ಬಾಲಕವಿ ತಾನೀಶ್.ಎನ್. ಅವರು ಇಲ್ಲಿನ ಪ್ರತಿಷ್ಠಿತ ‘ಉದಯರವಿ’ ನಿವಾಸದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ಶ್ರೀಮತಿ ತಾರಿಣಿ ಚಿದಾನಂದ ಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಈ ಆತ್ಮೀಯ ಭೇಟಿಯ ಸಂದರ್ಭದಲ್ಲಿ ಬಾಲಕವಿ ತಾನೀಶ್ ಅವರು ತಾವು ರಚಿಸಿರುವ ‘ಮಿನುಗುತಾರೆ’ ಎಂಬ ಚುಟುಕು ಕವನ ಸಂಕಲನವನ್ನು ತಾರಿಣಿ ಚಿದಾನಂದ ಗೌಡ ಅವರಿಗೆ ಪ್ರೀತಿಯಿಂದ ಸಮರ್ಪಿಸಿದರು. ಕೃತಿಯನ್ನು ಸ್ವೀಕರಿಸಿ, ಬಾಲಕವಿಯ ಸಾಹಿತ್ಯಾಸಕ್ತಿಯನ್ನು ಮೆಚ್ಚಿದ ತಾರಿಣಿ ಗೌಡ ಅವರು, ಬಾಲಕವಿಗೆ ಉಜ್ವಲ ಭವಿಷ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಮನಃಪೂರ್ವಕವಾಗಿ ಆಶೀರ್ವದಿಸಿದರು.
“ಕಿರಿಯ ವಯಸ್ಸಿನಲ್ಲೇ ಸಾಹಿತ್ಯದತ್ತ ಆಸಕ್ತಿ ತಳೆದು, ‘ಮಿನುಗುತಾರೆ’ಯಂತಹ ಚುಟುಕು ಕವನ ಸಂಕಲನವನ್ನು ರಚಿಸಿರುವುದು ನಿಜಕ್ಕೂ ಸಂತಸದ ವಿಷಯ. ಬಾಲಕವಿ ತಾನೀಶ್ ಅವರ ಸಾಹಿತ್ಯಿಕ ಪಯಣ ಹೀಗೆಯೇ ಮುಂದುವರಿಯಲಿ. ಕಾವ್ಯ ಕ್ಷೇತ್ರದಲ್ಲಿ ಅವರು ಇನ್ಮುಂದೆ ಎತ್ತರಕ್ಕೆ ಬೆಳೆದು, ನಾಡಿಗೆ ಹೆಮ್ಮೆ ತರಲಿ ಎಂದು ಹಾರೈಸುತ್ತೇನೆ.” ಎಂದರು.
- ಕರುನಾಡ ಕಂದ ಸುದ್ದಿ




















