ಗದಗ: ರೋಣ ತಾಲೂಕಿನ ಐತಿಹಾಸಿಕ ಜಕ್ಕಲಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ (ಗದಗ) ಇವರ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಿನ ಹಿರಿಯ ಚೇತನ, ಕರ್ನಾಟಕ ಏಕೀಕರಣದ ಮಹಾಶಿಲ್ಪಿ ದಿ|| ಶ್ರೀ ಅಂದಾನಪ್ಪ ದೊಡ್ಡಮೇಟಿಯವರ ನೂತನ ಸ್ಮಾರಕ ಭವನ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭವ್ಯ ಭೂಮಿ ಪೂಜಾ ಸಮಾರಂಭವು ಜುಲೈ 5 ರಂದು ಅದ್ಧೂರಿಯಾಗಿ ನೆರವೇರಿತು.
ಒಟ್ಟು 300 ಲಕ್ಷ ರೂ. (3 ಕೋಟಿ ರೂ.)ವೆಚ್ಚದ ಈ ಮಹತ್ವದ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ರೋಣ ಮತಕ್ಷೇತ್ರದ ಶಾಸಕರು ಹಾಗೂ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಜಿ.ಎಸ್. ಪಾಟೀಲ ಅವರು ನಾವು ಇಂದು ಉಸಿರಾಡುತ್ತಿರುವ ಮುಕ್ತ ಗಾಳಿ ನಾವು ಮಾತನಾಡುತ್ತಿರುವ ಕನ್ನಡ ಭಾಷೆ ಹಾಗೂ ನಮ್ಮ ಈ ಅಖಂಡ ಕರ್ನಾಟಕ ಯಾರೋ ತಟ್ಟೆಯಲ್ಲಿ ತಂದುಕೊಟ್ಟ ಭಿಕ್ಷೆಯಲ್ಲ. ಇದು ದಿ|| ಅಂದಾನಪ್ಪ ದೊಡ್ಡಮೇಟಿಯವರಂತಹ ಮಹಾನ್ ನಾಯಕರ ನಿರಂತರ ಹೋರಾಟ, ರಕ್ತ ಮತ್ತು ಬೆವರಿನ ಮಹಾ ಪ್ರಸಾದವಾಗಿದೆ ಎಂದು ಸ್ಮರಿಸಿದರು.
11938 ರಷ್ಟು ಹಿಂದೆಯೇ ಮುಂಬೈನ ಭವ್ಯ ಶಾಸನಸಭೆಯಲ್ಲಿ ಅಂದಿನ ಇಂಗ್ಲಿಷ್ ಮತ್ತು ಮರಾಠಿ ನಾಯಕರ ಎದುರು ಮೊಟ್ಟಮೊದಲ ಬಾರಿಗೆ ಕೆಚ್ಚೆದೆಯಿಂದ ಕನ್ನಡದಲ್ಲೇ ಭಾಷಣ ಮಾಡಿ ಸಿಂಹ ಗರ್ಜನೆ ಮಾಡಿದ ಧೀರ ಅಂದಾನಪ್ಪ ದೊಡ್ಡಮೇಟಿಯವರು. ಇಂತಹ ಮಹನೀಯರ ಇತಿಹಾಸ ಕೇವಲ ಪುಸ್ತಕದ ಪುಟಗಳಿಗೆ ಸೀಮಿತವಾಗಬಾರದು. ಅದಕ್ಕಾಗಿಯೇ ಅವರ ಜನ್ಮಭೂಮಿಯಾದ ಜಕ್ಕಲಿಯಲ್ಲಿ ಈ ಸ್ಮಾರಕ ಭವನವನ್ನು ಕೇವಲ ಇಟ್ಟಿಗೆ-ಸಿಮೆಂಟ್‌ನ ಕಟ್ಟಡವನ್ನಾಗಿ ಮಾಡದೆ, ಮುಂದಿನ ನೂರಾರು ವರ್ಷಗಳ ಕಾಲ ಯುವ ಪೀಳಿಗೆಗೆ ದೇಶಭಕ್ತಿ, ಸಾಂಸ್ಕೃತಿಕ ಪರಂಪರೆ ಮತ್ತು ಕನ್ನಡದ ಸ್ವಾಭಿಮಾನವನ್ನು ಕಲಿಸುವ ಜ್ಞಾನ ದೇಗುಲವನ್ನಾಗಿ ರೂಪಿಸುವುದು ನಮ್ಮ ಸಂಕಲ್ಪವಾಗಿದೆ. ಈ ಸ್ಮಾರಕಕ್ಕಾಗಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಲ್ಲಿ 10 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಡಲಾಗಿದ್ದು ಪ್ರಥಮ ಹಂತವಾಗಿ 3 ಕೋಟಿ ರೂಪಾಯಿಗಳು ಈಗಾಗಲೇ ಬಿಡುಗಡೆಯಾಗಿವೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸ್ಮಾರಕ ಭವನಕ್ಕಾಗಿ ಜಮೀನು ಒದಗಿಸಿದ ದೊಡ್ಡಮೇಟಿ ಕುಟುಂಬದ ತ್ಯಾಗವನ್ನು ಅವರು ನೆನೆದರು.
ಸ್ಮಾರಕ ಭವನದ ಜೊತೆಗೆ ಜಕ್ಕಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರ ದಶಕಗಳ ಬೇಡಿಕೆಗಳನ್ನು ಈಡೇರಿಸುವ ವಿವಿಧ ಕಾಮಗಾರಿಗಳ ವಿವರಗಳನ್ನು ಇದೇ ಸಂದರ್ಭದಲ್ಲಿ ಹಂಚಿಕೊಳ್ಳಲಾಯಿತು.
ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಅಗಸ್ತರ ಹಳ್ಳಕ್ಕೆ ನಿರ್ಮಾಣವಾಗಲಿರುವ ನೂತನ ಸೇತುವೆ ಕಾಮಗಾರಿಗೆ 1 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ.
ಜಕ್ಕಲಿ ಹಾಗೂ ಮಾರಣಬಸರಿ ಗ್ರಾಮಗಳ ರಸ್ತೆಗಳ ಮತ್ತು ಡಾಂಬರೀಕರಣ ಕಾರ್ಯಕ್ಕಾಗಿ 1 ಕೋಟಿ 60 ಲಕ್ಷ ರೂಪಾಯಿಗಳ ವೆಚ್ಚದ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು ಕಾಮಗಾರಿ ತಕ್ಷಣವೇ ಆರಂಭವಾಗಲಿದೆ.
ಜಕ್ಕಲಿ ಗ್ರಾಮಕ್ಕೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಹೊಸ ವೆಟರ್ನರಿ ಆಸ್ಪತ್ರೆಯು ಸಹ ಮಂಜೂರಾಗಿದ್ದು, ಶೀಘ್ರದಲ್ಲೇ ರೈತರಿಗೆ ಲಭ್ಯವಾಗಲಿದೆ.
ಅಭಿವೃದ್ಧಿ ಕೆಲಸಗಳು ನಿರಂತರವಾಗಿ ಸಾಗಬೇಕಾದರೆ ಸಾರ್ವಜನಿಕರ ಸಹಕಾರ ಮುಖ್ಯ. ಜಕ್ಕಲಿ ಗ್ರಾಮವು ಜಾಣ ಜಕ್ಕಲಿ ಎಂದು ಹೆಸರಾಗಿದ್ದು, ಗ್ರಾಮದ ಹಿತಕ್ಕಾಗಿ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿಲ್ಲದೆ ಸಾರ್ವಜನಿಕರು ಒಗ್ಗಟ್ಟಿನಿಂದ ಕೈಜೋಡಿಸಬೇಕು ಎಂದು ಶಾಸಕರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅತಿಥಿ ಮಾತುಗಳನ್ನಾಡಿದ ದಿ|| ಅಂದಾನಪ್ಪ ದೊಡ್ಡಮೇಟಿಯವರ ಮೊಮ್ಮಗ ಶ್ರೀ ರವೀಂದ್ರನಾಥ್ ದೊಡ್ಡಮೇಟಿ ಅವರು ಮಾತನಾಡಿ ಇಂದು ಜಕ್ಕಲಿ ಗ್ರಾಮದ ಇತಿಹಾಸದಲ್ಲಿ ಒಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ನಮ್ಮ ಅಜ್ಜ ಅಂದಾನಪ್ಪ ದೊಡ್ಡಮೇಟಿಯವರು ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಏಕೀಕರಣದ ಹೋರಾಟದಲ್ಲಿದ್ದಾಗ ಶಾಸಕ ಜಿ.ಎಸ್. ಪಾಟೀಲ ಅವರ ತಂದೆಯವರಾದ ಸಂಗನಗೌಡ ಪಾಟೀಲರು ದೊಡ್ಡಮೇಟಿಯವರ ಹಿಂದೆ ಭೀಮಬಲವಾಗಿ ನಿಂತಿದ್ದರು. ಅಸೆಂಬ್ಲಿಯಲ್ಲಿ ಕರ್ನಾಟಕ ನಾಮಕರಣ ಹಾಗೂ ಏಕೀಕರಣದ ವಿಚಾರವಾಗಿ ತೀವ್ರ ಚರ್ಚೆಗಳು ವಾಗ್ದಾಳಿಗಳು ನಡೆದು ಬೇಸರವಾದಾಗ ಅಜ್ಜ ದೊಡ್ಡಮೇಟಿಯವರು ಸಂಗನಗೌಡರ ಜೊತೆ ಸಮಾಲೋಚನೆ ನಡೆಸುತ್ತಿದ್ದರು. ಅಂದು ಸಂಗನಗೌಡರು ನೀಡಿದ ಧೈರ್ಯ ಮತ್ತು ಕೆಚ್ಚೆದೆಯ ಬೆಂಬಲದಿಂದಲೇ ಅಜ್ಜ ಅಸೆಂಬ್ಲಿಯಲ್ಲಿ ಎದುರಾಳಿಗಳಿಗೆ ಪ್ರತಿರೋಧ ಒಡ್ಡಲು ಸಾಧ್ಯವಾಗಿತ್ತು ಎಂದು ಹಳೆಯ ಇತಿಹಾಸವನ್ನು ಸ್ಮರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಮುಖಂಡರಾದ ಶ್ರೀ ಎಂ.ಎಸ್. ದಡೆಸುರುಮಠ ಅವರು ದೊಡ್ಡಮೇಟಿಯವರ ಸ್ಮಾರಕ ಭವನ ನಿರ್ಮಾಣವು ಇಡೀ ತಾಲೂಕಿನ ಜನತೆಯ ಬಹುದಿನಗಳ ಕನಸಾಗಿತ್ತು. ವಿರೋಧ ಪಕ್ಷದವರು ಟೀಕೆಗಳನ್ನು ಮಾಡುತ್ತಿದ್ದರೂ ಅಭಿವೃದ್ಧಿ ಕೆಲಸಗಳು ಮಾತ್ರ ನಿರಂತರವಾಗಿ ಸಾಗುತ್ತಿವೆ ಎಂಬುದಕ್ಕೆ ಇಂದು ಚಾಲನೆ ಪಡೆದುಕೊಂಡಿರುವ ಕೋಟ್ಯಂತರ ರೂಪಾಯಿಗಳ ಯೋಜನೆಗಳೇ ಸಾಕ್ಷಿ ಎಂದರು.
ಇದೇ ಅದ್ಭುತ ಸಂದರ್ಭದಲ್ಲಿ ಜಕ್ಕಲಿ ಗ್ರಾಮದ ಹಾಗೂ ಸುತ್ತಮುತ್ತಲಿನ ಪರಿಸರದ ಕೀರ್ತಿಯನ್ನು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಇಬ್ಬರು ಉದಯೋನ್ಮುಖ ಸಾಧಕಿಯರನ್ನು ವೇದಿಕೆಯ ಮೇಲೆ ಶಾಲು ಹೊದಿಸಿ ಹಾರ ಹಾಕಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಕುಮಾರಿ ಸೃಷ್ಠಿ ಉಮೇಶ್ ಮೇಟಿ (ಪರ್ವತಾರೋಹಣ ಸಾಧಕಿ) ಉತ್ತರಾಖಂಡದಲ್ಲಿ ನಡೆದ ಕಠಿಣ ಪರ್ವತಾರೋಹಣ ಶಿಬಿರದಲ್ಲಿ ಪಾಲ್ಗೊಂಡು, ಸಮುದ್ರ ಮಟ್ಟದಿಂದ ಬರೋಬ್ಬರಿ 15,500 ಅಡಿ ಎತ್ತರದ ಸವಾಲಿನ ‘ಹುರ್ರಾ ಟಾಪ್ ಶಿಖರವನ್ನು ಧೈರ್ಯದಿಂದ ಏರಿ ಅಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಅಪೂರ್ವ ಸಾಹಸ ಮೆರೆದಿದ್ದಾರೆ. ಪರ್ವತಾರೋಹಣ ಕ್ಷೇತ್ರಕ್ಕೆ ಬೇಕಾದ ದೈಹಿಕ ಸಾಮರ್ಥ್ಯ ಮಾನಸಿಕ ದೃಢತೆ, ಶಿಸ್ತು ಮತ್ತು ನಿರಂತರ ಪರಿಶ್ರಮವನ್ನು ಸಾಬೀತುಪಡಿಸಿದ ಸೃಷ್ಠಿ ಅವರು ತಾವು ವಿದ್ಯಾಭ್ಯಾಸ ಮಾಡುತ್ತಿರುವ ಜೆ.ಟಿ. ಕಾಲೇಜು ಹಾಗೂ ಕೆ.ಎಲ್.ಇ. ಸಂಸ್ಥೆಗೆ ಅಪಾರ ಕೀರ್ತಿ ತಂದಿದ್ದಾರೆ. ಜೀವನದಲ್ಲಿ ಗುರಿ ಸಾಧಿಸಲು ದೃಢ ಸಂಕಲ್ಪವಿದ್ದರೆ ಯಾವುದೇ ಎತ್ತರವನ್ನು ಮುಟ್ಟಬಹುದು ಎಂಬುದಕ್ಕೆ ಅವರ ಸಾಧನೆ ಯುವ ಪೀಳಿಗೆಗೆ ಮಾದರಿಯಾಗಿದೆ.
ಕುಮಾರಿ ಪ್ರೀತಿ ಬುಳ್ಳಾ (ಅಂತರರಾಷ್ಟ್ರೀಯ ಅಟ್ಯಾ-ಪಟ್ಯಾ ಕ್ರೀಡಾಪಟು) ಭಾರತ ತಂಡವನ್ನು ಪ್ರತಿನಿಧಿಸಿ, ದಕ್ಷಿಣ ಏಷ್ಯಾ ಅಟ್ಯಾ-ಪಟ್ಯಾ ಕಣಕ್ಕೆ ಆಯ್ಕೆಯಾಗುವ ಮೂಲಕ ಜಕ್ಕಲಿ ಗ್ರಾಮದ ಗ್ರಾಮೀಣ ಪ್ರತಿಭೆಯ ಶಕ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದ ಹೆಮ್ಮೆಯ ಕ್ರೀಡಾಪಟು ಕುಮಾರಿ ಪ್ರೀತಿ ಬುಳ್ಳಾ ಅವರನ್ನು ಸಹ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಈ ಐತಿಹಾಸಿಕ ಸಮಾರಂಭದ ವೇದಿಕೆಯ ಮೇಲೆ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ. ಪ್ರಮುಖ ಮುಖಂಡರಾದ ಮಿಥುನ್ ಜಿ. ಪಾಟೀಲ, ಮಿಥುನ್ ಜಿ. ಪಾಟೀಲ, ಎಂ. ಎಂ. ಮೇಟಿ, ವೀರಣ್ಣ ಶೆಟ್ಟರ್, ಪ್ರಭು ಮೇಟಿ, ಅಭಿಷೇಕ ನವಲಗುಂದ, ಚನ್ನಬಸಪ್ಪ ದೊಡ್ಡಮೇಟಿ, ಮೈಲಾರಪ್ಪ ಚಳ್ಳಮರದ, ಹಣಮಂತ ಅಬ್ಬಿಗೇರಿ ಉಪಸ್ಥಿತರಿದ್ದರು.
ಅಲ್ಲದೆ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಗುರುಪಾಡಗೌಡ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಪ್ರಮುಖ ಸ್ಥಳೀಯ ಜನಪ್ರತಿನಿಧಿಗಳು, ಅಪಾರ ಸಂಖ್ಯೆಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ರವೀಂದ್ರ ಮುಗಳಿ ನೆರವೇರಿಸಿಕೊಟ್ಟರು.
ವರದಿ ಶರಣಪ್ಪಗೌಡ ಸಕ್ಕರಗೌಡರ




















