ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಭೇಟಿ
ಸಿರುಗುಪ್ಪ: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ 2ನೇ ವಾರ್ಡ್ನ ಪೌರಕಾರ್ಮಿಕರ ವಸತಿ ನಿವೇಶನಗಳಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಕುಟುಂಬಗಳ ಸದಸ್ಯರು, ಗುಡಿಸಲುಗಳನ್ನು ನೆಲಸಮಗೊಳಿಸಿದ ಸ್ಥಳದಲ್ಲೇ ಕಳೆದ ನಾಲ್ಕು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಮೂರು ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಟ್ಟಣ ಪಂಚಾಯಿತಿ ನೂತನ ಕಟ್ಟಡಕ್ಕೆ ಆ.16ರಂದು ಭೂಮಿಪೂಜೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ, ಸ್ಥಳದಲ್ಲಿದ್ದ 15 ಕೂಲಿ ಕಾರ್ಮಿಕ ಕುಟುಂಬಗಳ ಗುಡಿಸಲುಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ತೆರವು ಕಾರ್ಯಾಚರಣೆಗೂ ಮುನ್ನ ಅಥವಾ ನಂತರ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಧರಣಿ ನಿರತ ಸ್ಥಳಕ್ಕೆ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು. ಬಳಿಕ ಮಾತನಾಡಿದ ಅವರು, “ ಅಧಿಕಾರಿಗಳು ಮತ್ತು ಶಾಸಕರು ಗುಡಿಸಲುಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳನ್ನು ಬೀದಿಗೆ ತಳ್ಳಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಮನೆಗಳನ್ನು ತೆರವುಗೊಳಿಸಿರುವುದು ದುರಂತ ” ಎಂದು ಆರೋಪಿಸಿದರು.
“ಇಲ್ಲಿ ಪೌರಕಾರ್ಮಿಕರು, ಹಮಾಲಿಗಳು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ತರಾತುರಿಯಲ್ಲಿ ಗುಡಿಸಲುಗಳನ್ನು ನೆಲಸಮಗೊಳಿಸಿರುವುದರಿಂದ ವಯೋವೃದ್ಧರು, ಮಹಿಳೆಯರು ಹಾಗೂ ಚಿಕ್ಕ ಮಕ್ಕಳು ಚಳಿ, ಮಳೆಯಲ್ಲೇ ದಿನ ಕಳೆಯುವಂತಾಗಿದೆ” ಎಂದು ಅವರು ಹೇಳಿದರು.
“ಸರ್ಕಾರ ಮತ್ತು ಅಧಿಕಾರಿಗಳು ಸಂತ್ರಸ್ತರಿಗೆ ಸೂಕ್ತ ನಿವೇಶನ ಹಾಗೂ ಪರಿಹಾರ ಕಲ್ಪಿಸುವವರೆಗೆ ಬಿಜೆಪಿ ನೊಂದವರ ಪರವಾಗಿ ನ್ಯಾಯಕ್ಕಾಗಿ ಹೋರಾಟ ನಡೆಸಲಿದೆ” ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ. ಎಸ್. ಸಿದ್ದಪ್ಪ ಹೇಳಿದರು.
“ಗುಡಿಸಲು ತೆರವುಗೊಳಿಸಿದ ದಿನದಿಂದ ಕೂಲಿ ಕೆಲಸಕ್ಕೆ ಹೋಗಿಲ್ಲ. ಕುಡಿಯಲು ನೀರಿಲ್ಲ, ಊಟ-ತಿಂಡಿಗೂ ವ್ಯವಸ್ಥೆಯಿಲ್ಲ. ಮಕ್ಕಳನ್ನು ಕಟ್ಟಿಕೊಂಡು ಉಪವಾಸ ಇರುವಂತಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ಕಲ್ಪಿಸುವವರೆಗೆ ಇಲ್ಲಿಂದ ಕದಲುವುದಿಲ್ಲ” ಎಂದು ಸಂತ್ರಸ್ತರಾದ ಮಲ್ಲಮ್ಮ, ಶಾಂತಮ್ಮ ಹಾಗೂ ಗುರುಪಾದಿ ಕಣ್ಣೀರಿಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಕೊಮಾರೆಪ್ಪ, ರಾಘವೇಂದ್ರ, ಅಫ್ಜಲ್ ಸಾಬ್, ಗುರುಸಿದ್ದಪ್ಪ ಹಾಗೂ ಖಾಜಾ ಹುಸೇನ್ ಉಪಸ್ಥಿತರಿದ್ದರು.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ



















