
ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್
ಕಂಪ್ಲಿ: ಕತ್ತಲ ಸರಿಸಿ ಬೆಳಕ ತರುವ, ಕಷ್ಟಗಳು ನೀಗಿ ಹರ್ಷ ತುಂಬುವ ಸೀಮೆ ಹಬ್ಬ ದೀಪಾವಳಿ ಬಂತೆಂದರೆ ಸಾಕು, ನಮ್ಮ ಕಂಪ್ಲಿ ತಾಲೂಕಿನಾದ್ಯಂತ ಸಂಭ್ರಮದ ಹೊನಲೇ ಹರಿಯುತ್ತದೆ. ಹೌದು, ಈ ಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿ ಜೋರಾಗಿಯೇ ತಟ್ಟಿದ್ದರೂ, ಕಂಪ್ಲಿ ಸೀಮೆಯ ಜನರ ಹಬ್ಬದ ಸಡಗರಕ್ಕಂತೂ ಯಾವುದೇ ಕಮ್ಮಿ ಆಗಿಲ್ಲ. “ಬೆಲೆ ಏರಿದರೇನಂತೆ, ವರ್ಷಕ್ಕೊಮ್ಮೆ ಬರೋ ಹಬ್ಬ ಬಿಡೋಕಾಗುತ್ತಾ?” ಎನ್ನುತ್ತಾ ಗ್ರಾಹಕರು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇಡೀ ಪಟ್ಟಣದಲ್ಲಿ ಹಬ್ಬದ ಕಳೆ ಗರಿಗೆದರಿದೆ.
ಪಟಾಕಿ ಮಳಿಗೆಗಳಲ್ಲಿ
ಚಿಣ್ಣರ ಸಡಗರ, ಹಿರಿಯರ ದಂಡು :
ಪಟ್ಟಣದ ವಾಲ್ಮೀಕಿ ವೃತ್ತದ ಬಳಿ ಇರುವ ವಿಶಾಲವಾದ ಮೈದಾನದಲ್ಲಿ ಭಾನುವಾರ ಇಡೀ ದಿನ ಜನವೋ ಜನ, ಹಬ್ಬಕ್ಕೆ ಬಣ್ಣ ಬಣ್ಣದ ಬೆಳಕಿನ ಚಿತ್ತಾರ ಮೂಡಿಸಲು ಇಲ್ಲಿ ಸಾಲು ಸಾಲು ಪಟಾಕಿ ಮಳಿಗೆಗಳನ್ನು ತೆರೆಯಲಾಗಿದ್ದು, ಗ್ರಾಹಕರು ತಂಡೋಪತಂಡವಾಗಿ ಧಾವಿಸುತ್ತಿದ್ದಾರೆ. ಕೈಯಲ್ಲಿ ಪುಟ್ಟ ಮಕ್ಕಳನ್ನು ಹಿಡಿದು, ಕುಟುಂಬ ಸಮೇತ ಬಂದ ಹಿರಿಯರು ತರಹೇವಾರಿ ಪಟಾಕಿಗಳನ್ನು ಚೌಕಾಸಿ ಮಾಡಿ ಆನಂದದಿಂದ ಖರೀದಿಸುತ್ತಿದ್ದ ದೃಶ್ಯ ಮೈದಾನದುದ್ದಕ್ಕೂ ಕಂಡುಬಂತು. ಈ ಬಾರಿ ಪರಿಸರ ಸ್ನೇಹಿ ಹಸಿರು ಪಟಾಕಿಗಳಿಗೂ ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಚಿಣ್ಣರ ಮುಖದಲ್ಲಿ ಹಬ್ಬದ ಖುಷಿ ಎದ್ದು ಕಾಣುತ್ತಿತ್ತು.
ಹೂವು-ಹಣ್ಣಿನ ಮಾರುಕಟ್ಟೆಯಲ್ಲಿ ಹಬ್ಬದ ಸಡಗರ:
ಇನ್ನೊಂದೆಡೆ, ಪಟ್ಟಣದ ಪ್ರಮುಖ ಕೇಂದ್ರಗಳಾದ ಕಡಲು ಮಸೀದಿ ವೃತ್ತ, ಪೇಟೆ ಬಸವೇಶ್ವರ ದೇವಸ್ಥಾನದ ಮುಂಭಾಗ, ಪುರಸಭೆ ಆವರಣ ಹಾಗೂ ಅಂಬೇಡ್ಕರ್ ವೃತ್ತದ ಸುತ್ತಮುತ್ತಲಿನ ಹೂವಿನ ಮಾರುಕಟ್ಟೆಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನಸಂದಣಿ ನೆರೆದಿದೆ. ಮಾರಮ್ಮನ ದೇವಸ್ಥಾನದ ಆಸುಪಾಸಿನ ಗಿಜಿಗುಡುವ ರಸ್ತೆಗಳಲ್ಲಿ ಹೆಣ್ಣುಮಕ್ಕಳು ಸಾಲು ಸಾಲಾಗಿ ನಿಂತು ಧನಲಕ್ಷ್ಮಿ ಪೂಜೆಗೆ ಬೇಕಾದ ಹೂವು, ಹಣ್ಣು, ವೀಳ್ಯದೆಲೆ, ಆಲದ ಎಲೆ ಹಾಗೂ ಪೂಜಾ ಸಾಮಗ್ರಿಗಳನ್ನು ಉತ್ಸಾಹದಿಂದ ಆಯ್ದುಕೊಳ್ಳುತ್ತಿದ್ದಾರೆ. ಬಣ್ಣ ಬಣ್ಣದ ರಂಗೋಲಿ ಪುಡಿ ಹಾಗೂ ಸಾಂಪ್ರದಾಯಿಕ ಮಣ್ಣಿನ ಹಣತೆಗಳ ಮಾರಾಟವೂ ಜೋರಾಗಿದೆ. ಹೊಸ ಬಟ್ಟೆಗಳ ಜವಳಿ ಅಂಗಡಿಗಳ ಮುಂದೂ ಗ್ರಾಹಕರ ಸಾಲು ದಟ್ಟವಾಗಿದೆ.
ಬೆಲೆ ಏರಿಕೆಯ ಚುರುಕು, ಸಂಪ್ರದಾಯದ ಅನಿವಾರ್ಯತೆ:
ಈ ದೀಪಾವಳಿಗೆ ಮಾರುಕಟ್ಟೆಯಲ್ಲಿ ಹೂವು, ಹಣ್ಣು, ದಿನಸಿ ಪದಾರ್ಥಗಳು ಹಾಗೂ ತರಕಾರಿಗಳ ಬೆಲೆ ಆಕಾಶ ಮುಟ್ಟಿದೆ. ಅದರಲ್ಲೂ ಹಬ್ಬದ ಪೂಜೆಗೆ ಅತಿ ಮುಖ್ಯವಾದ ಸೇವಂತಿ, ಕನಕಾಂಬರ, ಮಲ್ಲಿಗೆ ಹಾಗೂ ಚೆಂಡುಹೂವುಗಳ ಬೆಲೆ ಕೇಳಿದರೆ ಗ್ರಾಹಕರು ಒಂದು ಕ್ಷಣ ಬೆಚ್ಚಿಬೀಳುವಂತಾಗಿದೆ. ಸಾಮಾನ್ಯ ದಿನಗಳಿಗಿಂತ ಮೂರು-ನಾಲ್ಕು ಪಟ್ಟು ದರ ಹೆಚ್ಚಾಗಿದ್ದು, ಬಡ ಹಾಗೂ ಮಧ್ಯಮ ವರ್ಗದ ಜೇಬಿಗೆ ಕತ್ತರಿ ಬಿದ್ದಂತಾಗಿದೆ. “ಬೆಲೆ ಏರಿಕೆ ಗ್ರಾಹಕರ ಮನಸ್ಸಿಗೆ ಸ್ವಲ್ಪ ಬೇಸರ ತಂದಿರುವುದು ನಿಜ. ಆದರೆ, ಹಿರಿಯರು ತಂದಿಟ್ಟ ಸಾಂಪ್ರದಾಯಿಕ ಆಚರಣೆಯನ್ನು ಬಿಡಲು ಹೇಗೆ ಸಾಧ್ಯ? ಶಕ್ತ್ಯಾನುಸಾರ ಅಷ್ಟೋ ಇಷ್ಟೋ ಖರೀದಿಸಲೇಬೇಕು” ಎನ್ನುತ್ತಾರೆ ಸ್ಥಳೀಯ ಗ್ರಾಹಕರು.
ವ್ಯಾಪಾರಿಗಳ ಮುಖದಲ್ಲಿ ಮಂದಹಾಸ :
ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಕೊಂಚ ಮಂದಗತಿಯಲ್ಲಿ ಸಾಗಿತ್ತು. ಆದರೆ ಭಾನುವಾರ ರಜೆ ದಿನವಾಗಿದ್ದರಿಂದ ಹಾಗೂ ಹಬ್ಬ ತೀರಾ ಹತ್ತಿರವಿರುವುದರಿಂದ ಮಾರುಕಟ್ಟೆಗೆ ಗ್ರಾಹಕರ ಹರಿವು ದಿಢೀರ್ ಹೆಚ್ಚಾಗಿದೆ. ಇದರಿಂದಾಗಿ ಕಂಪ್ಲಿ ಪಟ್ಟಣದ ಸಣ್ಣ ಹಾಗೂ ದೊಡ್ಡ ವ್ಯಾಪಾರಿಗಳ ಮುಖದಲ್ಲಿ ಕೊನೆಗೂ ಮಂದಹಾಸ ಮೂಡಿದೆ.
ಬೆಲೆ ಏರಿಕೆಯ ಕಹಿಯ ನಡುವೆಯೂ, ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮದ ಸಿಹಿಯೇ ಮೇಲುಗೈ ಸಾಧಿಸಿದೆ. ಕಂಪ್ಲಿ ತಾಲೂಕಿನ ಜನತೆ ಆರ್ಥಿಕ ಸವಾಲುಗಳ ನಡುವೆಯೂ ದೀಪಾವಳಿಯನ್ನು ಅತ್ಯಂತ ಸಡಗರ, ಸೌಹಾರ್ದತೆ ಮತ್ತು ನವೋಲ್ಲಾಸದಿಂದ ಬರಮಾಡಿಕೊಳ್ಳಲು ಸನ್ನದ್ಧರಾಗಿದ್ದಾರೆ.



















