ಶಿವಮೊಗ್ಗ : ಜಿಲ್ಲೆಯಲ್ಲಿ ಇತ್ತೀಚೆಗೆ ಆದ ಬಿರುಗಾಳಿ ಸಹಿತ ಮಳೆಗೆ ಭದ್ರಾವತಿ ತಾಲ್ಲೂಕು ಹೊಳೆಹೊನ್ನೂರು ಹೋಬಳಿ ಮೈದೊಳಲು, ಮಲ್ಲಿಗೇನಹಳ್ಳಿ, ಗುಡುಮಗಟ್ಟೆ, ಹನುಮಂತಾಪುರ, ಅಶೋಕನಗರ ಇನ್ನೂ ಸುತ್ತಮುತ್ತ ಹಲವು ಗ್ರಾಮಗಳಲ್ಲಿ ಸರಿ ಸುಮಾರು ನೂರಾರು ಎಕರೆ ಅಡಿಕೆ ತೋಟಗಳು ಮತ್ತು ತೆಂಗಿನ ಮರಗಳು ನೆಲಕ್ಕೆ ಉರುಳಿದ್ದು, ರೈತರ ಬದುಕನ್ನು ಅಕ್ಷರಶಃ ಬೀದಿಗೆ ತಂದಿರುತ್ತದೆ.
ಈ ಗ್ರಾಮಗಳಿಗೆ ಮಾಮ್ ಕೋಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಹೆಚ್.ಎಸ್.ಮಹೇಶ್ ಹುಲ್ಕುಳಿ ಮತ್ತು ನಿರ್ದೇಶಕರಾದ ಶ್ರೀ ಕುಬೇಂದ್ರಪ್ಪ, ಶ್ರೀ ಎನ್.ಸತೀಶ್, ಶ್ರೀ ಎಸ್.ಎಂ.ತಿಮ್ಮಪ್ಪ ಶ್ರೀ ನಂದನ್ ಹಸಿರುಮನೆ, ಶ್ರೀ ಮತಿ ಜಯಶ್ರೀ ಕೆ.ಕೆ. ಹಾಗೂ ಶ್ರೀ ಮತಿ ಸಹನಾ ಸುಭಾಷ್ ಇತರರು ಭೇಟಿ ನೀಡಿ ನೊಂದ ರೈತರಿಗೆ ಸಾಂತ್ವಾನ ಹೇಳಿದರು.
ಮಾಮ್ ಕೋಸ್ ಆಡಳಿತ ಮಂಡಳಿ ಸಭೆಯಲ್ಲಿ ಮಾನ್ಯ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ನೊಂದ ರೈತ ಕುಟುಂಬಗಳಿಗೆ ತಾತ್ಕಾಲಿಕವಾಗಿ ಒಂದು ಎಕರೆಗೆ ಕನಿಷ್ಠ ರೂ.ಒಂದು ಲಕ್ಷ ಪರಿಹಾರ ಕೊಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿರ್ಣಯಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ




















