ಗಂಗೆಯುಟ್ಟ ಶುಭ್ರ ಶ್ವೇತವಸ್ತ್ರ ಎಲ್ಲೆಡೆ
ಬೆಳ್ಳಿ ಮೋಡವಾಗಿ
ಗಗನ ವಿಹಾರಿ ಗಂಗೆಯ ಕಾಲ್ಗೆಜ್ಜೆಯ
ಛನ್ ಛನ್ ನಿನಾದವಾಗಿ
ಧವಲಗಿರಿಗಳ ಮೇಲೆ ಕಪ್ಪುಕೇಶರಾಶಿ
ಕಾರ್ಮೋಡಗಳಾಗಿ
ಸೂರ್ಯನ ಕಣ್ಣಂಚಿನ ಕೋಲ್ಮಿಂಚಾಗಿ
ಮಳೆಗರೆವೆ ಭುವಿಗಾಗಿ||
ಬೆಳ್ಳಿ ಮೋಡವೇ ಬಾನಿನ ಬೆಳ್ಳಿಯ
ಕನಸು ನೀನು
ಭುವಿಯ ಬಾಯಾರಿಕೆಗೆ ಭರವಸೆಯ
ನನಸು ನೀನು
ಬಿಸಿಲ ಬೇಗೆಯಲ್ಲಿ ಬಳಲಿದ ಜೀವಿಗೆ
ತಂಪಿನ ತಾಯಿ ನೀನು
ಮೇಘಶ್ಯಾಮ ಮಾಲೆಯಾಗಿ ಭುವಿಗೆ
ವೃಷ್ಟಿಗರೆವೆ ನೀನು||
ಗಾಳಿಯ ಗೆಳೆಯನಾಗಿ ಗಗನದಲಿ
ತೇಲುತ್ತ ಓಡುವೆ
ಗಿರಿ ಶಿಖರ ಬೆಟ್ಟಗಳಿಗೆ ಗಂಧರ್ವಗೀತೆ
ಹಾಡುತ ಸ್ಪರ್ಶಿಸುವೆ
ಮಳೆಯ ಮುತ್ತುಗಳನ್ನು ಮಡಿಲೊಳಗೆ
ಹೊತ್ತು ಹಸಿರಿಗುಸಿರಾಗುವೆ
ಮಣ್ಣಿನ ಮಡದಿಗೆ ಮಂಗಳಸ್ನಾನದ
ಮಜ್ಜನಗೈಯ್ಯುವೆ||
ರೈತನ ಕಣ್ಣಲಿ ಹೊಸ ಕನಸು ಅರಳಿಸಿ
ಭವಿಷ್ಯದ ಬೆಳಕಾಗುವೆ
ಸಂಜೆಯ ಸಿಂಧೂರದ ಬಣ್ಣವನು
ಧರಿಸಿ ಮುಗುಳ್ನಗುವೆ
ವಸುಂಧರೆಗೆ ನಾನಾ ಬಣ್ಣಗಳನೆರಚಿ
ಸಂತೋಷಪಡುವೆ
ಸೂರ್ಯನೊಂದಿಗೆ ಕತ್ತಲಲಿ ಕರಗಿ
ಮರೆಯಾಗಿ ಹೋಗುವೆ||
ಓಡುವ ಕಾರ್ಮೋಡಗಳೆ ಆಷಾಢದ
ವಿರಹ ಗೀತೆ ಕೇಳುವಿರಾ
ದೂರದೂರಲಿರುವ ನನ್ನ ಇನಿಯನಿಗೆ
ಪ್ರೇಮದ ಓಲೆ ತಲುಪಿಸುವಿರಾ
ನರ್ತಿಸುವ ನವಿಲುಗಳೆ ಕೋಗಿಲೆಗಳೆ
ಮೇಘರಾಜನಿಗೆ ಹೇಳುವಿರಾ
ಸಂಪಿಗೆ ಮಲ್ಲಿಗೆ ಹೂವುಗಳೆ ನಿಮ್ಮ
ಪರಿಮಳ ವೃಷ್ಟಿ ಸುರಿಸುವಿರಾ||
- ಅನ್ನಪೂರ್ಣ ಸು. ಸಕ್ರೋಜಿ, ಪುಣೆ



















