿ ಅಜರಾಮರವಾಗಿದ್ದಾರೆ. ಇದನ್ನು ಕರ್ನಾಟಕ ಸರ್ಕಾರ ಯಾವತ್ತೂ ಮರೆಯಬಾರದು.

  1. ಬಸವತತ್ವದ ಅನುಯಾಯಿ :
    ” ಕಾಯಕವೇ ಕೈಲಾಸ ” ಎಂಬ ಬಸವಣ್ಣನವರ ವಚನವನ್ನು ಬದುಕಿನಲ್ಲಿ ಅಕ್ಷರಶಃ ಪಾಲಿಸಿದ ಶ್ರೇಷ್ಠ ಶರಣೆ. ದಾಸೋಹ ತತ್ವವನ್ನೇ ಉಸಿರಾಗಿಸಿಕೊಂಡು, ನಿಸ್ವಾರ್ಥ ಸೇವೆಯೇ ಸೃಷ್ಟಿಕರ್ತನ ಪೂಜೆ ಎಂದು ಜಗಕ್ಕೆ ತೋರಿದ ಕರ್ಮಯೋಗಿ ಶರಣೆ.
  2. ಕನ್ನಡಪ್ರೇಮದ ಕಿಚ್ಚು:
    ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿ, ಕನ್ನಡವನ್ನು ಉಸಿರಾಗಿಸಿಕೊಂಡ ಅಪ್ಪಟ ಕನ್ನಡತಿ. ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೈಂಕರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡು, ಕನ್ನಡದ ಡಿಂಡಿಮ ಮೊಳಗಿಸಿದ ವೀರವನಿತೆ. ಭಾಷಾ ಗಡಿಗಳನ್ನು ಮೀರಿ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿದರು. ಈಗಿನ ಕಲ್ಯಾಣ ಕರ್ನಾಟಕ ಅನೇಕ ಭಾಗಗಳಲ್ಲಿ ಕನ್ನಡಿಗರು ವಲಸೆಹೊಗಿದ್ದರು. ಅವರೆಲ್ಲರಿಗೆ ಬೆಂಬಲವಾಗಿ ಕನ್ನಡತನವನ್ನು ಅಲ್ಲಿಯೇ ಉಳಿಸಿದರು, ಅಲ್ಲಲ್ಲಿ ಕನ್ನಡ ಶಾಲೆಗಳನ್ನು ಪ್ರಾರಂಭಿಸಿದರು. ಸ್ವಯಂಸೇವಾ ಶಿಕ್ಷಕರನ್ನು ಕಳಿಸಿದರು. ಆಗಿನ ಮುಖ್ಯಮಂತ್ರಿಗಳು ‘ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರೇ ಸಿಗುವುದಿಲ್ಲ’ ಎಂಬ ಕಾರಣ ಮುಂದೊಡಿದಾಗ ತಾಯಿಯವರು ಸ್ವಂತ ಖರ್ಚಿನಿಂದ ನಾಲ್ಕುನೂರು ಜನ ಶಿಕ್ಷಕರನ್ನು ನೇಮಿಸಿದ್ದು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ.
  3. ಸ್ತ್ರೀ ಶಿಕ್ಷಣದ ಹರಿಕಾರರು:
    “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂದು ನಂಬಿದ ದಾರ್ಶನಿಕರು. ಮಹಿಳಾ ಸಬಲೀಕರಣಕ್ಕೆ ಶಿಕ್ಷಣವೇ ಮೂಲಮಂತ್ರ ಎಂದು ಸಾರಿ, ಮಹಾರಾಷ್ಟ್ರ, ಕಲ್ಯಾಣ-ಕರ್ನಾಟಕ ಭಾಗಗಳಲ್ಲಿ ಸಹಸ್ರಾರು ಹೆಣ್ಣುಮಕ್ಕಳಿಗೆ ಅಕ್ಷರ ಭಿಕ್ಷೆ ನೀಡಿದರು. ಅವರಿಂದಾಗಿ ಇಂದು ಲಕ್ಷಾಂತರ ಮಹಿಳೆಯರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ.
  4. ಕರ್ನಾಟಕ ಏಕೀಕರಣದ ಧ್ರುವತಾರೆ :
    ಕನ್ನಡ ನಾಡು ಛಿದ್ರವಾಗಿದ್ದ ಕಾಲದಲ್ಲಿ ಏಕೀಕರಣ ಚಳವಳಿಯ ಮುಂಚೂಣಿಯಲ್ಲಿ ನಿಂತು ಹೋರಾಡಿದ ಅಪ್ರತಿಮ ನಾಯಕಿ. ಕನ್ನಡದ ನೆಲ, ಜಲ, ಭಾಷೆ, ಸಂಸ್ಕೃತಿಯ ರಕ್ಷಣೆಗೆ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟರು. ಇವರ ಹೋರಾಟವಿಲ್ಲದಿದ್ದರೆ ಇಂದಿನ ಕರ್ನಾಟಕದ ನಕ್ಷೆಯೇ ಬೇರೆಯಾಗಿರುತ್ತಿತ್ತು.

ಆದ ಕಾರಣ –
ಕನ್ನಡ ಸರ್ಕಾರಕ್ಕೆ ಮತ್ತು ಸಾಹಿತ್ಯ ಪರಿಷತ್ತಿಗೆ ನಮ್ಮ ಆಗ್ರಹ: ಜಯದೇವಿ ತಾಯಿ ಲಿಗಾಡೆ: ನಾಲ್ಕನೇ ತರಗತಿ ಓದಿ ಕನ್ನಡದ ಕುಲಪತಿಯಾದ ತಾಯಿ… ಆದರೂ ಶತಮಾನೋತ್ಸವದಲ್ಲೂ ಮರೆತ ಕರ್ನಾಟಕ – ಇದು ವಿಷಾದನೀಯ.
ಈ ನಿಟ್ಟಿನಲ್ಲಿ ಜಯದೇವ ತಾಯಿ ಲಿಗಾಡೆಯವರಿಗೆ
ಗೌರವ ಸಲ್ಲಿಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ.
ಅದಕ್ಕಾಗಿ ಕೆಲವೊಂದಿಷ್ಟು ವಿಚಾರಗಳು ತಮ್ಮ ಮುಂದೆ ಹಂಚಿಕೊಂಡಿರುವೆ ಈ ದಿಸೆಯಲ್ಲಿ ಸರ್ಕಾರ, ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಬೇಗನೆ ಜಾರಿಗೆ ತರಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ.

  1. ಜಯದೇವಿ ತಾಯಿ ಲಿಗಾಡೆಯವರ ಹೆಸರಿನಲ್ಲಿ ಗಡಿನಾಡಿನಲ್ಲಿ ಕನ್ನಡ ಭವನ ಸ್ಥಾಪಿಸಿ.
  2. ಇವರ ಸಮಗ್ರ ಸಾಹಿತ್ಯವನ್ನು ರಾಷ್ಟ್ರೀಕರಣ ಮಾಡಿ ಶಾಲಾ ಪಠ್ಯದಲ್ಲಿ ಅಳವಡಿಸಿ.
  3. ಸೊಲ್ಲಾಪುರದಲ್ಲಿ ಇವರ ಸ್ಮಾರಕ ನಿರ್ಮಿಸಿ.
  4. ಪ್ರತಿ ವರ್ಷ “ಜಯದೇವಿ ತಾಯಿ ಲಿಗಾಡೆ ಗಡಿನಾಡ ಕನ್ನಡ ಸೇವಾ ಪ್ರಶಸ್ತಿ” ನೀಡಿ.
    ಲಿಗಾಡೆತಾಯಿ ರವರ ಕನ್ನಡ ಭಾಷೆ ಮೇಲಿದ್ದ ಅಭಿಮಾನದ ಋಣ ತೀರಿಸಲು ನಮಗೆಲ್ಲರಿಗೂ ಇದು ಸೂಕ್ತ ಮತ್ತು ಸಕಾಲ.

ಕೊನೆಯದಾಗಿ, ಅವರ ಹೋರಾಟ, ಸಾಧನೆ ಮತ್ತು ಸೇವಾಮಯ ಬದುಕು ಇಂದಿಗೂ ಸಹಸ್ರಾರು ಹೆಣ್ಣುಮಕ್ಕಳಿಗೆ ಸ್ಪೂರ್ತಿಯ ಜ್ಯೋತಿಯಾಗಿ ಬೆಳಗುತ್ತಿದೆ. ಕನ್ನಡ ನೆಲ, ಜಲ ಮತ್ತು ಭಾಷೆಗಾಗಿ ಶ್ರಮಿಸಿದ ಇಂತಹ ಮಹಾನ್ ಚೇತನದ ಭಾಷಾ ಪ್ರೇಮ, ಸ್ತ್ರೀ ಶಿಕ್ಷಣ, ಬಸವ ತತ್ವದ ಕುರಿತಾದ ಅವರ ಸಂದೇಶ ಇಂದಿನ ಪೀಳಿಗೆಗೂ ದಾರಿದೀಪವಾಗಿದೆ.
“ಹೆಣ್ಣು ಅಬಲೆ ಅಲ್ಲ, ಸಬಲೆ”ಎಂದು ಸಾರಿದ ತಾಯಿಗೆ,
“ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎಂದು ಬದುಕಿದ ಶರಣೆಗೆ, ಕೋಟಿ ಕೋಟಿ ಕೃತಜ್ಞತೆಗಳು. ನಿಮ್ಮ ಕನಸಿನ ಅಖಂಡ ಕರ್ನಾಟಕ ಕಟ್ಟುವುದು ನಮ್ಮ ಹೊಣೆ.

ಗೌರವ ನಮನಗಳು: ಬಸವತತ್ವದ ದಿವ್ಯಚೇತನದಲ್ಲಿ ಅರಳಿದ ಶರಣಶ್ರೇಷ್ಠೆ ಜಯದೇವಿ ತಾಯಿ ಲಿಗಾಡೆಯವರ ಜನ್ಮದಿನದಂದು ಗೌರವಪೂರ್ವಕ ನಮನಗಳು ಸಲ್ಲಿಸುತ್ತೇವೆ.ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕನ್ನಡದ ಪರ ಅಚಲ ನಿಲುವು ತಾಳಿ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಅಸ್ಮಿತೆಯ ಉಳಿವು-ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದವರು. ಅವರ ಹೋರಾಟ, ಸಾಧನೆ ಮತ್ತು ಸೇವಾಮಯ ಬದುಕು ಇಂದಿಗೂ ಸಹಸ್ರಾರು ಹೆಣ್ಣುಮಕ್ಕಳಿಗೆ ಸ್ಪೂರ್ತಿಯ ಜ್ಯೋತಿಯಾಗಿ ಬೆಳಗುತ್ತಿದೆ.

  • ಸಂಗಮೇಶ ಎನ್ ಜವಾದಿ
    ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು,ಬೀದರ್ ಜಿಲ್ಲೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!