ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ, ವಿಶೇಷವಾಗಿ ಬಂಗಾಳದ ಫಲಿತಾಂಶದ ಬಗ್ಗೆ ಸೋಲು-ಗೆಲುವಿನ ಚರ್ಚೆಗಳು, ಚಿಂತನೆಗಳು ನಡೆಯುತ್ತಿವೆ.
ಈ ಚರ್ಚೆ ಮತ್ತು ಚಿಂತನೆಗಳು ಒಂದು ಸೈದ್ಧಾಂತಿಕ ನೆಲಗಟ್ಟಿನೊಳಗೆ ನಡೆಯಬೇಕು.ಯಾವುದೇ ಒಬ್ಬ ವ್ಯಕ್ತಿಯನ್ನು ಟೀಕೆ ಮಾಡಿ, ಆದರೆ ಅವನನ್ನು ಕೆಟ್ಟ ರೀತಿಯಲ್ಲಿ ಹೀಯಾಳಿಸುವ, ಅವಮಾನಿಸುವ ಪದ್ಧತಿಗೆ ಯಾರೂ ಕೈ ಹಾಕಬಾರದು.
ಗೆಲುವು-ಸೋಲಿನ ಶಿಷ್ಟಾಚಾರ ಏನಾಗಿರಬೇಕು? ಅಂದರೆ,
- ಗೆಲುವಿನಲ್ಲಿ ಅಹಂಕಾರ ಬೇಡ: ಗೆದ್ದವರು “ನಾವೇ ಶ್ರೇಷ್ಠ, ಎದುರಾಳಿ ನಿಕೃಷ್ಟ” ಎಂಬ ಮನೋಭಾವ ತೋರಬಾರದು. ಗೆಲುವು ಸಾಮಾನ್ಯ ಜೀವನ ಘಟನೆ ಎಂದು ನೋಡಬೇಕು. ಅಧಿಕಾರ ಶಾಶ್ವತ ಅಲ್ಲ, ಸೇವೆ ಶಾಶ್ವತ.
- ಸೋಲಿನಲ್ಲಿ ಕಹಿ ಬೇಡ: ಸೋತವರು ವ್ಯವಸ್ಥೆಯನ್ನೇ ದೂರುವುದು, ಟ್ರೋಲ್ ಮಾಡುವುದು ಸರಿಯಲ್ಲ. ವಿಜಯ-ಪರಾಜಯಗಳು ಯಾರ ಜೀವನದಲ್ಲಾದರೂ ಬರುತ್ತವೆ, ಅದು ವ್ಯಕ್ತಿಯ ಮೌಲ್ಯವನ್ನು ಕಡಿಮೆ ಮಾಡುವುದಿಲ್ಲ.
- ವೈಯಕ್ತಿಕ ದಾಳಿ ನಿಲ್ಲಿಸಿ: ಯಾರನ್ನಾದರೂ ಟ್ರೋಲ್ ಮಾಡುವುದರಿಂದ ಸಮಾಜದಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ವಿಶೇಷವಾಗಿ ಮಹಿಳಾ ನಾಯಕರ ಕುರಿತು, ಅವರ ಖಾಸಗಿ ಬದುಕಿನ ಕುರಿತು ಹಗುರವಾಗಿ ಮಾತನಾಡುವುದು ನಮ್ಮ ಸಂಸ್ಕೃತಿಯಲ್ಲ. ಮಹಿಳೆಯರ ಕುರಿತು ಗೌರವ ಕಾಪಾಡುವುದು ನಮ್ಮ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ.
- EVM/ಆಯೋಗದ ದ್ವಂದ್ವ ಬೇಡ: ಗೆದ್ದಾಗ ಎಲ್ಲವೂ ಚುನಾವಣೆ ಆಯೋಗ ಹಾಗೂ ಇವಿಎಂ ಸರಿ ಇದೆ.” ಸೋತಾಗ ಎಲ್ಲವೂ ಚುನಾವಣೆ ಆಯೋಗ ಹಾಗೂ ಇವಿಎಂ ಸರಿ ಇಲ್ಲ” ಎನ್ನುವ ಭೇದ ಭಾವನೆ, ಸ್ವಾರ್ಥ ಮನಸ್ಥಿತಿ, ತೆಗೆದು ಹಾಕಬೇಕು. ಸಂಸ್ಥೆಗಳ ಮೇಲೆ ನಂಬಿಕೆ ಇರಲಿ. ಲೋಪ ಇದ್ದರೆ ಸಾಂವಿಧಾನಿಕ ರೀತಿಯಲ್ಲಿ ಪ್ರಶ್ನಿಸಿ, ರಸ್ತೆಯಲ್ಲಿ ಅಲ್ಲ.
ಶರಣರ ಆಶಯ : ಆರಾಂತು ಸೈರಿಸುವುದೆ ಶಿವಾಚಾರ” – ಸೋಲನ್ನು ಸಹಿಸಿ, ಗೆಲುವಿನಲ್ಲಿ ಬೀಗದೆ ಇರುವುದೇ ನಿಜವಾದ ಶಿವಭಕ್ತಿ. “ಸೋತವಗೆ ಸೋಲುಂಟೆ, ಗೆದ್ದವಗೆ ಗೆಲವುಂಟೆ” – ಚೆನ್ನಬಸವಣ್ಣನ ಈ ವಚನ ಇಂದಿನ ರಾಜಕೀಯಕ್ಕೆ ಕನ್ನಡಿ.
ಕೊನೆಯದಾಗಿ ನಾವು ಕಲಿಯಬೇಕಾದ ಪಾಠ:
ಪರಸ್ಪರ ಗೌರವ ಮತ್ತು ಮಾನವೀಯತೆ ಉಳಿಸಿದಾಗ ಮಾತ್ರ ಒಳ್ಳೆಯ ಸಮಾಜ ನಿರ್ಮಾಣ ಸಾಧ್ಯ.ಚುನಾವಣೆ 5 ವರ್ಷಕ್ಕೊಮ್ಮೆ ಬರುತ್ತೆ, ಆದರೆ ನಾವು ನೆರೆಹೊರೆಯವರು, ಅಣ್ಣ-ತಮ್ಮಂದಿರು ಪ್ರತಿದಿನ ಬದುಕಬೇಕು.ಗೆಲುವು ಮತ್ತು ಸೋಲನ್ನು ಸಮನಾಗಿ ಸ್ವೀಕರಿಸುವಂತಹ ಹೃದಯವಂತಿಕೆ ಎಲ್ಲರದಾಗಬೇಕು. ಗೆದ್ದವರು ವಿನಯದಿಂದ ಆಡಳಿತ ನಡೆಸಲಿ,ಸೋತವರು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡಲಿ.
ಖಂಡಿತವಾಗಿಯೂ ಟ್ರೋಲ್ ಅಲ್ಲ, ಚರ್ಚೆ ಮಾಡಿ. ದ್ವೇಷ ಅಲ್ಲ, ಪ್ರೀತಿ ಹಂಚಿ, ಅಹಂಕಾರ ಅಲ್ಲ, ಸೇವೆ ಮಾಡಿ. ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ತೀರ್ಪುಗಾರರು. ಅವರ ತೀರ್ಪಿಗೆ ತಲೆಬಾಗೋಣ.
ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿದು ಸಾಗೋಣ.
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ್ ಜಿಲ್ಲೆ.




















