ಬೆಳಗಾವಿ:ಅಥಣಿ ಮಹಿಳೆಯರ ಸುರಕ್ಷತೆ ಹಾಗೂ ಸಾರ್ವಜನಿಕರಲ್ಲಿ ಕಾನೂನು ಅರಿವು ಹೆಚ್ಚಿಸುವ ಉದ್ದೇಶದಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ‘ಅಕ್ಕಪಡೆ’ (ಮಹಿಳಾ ಪೊಲೀಸ್ ತಂಡ) ವತಿಯಿಂದ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಕಿರುಕುಳ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಇಂತಹ ಘಟನೆಗಳನ್ನು ತಡೆಯಲು ಹಾಗೂ ಪ್ರಯಾಣಿಕರಲ್ಲಿ ಎಚ್ಚರಿಕೆ ಮೂಡಿಸಲು ಈ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು.
ತುರ್ತು ಪರಿಸ್ಥಿತಿಗಳಲ್ಲಿ ಮಹಿಳೆಯರು 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬಹುದು ಎಂದು ಸಾರ್ವಜನಿಕರಿಗೆ ತಿಳಿಸಲಾಯಿತು. ಜೊತೆಗೆ, ತಮ್ಮ ಲಗೇಜ್ಗಳ ಭದ್ರತೆ ಕಾಪಾಡಿಕೊಳ್ಳುವುದು, ಅಪರಿಚಿತರು ನೀಡುವ ಆಹಾರವನ್ನು ಸ್ವೀಕರಿಸದಿರುವುದು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಭಯವಿಲ್ಲದೆ ಸಂಚರಿಸಬೇಕು. ಯಾವುದೇ ತೊಂದರೆ ಎದುರಾದಲ್ಲಿ ಸಂಕೋಚವಿಲ್ಲದೆ ಅಕ್ಕಪಡೆ ಅಥವಾ ಹತ್ತಿರದ ಪೊಲೀಸ್ ಸಿಬ್ಬಂದಿಯನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಗಳು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಅನೇಕ ಪ್ರಯಾಣಿಕರು ಭಾಗವಹಿಸಿದ್ದರು.
ಅಕ್ಕಪಡೆ ತಂಡದ ಸದಸ್ಯರಾದ ಭೀಮಪ್ಪ ಉಗಾರೆ, ಜ್ಯೋತಿ ಬೆಕ್ಕೇರಿ ಮತ್ತು ಕವಿತಾ ಕಾಡಗೌಡ ಅವರ ನೇತೃತ್ವದಲ್ಲಿ ಈ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವರದಿ ವಿಠ್ಠಲ ಖೋಕಾಟೆ




















