ಆಕಳು ಮಾರಿ ಕೆಟ್ಟೇನವ್ವ
ಹಾಲು ಸಿಗದಂತಾಯಿತು ಮಕ್ಕಳಿಗವ್ವ
ಅಪ್ಪ ಕೊಟ್ಟ ಬಳುಲಿ ಚೆನ್ನಾಗಿತ್ತವ್ವ
ಮನೆತುಂಬ ಹೈನಿತ್ತು ಸುಖವಿತ್ತವ್ವ
ಅನ್ನ ಹಾಲು ತಪ್ಪಿದ್ದಿಲ್ಲವ್ವ
ರೊಟ್ಟಿಗೆ ಮೊಸರು ಕಡಿಮೆಯಿದ್ದಿಲ್ಲವ್ವ
ಬೆಣ್ಣೆ ಗುಂಡು ಉಂಡಿದ್ನೆವ್ವ
ಹೈನಂದರ ಕನಸಾಗೈತಿ ಈಗವ್ವ
ಆಕಳು ಕರುಗಳು ಮನೆಯಾಗವ್ವ
ಏನು ಚಂದ ಮನೆಗೇ ಬೆಳಕವ್ವ
ಕರುಗಳು ಎತ್ತಾಗಿ ಹೂಡಾಕವ್ವ
ಒಕ್ಕಲುತನ ಚಂದಿತ್ತು ಹೊಲದಾಗವ್ವ
ಆಕಳು ಮಾರಿ ಟಿವಿ ತಂದ್ನೆವ್ವ
ಉದ್ಯೋಗ ಇಲ್ದೆ ಅದರ ಮುಂದೆ ಕುಂತ್ನೆವ್ವ
ಹೈನಿಲ್ಲದೆ ಗಡಿಗೆ ಒಣಿಗೈತವ್ವ
ಎಣ್ಣೆ ಗುಳಿಗೆ ಮನೆಗೆ ಬಂತವ್ವ
ತಂದ ಟಿವಿ ಮಾರಬೇಕಂದ್ನೆವ್ವ
ಅದನ ಕೇಳಾಕ ಯಾರೂ ಬರ್ಲಿಲ್ಲವ್ವ
ಆಕಳಿಲ್ಲದೆ ಬಡವಿ ನಾನಾದ್ನೆವ್ವ
ಆಕಳಿದ್ದರೇ ಮನೆಗೆ ಸಿರಿಯವ್ವ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
( ಕೊಪ್ಪಳ ಜಿಲ್ಲೆ )




















