ನವ ವಸಂತಕ್ಕೆ ಕಾಲಿಟ್ಟ 10 ಜೋಡಿ ವಧು-ವರರು
ಬಳ್ಳಾರಿ / ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾಮದಲ್ಲಿರುವ ಸಹಸ್ರಾರು ಭಕ್ತರ ಆರಾಧ್ಯ ದೈವ ಶ್ರೀ ಅಂಬಾದೇವಿ, ಶ್ರೀ ನಾಗಲಿಂಪ್ಪ ತಾತ ಸುಕ್ಷೇತ್ರ ಧರ್ಮಮಠದಲ್ಲಿ ದೇವಸ್ಥಾನದ ಪ್ರಥಮ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ 10 ಜೋಡಿ ನವ ವಧು-ವರರು ಹೊಸ ಜೀವನಕ್ಕೆ ಕಾಲಿಟ್ಟರು.
ಇಲ್ಲಿನ ನಾಗಲಿಂಗಪ್ಪ ತಾತ ಮಠದ ಶ್ರೀ ಕುಮಾರ ತಾತನವರ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹಗಳು ಜರುಗಿದವು. ನಂತರ ವೀರಶೈವ ಲಿಂಗಾಯತ ಮಹಾ ವೇದಿಕೆ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ಮೊದಲಿಗೆ ನಾಗಲಿಂಗಪ್ಪ ತಾತ ಗುಡ್ಡದಲ್ಲಿ ವಾಸವಾಗಿದ್ದರು. ಕೆಲವರ ಅಡಚಣೆಯಿಂದ ಗ್ರಾಮದ ತಮ್ಮ ನಿವಾಸದಲ್ಲಿ ತೇರು ಮಾಡಿಸಿ, ದೇವಸ್ಥಾನ ನಿರ್ಮಿಸಿ, ಭಕ್ತರ ಆರಾಧನೆಗೆ ಸುವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾಗಲಿಂಗಪ್ಪ ತಾತನ ಪವಾಡ ದೊಡ್ಡದಿದೆ. ಮಠವೂ ಅಭಿವೃದ್ಧಿ ಹೊಂದುತ್ತಿದೆ. ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ ನಾನಾ ಹೊರ ಜಿಲ್ಲೆಯಿಂದ ಸಾಕಷ್ಟು ಭಕ್ತರು ಆಗಮಿಸಿ, ಇಲ್ಲಿನ ಅಜ್ಜನ ದರ್ಶನದೊಂದಿಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಿದ್ದಾರೆ. ಇಂದಿನ ಆಧುನಿಕ ದಿನದಲ್ಲಿ ಬಡವರ ಬದುಕು ಕಷ್ಟಕರ. ಆದ್ರಿಂದ ಇಂತಹ ಉಚಿತ ಸಾಮೂಹಿಕ ವಿವಾಹದ ಮೂಲಕ ಬಡವರಿಗೆ ಕಂಕಣ ಭಾಗ್ಯ ಕಲ್ಪಿಸಲಾಗುತ್ತಿದೆ. ಈ ಸಾಮೂಹಿಕ ವಿವಾಹದಿಂದ ಬಡವರು ಆರ್ಥಿಕ ಹೊರೆಯಿಂದ ಹೊರ ಬಂದು, ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ನೂತನ ವಧು-ವರರು ಸಹಬಾಳ್ವೆಯೊಂದಿಗೆ ಅನ್ಯೋನ್ಯವಾಗಿ ಬದುಕು ಕಟ್ಟಿಕೊಂಡು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಬಡತನವನ್ನು ದೂರ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕುಂಬಾರ್ ರಾಜಪ್ಪ, ಹೆಚ್.ಗಂಗಾಧರ ಮೆಟ್ರಿ, ನಾಗೇಂದ್ರಪ್ಪ, ನೆಣಕಿ ಗಿರೀಶ, ಹೆಚ್.ಕುಮಾರ, ಉಪ್ಪಾರಹಳ್ಳಿ ಕೊಂಡಪ್ಪ, ಕೆ.ನಾಗಲಿಂಗ, ಪಂಪಾಪತಿ, ಗಾದಿಲಿಂಗ, ಎ.ದೊಡ್ಡನಗೌಡ ಸೇರಿದಂತೆ ಸ್ಥಳೀಯ, ಸುತ್ತಮುತ್ತಲಿನ ಸದ್ಭಕ್ತರು ಪಾಲ್ಗೊಂಡಿದ್ದರು. ನಂತರ ಭಕ್ತರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್



















