ದಾಂಡೇಲಿ : ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಜಿ+2 ಮನೆಗಳ ಹಂಚಿಕೆ ವಿಳಂಬದ ವಿರುದ್ಧ ಈಗಾಗಲೇ ಭಾರೀ ಪ್ರತಿಭಟನೆ ನಡೆದಿರುವ ಹಿನ್ನೆಲೆ, ಏಪ್ರಿಲ್ 22ರಂದು ಮತ್ತೊಂದು ವಿವಾದ ಉಂಟಾಗಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.
ದಾಂಡೇಲಿಯ ಜಿ+2 ವಸತಿ ಯೋಜನೆ ಪ್ರದೇಶದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗುತ್ತಿರುವ ಸಾಮಗ್ರಿಗಳನ್ನು ಯಾವುದೇ ಸ್ಪಷ್ಟ ಅನುಮತಿ ಇಲ್ಲದೆ ಗುತ್ತಿಗೆದಾರರು ಸ್ಥಳಾಂತರಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಿ+2 ಫಲಾನುಭವಿಗಳು ಹಾಗೂ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ತಕ್ಷಣ ಸ್ಥಳಕ್ಕೆ ಧಾವಿಸಿ ವಿರೋಧ ವ್ಯಕ್ತಪಡಿಸಿದರು.
“ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದರಿಂದ ಮನೆಗಳ ನಿರ್ಮಾಣ ಮತ್ತಷ್ಟು ವಿಳಂಬವಾಗುತ್ತದೆ, ” ಎಂದು ಹೋರಾಟ ಸಮಿತಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಫಲಾನುಭವಿಗಳ ಪ್ರಕಾರ, ಮನೆಗಳ ಹಂಚಿಕೆ ವಿಳಂಬ, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಬ್ಯಾಂಕ್ ಸಾಲ ಸಿಗದ ಸಮಸ್ಯೆಗಳ ನಡುವೆ ಇಂತಹ ಕ್ರಮಗಳು ಮತ್ತಷ್ಟು ಸಂಕಷ್ಟ ಉಂಟುಮಾಡುತ್ತಿವೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಅಕ್ರಮ್ ಖಾನ್, ಉಪಾಧ್ಯಕ್ಷ ಅಶೋಕ್ ಪಾಟೀಲ್, ಮುಜ್ಜಿ ಬಾಯ್ ಚಬ್ಬಿ, ಸಾಹೇಜಾದಿ, ವಿನೋದ್ ಪೊರೆ, ವಸಂತಿ ಜೈನ್, ಶಮಿಮ್ ಕೊರಪಾಲಿ, ನೀಲಾ ಸೇರಿದಂತೆ ಪದಾಧಿಕಾರಿಗಳು, ಫಲಾನುಭವಿಗಳು ಹಾಗೂ ಜೆಡಿಎಸ್ ರಾಜ್ಯ ವಕ್ತಾರ ರೋಷನ್ ಬಾವಾಜಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ, ಏಪ್ರಿಲ್ 8, 2026ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಗ್ರ ಹೋರಾಟ ಸಮಿತಿ ಪದಾಧಿಕಾರಿಗಳು ಹಾಗೂ ಜಿ+2 ಮನೆಗಳ ಫಲಾನುಭವಿಗಳು ಪ್ರತಿಭಟನೆ ನಡೆಸಿದ ವೇಳೆ, ಜಿಲ್ಲಾಧಿಕಾರಿಗಳು ಒಂದು ವಾರದೊಳಗೆ ಭೇಟಿ ಕೊಟ್ಟು ಸಮಸ್ಯೆಗಳ ಕುರಿತು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈವರೆಗೆ ಈಡೇರದಿರುವುದರಿಂದ ಫಲಾನುಭವಿಗಳ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ.
ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು, ಕಾಮಗಾರಿ ಸಂಪೂರ್ಣ ಮುಗಿಯುವವರೆಗೂ ಯಾವುದೇ ಕಟ್ಟಡ ಸಾಮಗ್ರಿಗಳನ್ನು ಸ್ಥಳದಿಂದ ತೆಗೆದುಕೊಂಡು ಹೋಗಬಾರದು ಎಂದು ಒತ್ತಾಯಿಸಿದೆ. ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಸಮಸ್ಯೆಗೆ ಶೀಘ್ರ ಪರಿಹಾರ ಸಿಗದಿದ್ದಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಲಾಗಿದೆ.
ವರದಿ ತೇಜಸ್ ರಾವ್, ದಾಂಡೇಲಿ



















