ಬಳ್ಳಾರಿ / ಕಂಪ್ಲಿ: ಸ್ಥಳೀಯ ಜನರ ಸ್ವಇಚ್ಚೆ ಮೇರೆಗೆ ಪಟ್ಟಣದ ಸೂಕ್ತ ಸ್ಥಳದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಿಸಲಾಗುವುದು. ರೈತರ ಹಿತದೃಷ್ಠಿಯಿಂದ ಮಾಗಾಣಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದು, ಸಾಕಷ್ಟು ಅನುಕೂಲವಾಗುತ್ತಿದೆ ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ಸುಗ್ಗೇನಹಳ್ಳಿ ಗ್ರಾಪಂಯ ಶ್ರೀರಾಮರಂಗಾಪುರ ಗ್ರಾಮದಲ್ಲಿ 2025-26ನೇ ಸಾಲಿನ 5054 ಅಪೆಂಡಿಕ್ಸ್ ಯೋಜನೆಯ ಸುಮಾರು 5 ಕೋಟಿ ವೆಚ್ಚದಲ್ಲಿ ಶ್ರೀರಾಮರಂಗಾಪುರದಿಂದ ಮಾರುತಿಕ್ಯಾಂಪ್ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಲೋಕೋಪಯೋಗಿ ಇಲಾಖೆಯ ಅನುದಾನವನ್ನು ರೈತರ ಮಾಗಾಣಿ ರಸ್ತೆಯ ಅಭಿವೃದ್ಧಿಗೆ ಒದಗಿಸಬೇಕಾಗಿದೆ. ಗ್ಯಾರಂಟಿ ಯೋಜನೆಗಳ ನಡುವೆ ಸಾಕಷ್ಟು ಅನುದಾನಗಳೊಂದಿಗೆ ಕ್ಷೇತ್ರದಲ್ಲಿ 200 ಕಿ.ಮೀ ರಸ್ತೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಇದರಿಂದ ಜನರು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಆದರೆ, ವಿರೋಧ ಪಕ್ಷದವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎರಡು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮೋದಿಪಲ್ಲಿ ಮಂಜುನಾಥ, ವಿ.ನಾರಾಯಣಸ್ವಾಮಿ, ಡಿ.ವೆಂಕಟಸ್ವಾಮಿ, ಚಿನ್ನಿ ಹನುಮಂತ, ಬಿ.ವೆಂಕಟೇಶ, ವೆಂಕಟರಾಮುಡು, ನಾಗಭೂಷಣ, ವೆಂಕಟಪತಿ, ನಾಗೇಶ್ವರರಾವ್, ರಂಗನಾಥರೆಡ್ಡಿ ಸೇರಿದಂತೆ ಇತರರು ಇದ್ದರು.
ಗೋನಾಳ್ : ಹಂಪಾದೇವನಹಳ್ಳಿ ಗ್ರಾಪಂಯ ಗೋನಾಳ್ ಗ್ರಾಮದಲ್ಲಿ ಸುಮಾರು 3 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ ಅಡಿಗಲ್ಲು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಮೋರ್ಚ ಜಿಲ್ಲಾ ಉಪಾಧ್ಯಕ್ಷ ಹೆಚ್.ದೇವಣ್ಣ, ದುರುಗಪ್ಪ, ಚಂದ್ರಶೇಖರ, ಚನ್ನಬಸಪ್ಪ, ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















