ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಗುರು ರಾಘವೇಂದ್ರರ ಪವಾಡಗಳ ಮಹಿಮೆ..!!

ಕಲಿಯುಗದ ಕಾಮದೇನು, ಕಲ್ಪವೃಕ್ಷ ಎಂದು ಕರೆಯಲ್ಪಡುವ ನಡೆದಾಡುವ ದೇವರೆಂದೇ ಖ್ಯಾತಿವೆತ್ತ ಮಂತ್ರಾಲಯದ ಗುರು ಸಾರ್ವಭೌಮರಾದ ಶ್ರೀ ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ ಮಹೋತ್ಸವವು ಇದೇ ತಿಂಗಳು 29, 30 ಹಾಗೂ 31 ನೇ ತಾರೀಖಿನಂದು ಅತ್ಯಂತ ವಿಜೃಂಭಣೆಯಿಂದ, ಭಯ- ಭಕ್ತಿಯೊಂದಿಗೆ ಅದ್ದೂರಿಯಾಗಿ ಜಗತ್ತಿನಾದ್ಯಂತ ಅತ್ಯಂತ ಸಂಭ್ರಮದಿಂದ ನಡೆಯಲಿದೆ. ತನ್ನಿಮಿತ್ತವಾಗಿ ಅವರ ಪವಾಡಗಳು ಹಾಗೂ ಅಪಾರವಾದ ಮಹಿಮೆಯನ್ನು ಎಳೆಎಳೆಯಾಗಿ ತೆರೆದಿಡುವ ಒಂದು ಸಾಂದರ್ಭಿಕ ಲೇಖನ ಇದಾಗಿದೆ.
ರಾಯರ ಮಹಿಮೆ ಎಂತದ್ದು ಎಂದು ಹೇಳಲು ಯಾರಿಗೂ ಕೂಡಾ ಪದಗಳೇ ಸಿಗದಂತಹ ಅತ್ಯದ್ಭುತವಾದ ಪವಾಡಗಳನ್ನು ಮಾಡುತ್ತಾ ಬಂದಿದ್ದಾರೆ ರಾಯರು. ಇಂದು ನಾವೆಲ್ಲರೂ ಕಂಡು- ಕೇಳಿರುವ
ಹಲವಾರು ಪವಾಡಗಳಲ್ಲಿ ಕೆಲವೊಂದನ್ನು ತಮ್ಮ ಮುಂದೆ ಹಂಚಿಕೊಳ್ಳಲು ಬಯಸುತ್ತೇನೆ.
ಶ್ರೀ ರಾಘವೇಂದ್ರ ಸ್ವಾಮಿಗಳ (ರಾಯರ) ಜೀವನದಲ್ಲಿ ಮತ್ತು ಬೃಂದಾವನಸ್ಥರಾದ ಮೇಲೆಯೂ ನಡೆದಿರುವ ಅನೇಕ ಪ್ರಸಿದ್ಧ ಪವಾಡಗಳು ಭಕ್ತರ ವಿಶ್ವಾಸ ಹಾಗೂ ನಂಬಿಕೆಯನ್ನು ಹೆಚ್ಚಿಸುತ್ತಲಿವೆ. ಅವುಗಳಲ್ಲಿ ಕೆಲವು ಪವಾಡಗಳು ಅವರ ಕಾಲದಲ್ಲಿ ನಡೆದದ್ದನ್ನು ನೋಡಿದಾಗ ನಿಜಕ್ಕೂ ನಾವೆಲ್ಲರೂ ದಿಗ್ಭ್ರಾಂತರಾಗುತ್ತೇವೆ. ಅವುಗಳಲ್ಲಿ ಕೆಲವನ್ನು ರಾಯರ ಆರಾಧನೆಯ ಪ್ರಯುಕ್ತ ಸ್ಮರಿಸಿಕೊಂಡು ಪಾವನರಾಗೋಣ.

೧. ಶ್ರೀಗಂಧ ಅಗ್ನಿಯಾಗಿ ಮತ್ತು ತಂಪಾಗಿ ಬದಲಾಗಿದ್ದು-

ಪೂರ್ವಾಶ್ರಮದಲ್ಲಿ ವೆಂಕಟನಾಥರಾಗಿದ್ದಾಗ, ಒಮ್ಮೆ ಸಮಾರಂಭವೊಂದರಲ್ಲಿ ಅತಿಥೇಯರು ಇವರಿಂದ ಶ್ರೀಗಂಧವನ್ನು ತೇಯಿಸಿಕೊಂಡರು. ವೆಂಕಟನಾಥರು ಮಂತ್ರಗಳನ್ನು ಜಪಿಸುತ್ತಾ ಗಂಧ ತೇಯ್ದರು. ಅದನ್ನು ದೇಹಕ್ಕೆ ಹಚ್ಚಿಕೊಂಡ ಅತಿಥಿಗಳಿಗೆ ಅಗ್ನಿಸೂಕ್ತದ ಪ್ರಭಾವದಿಂದ ಮೈಯೆಲ್ಲಾ ಉರಿಯತೊಡಗಿತು. ತಮ್ಮ ತಪ್ಪಿನ ಅರಿವಾಗಿ ಅವರು ಕ್ಷಮೆ ಕೇಳಿದಾಗ, ವೆಂಕಟನಾಥರು ವರುಣ ಮಂತ್ರವನ್ನು ಪಠಿಸಿ ಮತ್ತೆ ಗಂಧ ತೇಯ್ದು ಅವರ ದೇಹದ ಉರಿಯನ್ನು ಶಮನಗೊಳಿಸಿದರು.
೨. ಯಜ್ಞದ ಕುಂಡಕ್ಕೆ ಹಾಕಿದ ರತ್ನಹಾರ ಹಿಂತಿರುಗಿದ್ದು-
ತಂಜಾವೂರಿನ ರಾಜನು ಬರಗಾಲದ ಸಮಯದಲ್ಲಿ ರಾಯರ ಆಶೀರ್ವಾದ ಪಡೆದು ಮಳೆ ತರಿಸಿಕೊಂಡ ನಂತರ, ಕೃತಜ್ಞತೆಯಿಂದ ಬೆಲೆಬಾಳುವ ರತ್ನದ ಹಾರವನ್ನು ಉಡುಗೊರೆಯಾಗಿ ನೀಡಿದನು. ರಾಯರು ಅದನ್ನು ಯಜ್ಞಕುಂಡದ ಅಗ್ನಿಗೆ ಅರ್ಪಿಸಿದರು. ರಾಜನಿಗೆ ಇದರಿಂದ ಬೇಸರವಾದದ್ದನ್ನು ಅರಿತ ರಾಯರು, ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಅಗ್ನಿ ಕುಂಡದಲ್ಲಿ ಕೈಹಾಕಿ ಅದೇ ಹಾರವನ್ನು ಸುರಕ್ಷಿತವಾಗಿ ಹೊರತೆಗೆದು ರಾಜನಿಗೆ ಹಿಂತಿರುಗಿಸಿದರು.
೩. ಮಣ್ಣು ಚಿನ್ನವಾಗಿ ಬದಲಾಗಿದ್ದು (ಶಿಷ್ಯನ ಬಡತನ ನಿವಾರಣೆ)-
ತಮ್ಮ ಶಿಷ್ಯನೊಬ್ಬ ವಿದ್ಯಾಭ್ಯಾಸ ಮುಗಿಸಿ ಮನೆಗೆ ಹೋಗುವಾಗ, ರಾಯರು ತಮ್ಮ ಬಳಿಯಿದ್ದ ಪವಿತ್ರ ಮೃತ್ತಿಕೆಯನ್ನು (ಮಣ್ಣು) ಆತನಿಗೆ ಆಶೀರ್ವದಿಸಿ ನೀಡಿದರು. ಶಿಷ್ಯನು ದಾರಿಯಲ್ಲಿ ರಾತ್ರಿ ತಂಗಿದ ಜಾಗದಲ್ಲಿ ರಾಕ್ಷಸನೊಬ್ಬನ ಕಾಟವಿದ್ದಾಗ, ಈ ಮಣ್ಣನ್ನು ಆತನ ಮೇಲೆ ಎರಚಿದ ತಕ್ಷಣ ರಾಕ್ಷಸನಿಗೆ ಮುಕ್ತಿ ಸಿಕ್ಕಿತು ಮತ್ತು ಮಣ್ಣಿನ ಮೂಟೆ ಅತ್ಯಮೂಲ್ಯ ಚಿನ್ನ-ರತ್ನಗಳಾಗಿ ಮಾರ್ಪಟ್ಟಿತು.
೪. ಸತ್ತ ಮಗುವಿಗೆ ಜೀವ ನೀಡಿದ್ದು-
ಒಮ್ಮೆ ನವಾಬನೊಬ್ಬ ರಾಯರ ಮಹಿಮೆಯನ್ನು ಪರೀಕ್ಷಿಸಲು ಮುಚ್ಚಿದ ತಟ್ಟೆಯಲ್ಲಿ ಮಾಂಸವನ್ನು ತಂದು ಪೂಜೆಗೆ ಇಟ್ಟನು. ರಾಯರು ತಮ್ಮ ಪ್ರೋಕ್ಷಣೆ ನೀರನ್ನು ಅದರ ಮೇಲೆ ಸಿಂಪಡಿಸಿದಾಗ, ಆ ಮಾಂಸವು ತಾಜಾ ಹೂವುಗಳಾಗಿ ಮತ್ತು ಹಣ್ಣುಗಳಾಗಿ ಬದಲಾಯಿತು. ಈ ಪವಾಡವನ್ನು ಕಂಡು ನವಾಬನು ಕ್ಷಮೆ ಯಾಚಿಸಿ ಮಂತ್ರಾಲಯದ ಭೂಮಿಯನ್ನು ಕೊಡುಗೆಯಾಗಿ ನೀಡಿದನು.
೫. ಥಾಮಸ್ ಮುನ್ರೋಗೆ ದರ್ಶನ ನೀಡಿದ್ದು-
ಬ್ರಿಟಿಷ್ ಅಧಿಕಾರಿಯಾಗಿದ್ದ ಥಾಮಸ್ ಮುನ್ರೋ ಮಂತ್ರಾಲಯದ ಮಠದ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಬಂದಾಗ, ಬೃಂದಾವನದಿಂದ ಸ್ವತಃ ರಾಯರು ಹೊರಬಂದು ಮುನ್ರೋಗೆ ಮಾತ್ರ ದರ್ಶನ ನೀಡಿ ಸಂಭಾಷಿಸಿದರು. ಈ ಘಟನೆಯು ಬ್ರಿಟಿಷ್ ಸರಕಾರದ ಅಧಿಕೃತ ‘ಮದ್ರಾಸ್ ಗ್ಯಾಸೇಟಿಯರ್’ ದಾಖಲೆಯಲ್ಲಿದೆ.
೬. ಅಪರಾಹ್ನದಲ್ಲಿ ಅಪ್ಪಣ್ಣಾಚಾರ್ಯರ ಸ್ತೋತ್ರ ಪೂರ್ಣಗೊಂಡಿದ್ದು-
ರಾಯರು ಸಶರೀರ ಬೃಂದಾವನ ಪ್ರವೇಶಿಸುವಾಗ ಅವರ ಪರಮ ಭಕ್ತರಾದ ಅಪ್ಪಣ್ಣಾಚಾರ್ಯರು ತುಂಗಭದ್ರಾ ನದಿ ದಾಟಿ ಓಡಿಬರುತ್ತಾ “ಶ್ರೀ ರಾಘವೇಂದ್ರ ಸ್ತೋತ್ರ” ಪಠಿಸುತ್ತಿದ್ದರು. ಅವರು ಬರುವಷ್ಟರಲ್ಲಿ ಬೃಂದಾವನ ಮುಚ್ಚಲ್ಪಟ್ಟಿತ್ತು. ಸ್ತೋತ್ರದ ಕೊನೆಯ ಸಾಲು “ಸಾಕ್ಷೀ ಹಯಾಸ್ಯೋತ್ರ ಹಿ” ಎಂಬುದನ್ನು ಸ್ವತಃ ಬೃಂದಾವನದ ಒಳಗಿನಿಂದ ರಾಯರೇ ನುಡಿದು ಸ್ತೋತ್ರವನ್ನು ಪೂರ್ಣಗೊಳಿಸಿದರು.
ಈ ಎಲ್ಲಾ ಘಟನೆಗಳು ಆಗ ನಡೆದಿದ್ದನ್ನು ನಾವು ಕೇಳಿ ತಿಳಿದಿದ್ದೇವೆ. ಆದರೆ ಈಗಲೂ‌ ಕೂಡಾ ಇಂತಹ ಸಾವಿರಾರು ಪವಾಡಗಳನ್ನು ರಾಯರು ಮಾಡುತ್ತಲಿದ್ದಾರೆಂದರೆ ಅದು ಭಕ್ತರಿಗೊದಗಿದ ಸರ್ವಶ್ರೇಷ್ಠ ಪುಣ್ಯಪ್ರಾಪ್ತಿಯಾಗಿದೆ. ಅಂತಹ ಕೆಲವು ನಿದರ್ಶನಗಳನ್ನು ನೋಡೋಣ ಬನ್ನಿ..!!


ಇತ್ತೀಚೆಗೆ ಹಾವೇರಿಯ ಒಬ್ಬ ಎಮ್ ಬಿ ಬಿ ಎಸ್ ಯುವತಿ ನಿವೇದಿತಾ ತೀವ್ರತರವಾದ ಆಟೋ ಇಮ್ಯುನೋ ಎಂಬ ಗಂಬೀರ ಕಾಯಿಲೆಗೆ ಒಳಗಾದಾಗ ಸ್ವತಃ ವೈದ್ಯರೇ ಕೈಚೆಲ್ಲಿದಾಗ ಆತಂಕಗೊಳಗಾದ ಪಾಲಕರಿಗೆ ವರವಾಗಿ ಬಂದು ಕಾಪಾಡಿದ್ದು ಶ್ರೀ ಗುರುರಾಘವೇಂದ್ರರು ಎಂಬುದನ್ನು ಮಾದ್ಯಮಗಳಲ್ಲಿ ನಾವು, ನೀವೆಲ್ಲರೂ ಕೇಳಿದ್ದನ್ನು ನೋಡಿದರೆ ರಾಯರು ತಮ್ಮನ್ನು ನಂಬಿದ ಭಕ್ತರಿಗೆ ದಾರಿ ತೋರಿಸುತ್ತಲೇ ಇದ್ದಾರೆ ಎಂಬುದು ಪದೇ ಪದೇ ಜಗಜ್ಜಾಹೀರಾಗುತ್ತಲಿದೆ. ವ್ಹೀಲ್ ಚೇರ್‌ಗೆ ಸೀಮಿತವಾಗಿದ್ದ ನಿವೇದಿತಾ ರಾಯರ ಮೃತ್ತಿಕಾ, ಪ್ರಸಾದ, ತೀರ್ಥ ಹಾಗೂ ಸಂಕಲ್ಪ ಸೇವೆಗಳ ಮೂಲಕ ಆಶ್ಚರ್ಯಕರ ರೀತಿಯಲ್ಲಿ ಗುಣಮುಖಳಾಗಿ ತನ್ನ ಕಾಲಮೇಲೆ ತಾನು ಸ್ವತಂತ್ರಳಾಗಿ ಈಗ ಓಡಾಡುತ್ತಿದ್ದಾಳೆ ಎಂದರೆ ರಾಯರ ಮಹಿಮೆ ಈಗಲೂ ಕೂಡಾ ಪ್ರಭಾವಶಾಲಿಯಾಗಿದೆ ಎಂಬುದು ನಮಗೆಲ್ಲಾ ಸಾಬೀತಾಗಿದೆ.
ಇದು ಯಾವುದೋ ಕಾಲದಲ್ಲಿ ನಡೆದ ಘಟನೆಯಲ್ಲ. ಕೇಲವೇ ಕೆಲವು ದಿನಗಳ ಹಿಂದೆ ನಡೆದ ಈ ಘಟನೆ ರಾಯರ ಸದ್ಭಕ್ತರಲ್ಲಿ ಅಪಾರ ಗೌರವವನ್ನು, ಭಕ್ತಿಯನ್ನು ಮೂಡಿಸಿದೆ. ಹೀಗೆ ಇಂತಹ ಹಲವಾರು ವೈದ್ಯಕೀಯ ಚಿಕಿತ್ಸೆಗೆ ಮೀರಿದ ಕಾಯಿಲೆಗಳನ್ನು ರಾಯರು ಗುಣಪಡಿಸುತ್ತಲೇ ಇದ್ದಾರೆ ಎಂದರೆ ಅವರ ಈ ಮಹಿಮೆಯನ್ನು ನಾವು ಎಷ್ಟು ಕೊಂಡಾಡಿದರೂ‌ ಕಡಿಮೆಯೇ..!!
ಶ್ರೀ ರಾಘವೇಂದ್ರ ಸ್ವಾಮಿಗಳು 1671ರಲ್ಲಿ ಸಜೀವ ಬೃಂದಾವನ ಪ್ರವೇಶ ಮಾಡುವಾಗ “ನನ್ನ ಬೃಂದಾವನದ ಮೂಲಕ ನಾನು ಮುಂದಿನ 700 ವರ್ಷಗಳ ಕಾಲ ನನ್ನ ಭಕ್ತರ ಸಂಕಷ್ಟಗಳನ್ನು ಪರಿಹರಿಸುತ್ತಿರುತ್ತೇನೆ” ಎಂದು ಅಭಯ ನೀಡಿದ್ದರು. ಅದೇ ರೀತಿ, ಇಂದಿಗೂ ದಿನನಿತ್ಯ ಕೋಟ್ಯಾಂತರ ಭಕ್ತರ ಜೀವನದಲ್ಲಿ ಅನೇಕ ಪವಾಡಗಳು ನಡೆಯುತ್ತಲಿವೆ.
ಇತ್ತೀಚಿನ ದಿನಗಳಲ್ಲಿ ನಡೆದ ಹಾಗೂ ಭಕ್ತರು ಅನುಭವಿಸಿದ ಕೆಲವು ಪ್ರಮುಖ ಪವಾಡಗಳು ರಾಯರಲ್ಲಿ ಅಪಾರವಾದ ಭಕ್ತಿಯನ್ನುಂಟು ಮಾಡಿ ಬಾಳಿಗೆ ಬೆಳಕಾಗಿ, ಜೀವನ ಜ್ಯೋತಿಯಾಗಿ ಅವರ ಆಶೀರ್ವಾದವು ಮಾರ್ಪಡುತ್ತಿದೆ.
ಕೊನೆಯ ಹಂತದ ವೈದ್ಯಕೀಯ ಸ್ಥಿತಿಯಲ್ಲಿ ಬದುಕಿ ಬಂದ ಭಕ್ತರು ಇತ್ತೀಚಿನ ವರ್ಷಗಳಲ್ಲಿ ಅನೇಕಾನೇಕರು. ಭಕ್ತರು ಅನುಭವಿಸಿದ ಸಾಮಾನ್ಯವಾದ ಆದರೆ ಅದ್ಭುತವಾದ ಪವಾಡವೆಂದರೆ ವೈದ್ಯಕೀಯ ನಂಬಿಕೆಗೂ ಮೀರಿದ ಚಿಕಿತ್ಸೆ. ‘ಬ್ರೈನ್ ಫೀವರ್’ (ಮಿದುಳಿನ ಜ್ವರ), ಕಠಿಣ ಕೋಮಾ ಸ್ಥಿತಿ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಹಂತದಲ್ಲಿದ್ದ ಭಕ್ತರು, ಮಂತ್ರಾಲಯದ ಮೃತ್ತಿಕೆಯನ್ನು (ಪವಿತ್ರ ಮಣ್ಣು) ನಂಬಿ ನಾಲಿಗೆ ಮೇಲಿಟ್ಟು ಧರಿಸಿದ ನಂತರ ಪೂರ್ಣ ಸುವರ್ಣ ಚೇತರಿಕೆ ಕಂಡ ಘಟನೆಗಳು ಇತ್ತೀಚೆಗೆ ಸಾಕಷ್ಟು ಪ್ರಮಾಣದಲ್ಲಿ ವರದಿಯಾಗಿವೆ.
ಕನಸಿನಲ್ಲಿ ಬಂದು ಅಪಾಯದಿಂದ ಪಾರು ಮಾಡಿದ್ದಕ್ಕೆ ಸಾವಿರಾರು ದೃಷ್ಟಾಂತಗಳಿವೆ.
ರಾಯರು ತಮ್ಮ ಭಕ್ತರು ಎಷ್ಟೇ ದೂರದಲ್ಲಿದ್ದರೂ (ಅಮೆರಿಕಾ, ಆಸ್ಟ್ರೇಲಿಯಾದಂತಹ ವಿದೇಶಗಳಲ್ಲಿದ್ದರೂ) ತಮ್ಮ ಕೃಪೆಯನ್ನು ತೋರಿಸುತ್ತಿದ್ದಾರೆ. ಇತ್ತೀಚೆಗೆ ಪ್ರಕಟವಾದ ಹಲವು ಭಕ್ತರ ಅನುಭವಗಳ ಪ್ರಕಾರ, ಪ್ರಯಾಣ ಅಥವಾ ಉದ್ಯೋಗದ ಬಿಕ್ಕಟ್ಟಿನ ಸಮಯಗಳಲ್ಲಿ ರಾಯರು ವೃದ್ಧ ಶ್ರೀಗಳ ರೂಪದಲ್ಲಿ ಅಥವಾ ಕನಸಿನಲ್ಲಿ ಪ್ರತ್ಯಕ್ಷರಾಗಿ ಒಳ್ಳೆಯ ಸಲಹೆ,ಸೂಚನೆ ನೀಡುವುದರ ಮೂಲಕ ಅನೇಕ ಬಿಕ್ಕಟ್ಟುಗಳಿಗೆ ಪರಿಹಾರ ಒದಗಿಸಿದ್ದಾರೆ.
ಅವರ ಸೂಚನೆಯಂತೆ ಮಾರ್ಗ ಬದಲಿಸಿದಾಗ ಅಥವಾ ಆ ಸಮಯದ ಪ್ರಯಾಣ ರದ್ದುಗೊಳಿಸಿದಾಗ ಸಂಭವಿಸಬಹುದಾಗಿದ್ದ ದೊಡ್ಡ ರಸ್ತೆ ಅಪಘಾತಗಳಿಂದ ಹಾಗೂ ಜೀವಾಪಾಯಗಳಿಂದ ಪಾರಾದ ಅನೇಕ ನೈಜ ಘಟನೆಗಳನ್ನು ಭಕ್ತರು ಈಗಲೂ ಹಂಚಿಕೊಳ್ಳುತ್ತಿದ್ದಾರೆ.
ಕಠಿಣ ಆರ್ಥಿಕ ಹಾಗೂ ಕುಟುಂಬದ ಸಮಸ್ಯೆಗಳು ಬಗೆಹರಿದದ್ದು, ವರ್ಷಾನುಗಟ್ಟಲೆ ಮದುವೆಯಾಗದೆ ನೊಂದಿದ್ದ ಯುವಕ-ಯುವತಿಯರು ಅಥವಾ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆಯ ಹಂತಕ್ಕೆ ತಲುಪಿದ್ದ ಅನೇಕ ಕುಟುಂಬಗಳು ಸಂತಸದಿಂದ ಬದುಕುತ್ತಲಿರುವುದು ರಾಯರ ಉದಾತ್ತ ಮಹಿಮೆಗೆ ಹಿಡಿದ ಕೈಗನ್ನಡಿಯಾಗಿದೆ.

ಬೇರು ಸಮೇತ ಒಣಗಿ ಹೋಗಿದ್ದ ಮರವನ್ನು ಚಿಗುರಿ, ಹಣ್ಣು- ಹಂಪಲಗಳನ್ನು ನೀಡುವಂತೆ ಮಾಡಿದ ರಾಯರ ಪವಾಡವನ್ನು ನೋಡಲು ಎರಡು ಕಣ್ಣು ಸಾಲದು.


5,7,9,11 ಗುರುವಾರಗಳ ಕಾಲ “ಓಂ ಶ್ರೀ ರಾಘವೇಂದ್ರಾಯ ನಮಃ” ಮಂತ್ರವನ್ನು 108 ಬಾರಿ ಜಪಿಸಿ ರಾಯರ ಸೇವೆಯನ್ನು ಶುದ್ಧ ಮನಸ್ಸಿನಿಂದ ಮಾಡಿದಾಗ, ಕೇವಲ ಕೆಲವೇ ತಿಂಗಳುಗಳಲ್ಲಿ ಅವರ ಕಷ್ಟಗಳು ನಿವಾರಣೆಯಾಗಿ ಹೊಸ ದಾರಿ ಕಂಡುಕೊಂಡ ಪವಾಡಗಳು ಈಗಲೂ ನಿರಂತರವಾಗಿ ನಡೆಯುತ್ತಿವೆ.

ರಾಯರ ಪವಾಡದ ಮೂಲ ತತ್ವ :

ರಾಯರು ತಾವೇ ಸ್ವತಃ ಹೇಳಿರುವಂತೆ – “ಯಾರು ಧರ್ಮ ಮತ್ತು ಸತ್ಪಥದಲ್ಲಿ ನಡೆದು, ಭಗವಂತನಲ್ಲಿ ಶರಣಾಗುತ್ತಾರೋ ಅವರಿಗೆ ಯಾವುದೇ ಅಡೆತಡೆಗಳು ಎದುರಾದರೂ ನಾನು ಯಾವ ಮೂಲದಿಂದಲಾದರೂ ಬಂದು ಕಾಪಾಡುತ್ತೇನೆ.” ಎಂಬುದು ಅಕ್ಷರಶಃ ಗೋಚರಿಸುವ ಹಾಗೆ ಸದ್ಭಕ್ತರಲ್ಲಿ ಅಪಾರವಾದ ನಂಬಿಕೆ, ಭಕ್ತಿಭಾವವನ್ನು ಒಡಮೂಡಿಸಿದೆ.
ರಾಯರಿದ್ದಾರೆ ಎಂಬ ಒಂದು ನಂಬಿಕೆಯೇ ಜೀವನದ ಉಸಿರಾಗಬೇಕು. ಆಗ ರಾಯರು ಬಂದು ಖಂಡಿತವಾಗಿಯೂ ತಮ್ಮ ಸದ್ಭಕ್ತರನ್ನು ಕಾಪಾಡುತ್ತಾರೆ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ರಾಯರನ್ನು ಭಕ್ತಿಭಾವದೊಂದಿಗೆ ನೆನೆದು ಅವರ ಕೃಪಾಶೀರ್ವಾದದಿಂದ ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಳ್ಳೋಣ ಬನ್ನಿ..!!!

  • ಶ್ರೀ ಶ್ರೀನಿವಾಸ.ಎನ್.ದೇಸಾಯಿ, ತಲ್ಲೂರ ಶಿಕ್ಷಕರು.
    ಸ. ಮಾ. ಹಿ. ಪ್ರಾ ಶಾಲೆ ವಿದ್ಯಾನಗರ ಕುಷ್ಟಗಿ.
    ಮೊ. ನಂ. – 9845808941.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!