
- ಕೇಂದ್ರ ಪರಿಸರ ಸಚಿವಾಲಯದಿಂದ ಗ್ರೀನ್ ಸಿಗ್ನಲ್; 64 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ ಸೃಷ್ಟಿಯ ನಿರೀಕ್ಷೆ.
- ₹50 ಕೋಟಿ ವೆಚ್ಚದಲ್ಲಿ ಎರಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ; ಕೌಶಲ್ಯಾಭಿವೃದ್ಧಿಗೆ ಭಾರಿ ಒತ್ತು.
ಬಳ್ಳಾರಿ:
ಜಿಲ್ಲೆಯ ಕೈಗಾರಿಕಾ ವಲಯದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಿರುವ ಉತ್ತಮ್ ಗಾಲ್ವಾ ಫೆರಸ್ ಲಿಮಿಟೆಡ್ ಸಂಸ್ಥೆಯ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅಂತಿಮ ಹಂತದ ಒಪ್ಪಿಗೆ ದೊರೆತಿದೆ. ಬರೋಬ್ಬರಿ ₹36,000 ಕೋಟಿ ಹೂಡಿಕೆಯ ಈ ಬೃಹತ್ ಯೋಜನೆಯು ಜಿಲ್ಲೆಯ ಸುಮಾರು 4,877 ಎಕರೆ ಪ್ರದೇಶದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಇದರಿಂದ ಸ್ಥಳೀಯವಾಗಿ 64 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.
ಕಾರ್ಖಾನೆ ಸ್ಥಾಪನೆಯ ಜೊತೆಜೊತೆಗೇ ಸ್ಥಳೀಯರ ಹಿತರಕ್ಷಣೆಗಾಗಿ ಕಂಪನಿಯು ತನ್ನ ‘ಕಾರ್ಪೊರೇಟ್ ಪರಿಸರ ಹೊಣೆಗಾರಿಕೆ’ ಅಡಿಯಲ್ಲಿ ಒಟ್ಟು ₹276.72 ಕೋಟಿ ಬೃಹತ್ ಮೊತ್ತವನ್ನು ಸುತ್ತಮುತ್ತಲಿನ ಗ್ರಾಮಗಳ ವಿವಿಧ ಜನಪರ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ನಿರ್ಧರಿಸಿದೆ.
ನಾಲ್ಕು ಗ್ರಾಮಗಳ ಸುಧಾರಣೆಗೆ ₹276.72 ಕೋಟಿ ಪ್ಯಾಕೇಜ್
ಕಾರ್ಖಾನೆಗಾಗಿ ಜಮೀನು ಒದಗಿಸಿರುವ ಬಳ್ಳಾರಿ ಹಾಗೂ ಕಂಪ್ಲಿ ತಾಲೂಕಿನ ಪ್ರಮುಖ ನಾಲ್ಕು ಗ್ರಾಮಗಳಾದ ಕುಡತಿನಿ, ವೇಣಿವೀರಪುರ, ಕೊಳಗಲ್ಲು ಮತ್ತು ಯರ್ರಂಗಳಿಗಿ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಈ ಹಣವನ್ನು ಬಳಸಲಾಗುತ್ತದೆ.
- ಮೂಲಸೌಕರ್ಯ ಮತ್ತು ರಸ್ತೆ: ಈ ಗ್ರಾಮಗಳಲ್ಲಿ ಸುಸಜ್ಜಿತ ಗ್ರಾಮೀಣ ರಸ್ತೆಗಳ ನಿರ್ಮಾಣ, ಕುಡಿಯುವ ನೀರು ಮತ್ತು ಅಗತ್ಯ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
- ಆರೋಗ್ಯಕ್ಕೆ ಭಾರಿ ಕೊಡುಗೆ: ಸ್ಥಳೀಯ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ₹50 ಕೋಟಿ ವೆಚ್ಚದಲ್ಲಿ ಎರಡು ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದು ಕಂಪನಿ ಪ್ರಕಟಿಸಿದೆ.
- ಕೌಶಲ ಅಭಿವೃದ್ಧಿ: ಸ್ಥಳೀಯ ಯುವಕ-ಯುವತಿಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಪೂರಕವಾಗಿ ವಿಶೇಷ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಶೂನ್ಯ ದ್ರವ ತ್ಯಾಜ್ಯ ವಿಸರ್ಜನೆ’ಗೆ ಕೇಂದ್ರದ ಕಟ್ಟುನಿಟ್ಟಿನ ತಾಕೀತು.
ಬಳ್ಳಾರಿ ಜಿಲ್ಲೆಯ ಪರಿಸರ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಪರಿಸರ ಸಚಿವಾಲಯವು ಕಂಪನಿಗೆ ಅತ್ಯಂತ ಕಠಿಣ ಷರತ್ತುಗಳನ್ನು ವಿಧಿಸಿದೆ. ಕಂಪನಿಯು ಕಡ್ಡಾಯವಾಗಿ ಶೂನ್ಯ ದ್ರವ ತ್ಯಾಜ್ಯ ವಿಸರ್ಜನೆ ವ್ಯವಸ್ಥೆಯನ್ನು ಹೊಂದಿರಬೇಕು ಮತ್ತು ಯಾವುದೇ ಕಾರಣಕ್ಕೂ ರಾಸಾಯನಿಕಯುಕ್ತ ನೀರು ಹೊರಗೆ ಹರಿಯದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.
ಜೊತೆಗೆ, ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಕಾರ್ಬನ್ ಹೊರಸೂಸುವಿಕೆಯನ್ನು ನಿಯಂತ್ರಿಸಲು ಕಾರ್ಖಾನೆಯ ಕಾರ್ಯಾಚರಣೆಯಲ್ಲಿ ಕಡ್ಡಾಯವಾಗಿ ಅತ್ಯಾಧುನಿಕ ಹಸಿರು ತಂತ್ರಜ್ಞಾನವನ್ನು ಬಳಸಬೇಕು ಎಂದು ಕೇಂದ್ರ ಸರ್ಕಾರವು ಕಂಪನಿಗೆ ಸ್ಪಷ್ಟವಾಗಿ ತಾಕೀತು ಮಾಡಿದೆ
ವರದಿ : ಜಿಲಾನಸಾಬ್ ಬಡಿಗೇರ್




















