ಮಧುಗಿರಿ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ಕುಡಿಯುವ ನೀರಿನ ವ್ಯವಸ್ಥೆ ಕುರಿತ ಮಹತ್ವದ ಟಾಸ್ಕ್ ಫೋರ್ಸ್ ಸಭೆ ಜರುಗಿತು. ಸಭೆಯಲ್ಲಿ ಭಾಗವಹಿಸಿ, ತಾಲೂಕಿನ ಕುಡಿಯುವ ನೀರಿನ ಸ್ಥಿತಿಗತಿ ಹಾಗೂ ಬರ ಪರಿಸ್ಥಿತಿ ಎದುರಿಸುವ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಹಲವು ಮಹತ್ವದ ಸಲಹೆ-ಸೂಚನೆಗಳನ್ನು ನೀಡಲಾಯಿತು.
ಸಭೆಯ ಪ್ರಮುಖ ನಿರ್ಧಾರಗಳು ಮತ್ತು ಕಟ್ಟುನಿಟ್ಟಿನ ಸೂಚನೆಗಳು :
ನಿರಂತರ ನೀರು ಪೂರೈಕೆ: ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸರಬರಾಜಿನ ಕುರಿತು ಸಮಗ್ರ ಮಾಹಿತಿ ಪಡೆದು, ತೊಂದರೆ ಇರುವ ಪ್ರದೇಶಗಳಲ್ಲಿ ತಕ್ಷಣವೇ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ವಾಟರ್‌ಮನ್‌ಗಳು ಸಮಯಕ್ಕೆ ಸರಿಯಾಗಿ ನೀರು ಬಿಡುವಂತೆ ಕಟ್ಟುನಿಟ್ಟಿನ ಆದೇಶ ನೀಡಲಾಯಿತು.
ಬರಗಾಲದ ಮುನ್ನೆಚ್ಚರಿಕೆ:
ಮುಂಬರುವ ಬರಗಾಲದ ಪರಿಸ್ಥಿತಿಯನ್ನು ಎದುರಿಸಲು ಮುನ್ನವೇ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ವಹಿಸದೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕೆಂದು ನಿರ್ದೇಶಿಸಲಾಯಿತು.
ಸ್ವಚ್ಛತೆ ಮತ್ತು ಬೋರ್‌ವೆಲ್ ನಿರ್ವಹಣೆ:
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋರ್‌ವೆಲ್‌ಗಳ ಸುತ್ತಮುತ್ತ ಗಿಡ-ಗಂಟೆಗಳು ಬೆಳೆಯದಂತೆ ಸ್ವಚ್ಛತೆ ಕಾಪಾಡುವುದು ಹಾಗೂ ಬೋರ್‌ವೆಲ್‌ಗಳಿಗೆ ತುಕ್ಕು ಹಿಡಿಯದಂತೆ ಕಡ್ಡಾಯವಾಗಿ ಬಣ್ಣ ಬಳಿದು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.
ರೈತರ ಹಿತರಕ್ಷಣೆ ಮತ್ತು ಗೋಶಾಲೆ:
ತಾಲ್ಲೂಕಿನಲ್ಲಿ ಅಗತ್ಯವಿದ್ದಲ್ಲಿ ತಕ್ಷಣವೇ ಗೋಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಮೇವಿನ ಬೀಜಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಹಾಗೂ ಆದಷ್ಟು ಬೇಗ ಮೇವಿನ ಬೀಜಗಳನ್ನು ವಿತರಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಗಡುವು ನೀಡಲಾಯಿತು.
ಅಂತರ್ಜಲ ವೃದ್ಧಿ:
ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯವಿರುವ ಸೂಕ್ತ ಸ್ಥಳಗಳನ್ನು ಗುರುತಿಸಿ ಚೆಕ್‌ಡ್ಯಾಂಗಳನ್ನು ನಿರ್ಮಿಸುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಅಗತ್ಯ ಸಲಹೆಗಳನ್ನು ನೀಡಲಾಯಿತು.
ಉನ್ನತ ಅಧಿಕಾರಿಗಳ ಉಪಸ್ಥಿತಿ :
ಈ ಮಹತ್ವದ ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್, ಉಪವಿಭಾಗಾಧಿಕಾರಿಗಳಾದ ಗೊಟೂರು ಶಿವಪ್ಪ, ತಹಸೀಲ್ದಾರ್ ನಂದಿನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (ಇ.ಓ.) ಉತ್ತಮ್, ಎ.ಇ.ಇ. ಕಾಂತರಾಜು, ಎ.ಡಿ. ಧನಂಜಯ್, ಡಿ.ವೈ.ಎಸ್.ಪಿ. ಮಂಜುನಾಥ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಉಪಸ್ಥಿತರಿದ್ದರು.
ವರದಿ:ರಂಗರಾಜು ಎಂ ಗರಣಿ




















