
ಬಳ್ಳಾರಿ / ಕಂಪ್ಲಿ : ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್ ಅವರು ಜನಿಸಿದ ನೆನಪಿಗಾಗಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದೊಂದಿಗೆ ಪಟ್ಟಣದಲ್ಲಿ ಬುಧವಾರ ಆಚರಿಸಿದರು.
ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ ಟ್ರಾಕ್ಟರ್‌ನಲ್ಲಿ ಮಕ್ಕಾ-ಮದೀನಾ ಭಾವಚಿತ್ರದ ಭವ್ಯ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಸಿದರು. ಮೆರವಣಿಗೆಯಲ್ಲಿ ಯುವಕರು ನೃತ್ಯ, ಧ್ವಜ ಹಿಡಿದು ಸಂಭ್ರಮಿಸಿದರು.
ಕಂಪ್ಲಿ-ಕೋಟೆಯಿಂದ ಆರಂಭಗೊಂಡ ಮೆರವಣಿಗೆ ಗಂಡುಗಲಿಕುಮಾರ ರಾಮನ ಕೋಟೆ, ಹಳೇ ಪೊಲೀಸ್ ಠಾಣೆ, ನಡುವಲ ಮಸೀದಿ, ಸಂತೆ ಮಾರುಕಟ್ಟೆ, ಸರ್ಕಾರಿ ಆಸ್ಪತ್ರೆ, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್ ಸರ್ಕಲ್, ಗಂಗಾನಗರ, ಜೋಗಿ ಕಾಲುವೆ ಮೂಲಕ ಹಜರತ್ ಬಡೇ ಸಾಹೇಬ್ ದರ್ಗಾದಲ್ಲಿ ಸಮಾವೇಶಗೊಂಡಿತು.
ಭವ್ಯ ಮೆರವಣಿಗೆಗೆ ಮುಸ್ಲಿಂ ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಉರುಫ್ ಅಜಂ ಪಾಷ ಸಾಹೇನ್ ಸಜ್ಜಾದೇ ನಶೀನ್ ದಿವಾನಾ ಖಾನಾ ಕಂಪ್ಲಿ ಇವರು ದಿವ್ಯ ಸಾನಿಧ್ಯದೊಂದಿಗೆ ಚಾಲನೆ ನೀಡಿ ಮಾತನಾಡಿ, ಮಹ್ಮದ್ ಪೈಗಂಬರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು, ಉತ್ತಮ ಬದುಕಿಗೆ ಸಾಕ್ಷಿಯಾಗಬೇಕು. ದಾನ, ಧರ್ಮದ ಮೂಲಕ ಬಡವರ ಸಂಕಷ್ಟಗಳಿಗೆ ದಾರಿದೀಪವಾಗಬೇಕು ಎಂದರು.
ಈ ಸಂದರ್ಭದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯದ್ ಷಾ ಅಬುಲ್ ತುರಾಬ್ ಖಾದ್ರಿ, ಸೈಯದ್ ಷಾ ಚಾಂದ್ ಪಾಷಾ ಸಾಹೇಬ್, ಡಾ.ನೂರ್ ಸಾಹೇಬ್, ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಯು.ಜಹೀರುದ್ದೀನ್, ಉಪಾಧ್ಯಕ್ಷ ಎಂ.ನಾಸೀರ್‌ದ್ದೀನ್, ಪದಾಧಿಕಾರಿಗಳಾದ ನೂರ್, ರಾಜಾ, ಅಂಜುಮನ್-ಎ-ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಮ್(ಲಡ್ಡು), ಈದ್ಗಾ ಕಮಿಟಿ ಅಧ್ಯಕ್ಷ ಎಂ.ಇಸ್ಮಾಯಿಲ್, ಸಮಾಜದ ಮುಖಂಡರಾದ ಮೆಹಮೂದ್, ವಾಹೀದ್, ಜಾಫರ್, ಎಲ್ಲಾ ಮೌಲ್ವಿಗಳು, ಮಸೀದಿಗಳ ಮುತುವಲ್ಲಿಗಳು, ಹಾಫಿಸಾಬ್‌ಗಳು, ಯುವಕರು, ಮಕ್ಕಳು ಸೇರಿದಂತೆ ಸರ್ವ ಸಮಾಜದವರು ಪಾಲ್ಗೊಂಡಿದ್ದರು. ತೋರಣಗಲ್ಲು ಡಿವೈಎಸ್‌ಪಿ ಪ್ರಸಾದ್ ಗೋಖುಲೆ, ಪಿಐ ಕೆ.ಬಿ.ವಾಸುಕುಮಾರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಸ್ತ್ ಏರ್ಪಡಿಸಲಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್




















