ಸಿರುಗುಪ್ಪ : ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ (ಬಿಜೆಪಿ-ಜೆಡಿಎಸ್) ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ, ಇಲ್ಲಿನ ನಗರದ ಪ್ರಮುಖ ರಸ್ತೆಗಳಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತಾಲೂಕು ಮಂಡಲದ ವತಿಯಿಂದ ಇತ್ತೀಚೆಗೆ ಭವ್ಯ ವಿಜಯೋತ್ಸವ ಆಚರಿಸಲಾಯಿತು.
ಚುನಾವಣೆಯಲ್ಲಿ ಜಯಶೀಲರಾದ ಮೈತ್ರಿಕೂಟದ ಅಭ್ಯರ್ಥಿಗಳಾದ ಶ್ರೀ ಎಸ್. ವಿ. ಸಂಕನೂರು, ಶ್ರೀ ಕೆ. ಎಂ. ಸುರೇಶ, ಶ್ರೀ ಶಶೀಲ್ ನಮೋಶಿ ಹಾಗೂ ಶ್ರೀ ಎ. ಪಿ. ರಂಗನಾಥ್ ಅವರಿಗೆ ಜಿಲ್ಲೆಯ ಮುಖಂಡರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ನಗರದ ಪ್ರಮುಖ ವೃತ್ತದಲ್ಲಿ ಜಮಾಯಿಸಿದ ಪಕ್ಷದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಜಯಘೋಷ ಕೂಗುತ್ತಾ ವಿಜಯದ ಸಂಭ್ರಮವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅವರು, “ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ಕಾರ್ಯಕರ್ತರ ಶ್ರಮ ಹಾಗೂ ಸರ್ಕಾರದ ಜನಪರ ನೀತಿಗಳಿಗೆ ಸಂದ ಜಯವಾಗಿದೆ” ಎಂದರು. ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೀರನಗೌಡರು ಮಾತನಾಡಿ, ಈ ಫಲಿತಾಂಶವು ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖ ಮುಖಂಡರಾದ ಎಂ. ಎಸ್. ಸಿದ್ದಪ್ಪ (ತೆಕ್ಕಲಕೋಟೆ), ನಗರಸಭೆ ಸದಸ್ಯರಾದ ಮೇಕೆಲಿ ವೀರೇಶ್, ಮೋಹನ್ ರೆಡ್ಡಿ, ನಟರಾಜ್, ರಾಮಕೃಷ್ಣ ಬಿ.ಇ., ಅವಿನಾಶ್, ಚಾಗಿಸುಬ್ಬಯ್ಯ ಬಿ.ಇ., ಮಧು, ಸದಾಶಿವ, ಶೇಖರ್ ಗೌಡ ಮಂಡರಿಗೆ, ಕೃಷ್ಣ, ಮುದಿಯಪ್ಪ, ಜಬಿವುಲ್ಲಾ, ರಾಮಕೃಷ್ಣ ಉಪಸ್ಥಿತರಿದ್ದರು.
ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಮಾರೇಶ್, ಗಂಗಾಧರ್, ಶೇಖಪ್ಪ, ಶಿವಕುಮಾರ್, ದೊಡ್ಡನಗೌಡ, ಬಸವರಾಜ್ ಸೇರಿದಂತೆ ಪದಾಧಿಕಾರಿಗಳು, ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಪಕ್ಷದ ಸಕ್ರಿಯ ಕಾರ್ಯಕರ್ತರು ವಿಜಯೋತ್ಸವದ ಮುಂಚೂಣಿಯಲ್ಲಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್




















